
ಮಡಿವಾಳ ಸಮಾಜದವರು ವಿದ್ಯೆ,ಉದ್ಯೋಗ, ಸಾಮಾಜಿಕ ಕ್ಷೇತ್ರದಲ್ಲಿ ಅಭಿವ್ರದ್ದಿ ಸಾಧಿಸುತ್ತಿದ್ದಾರೆ. ಆದರೆ ಎಲ್ಲರು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದು ಲೆಕ್ಕ ಪರಿಶೋಧಕ ದತ್ತಾತ್ರೇಯ ಕೆ ಮಡಿವಾಳ ಅಭಿಪ್ರಾಯಪಟ್ಟರು.
ಪಟ್ಟಣದ ರಾಯಲ್ ಕೇರಿ ಅಂಬೇಡ್ಕರ್ ಸಭಾಭವನದಲ್ಲಿ ರವಿವಾರ ನಡೆದ ತಾಲೂಕಾ ಮಡಿವಾಳರ ಸಂಘದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶ್ರಮದಿಂದ ಕೆಲಸ ಮಾಡಬೇಕು.ಎಲ್ಲಾ ರಿತಿಯಲ್ಲಿಯು ಸಾಧನೆ ಮಾಡಲು ಸಾಧ್ಯ. ಸಮಾಜದಲ್ಲಿ ಸಾಂಘಿಕ ಶಕ್ತಿ ಹೆಚ್ಚಿದೆ. ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಕ ನಾಗೇಶ್ ಮಡಿವಾಳ ಮಾತನಾಡಿ ನಮ್ಮ ಸಮಾಜದ ವೃತ್ತಿ ಇಂದು ಅನಿಶ್ಚಿತತೆಯಿಂದ ಕೂಡಿದೆ. ಇಂದು ಮಡಿವಾಳ ವ್ರತ್ತಿಯನ್ನೇ ನಂಬಿ ಬದುಕಲು ಸಾಧ್ಯವಿಲ್ಲ. ಆಧುನಿಕ ಯಂತ್ರೋಪಕರಣಗಳು ಮತ್ತು ಸ್ಪರ್ಧಾತ್ಮಕತೆ ಈ ವೃತ್ತಿಯ ಮೇಲೆ ಪರಿಣಾಮ ಬೀರಿದೆ. ಸಮಾಜದವರಿಗೆ ಶಿಕ್ಷಣ ನಿಡಬೇಕು. ಶಿಕ್ಷಣ ಪಡೆದು ಉತ್ತಮ ಉದ್ಯೋಗ ಹೊಂದಬೇಕು. ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಪತ್ರಕರ್ತ ನಾಗರಾಜ ನಾಯ್ಕ ಖರ್ವಾ ಮಾತನಾಡಿ ಹಿಂದಿನ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತ ಬಂದಿರುವ ಮಡಿವಾಳ ಸಮಾಜ ಆರ್ಥಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಇನ್ನಷ್ಟು ಅಭಿವ್ರದ್ದಿ ಸಾಧಿಸಬೇಕಿದೆ. ಸರ್ಕಾರದಿಂದ ಈ ಸಮಾಜಕ್ಕೆ ಸಿಗಬೇಕಾದ ಸ್ಥಾನಮಾನ, ಅಭಿವೃದ್ದಿ ಕಾರ್ಯಗಳಿಗೆ ಜನಪ್ರತಿನಿಧಿಗಳು ಧ್ವನಿಯಾಗಬೇಕು ಎಂದರು.
ಎಸ್.ಎಸ್.ಎಲ್.ಸಿಯಲ್ಲಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ದೋಬಿ ವೃತ್ತಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ, ಈಜುಗಾರರಾಗಿ ಹಲವರ ಪ್ರಾಣ ರಕ್ಷಿಸಿದ ರಾಮಕೃಷ್ಣ ಮಡಿವಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕುಮಟಾ ಹೊಲನಗದ್ದೆ ಗ್ರಾ.ಪಂ ಸದಸ್ಯ ರಾಮಾ ಮಡಿವಾಳ, ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮೋಹನ್ ಮಡಿವಾಳ, ತಾಲೂಕಾ ಮಡಿವಾಳರ ಸಂಘದ ಅಧ್ಯಕ್ಷ ನಾಗೇಶ್ ಎಮ್ ಮಡಿವಾಳ, ಉಪಾಧ್ಯಕ್ಷ ಅನಿಲ್ ಎನ್ ಮಡಿವಾಳ. ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಐ.ಜಿ ಗಿಡ್ಡಣ್ಣ ಉಪಸ್ಥಿತರಿದ್ದರು.ನೇಹಾ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪ್ರಶಾಂತ ಮಡಿವಾಳ ಸ್ವಾಗತಿಸಿದರು. ಎಮ್.ಎಸ್ ಮಡಿವಾಳ ವಾರ್ಷಿಕ ವರದಿ ವಾಚಿಸಿದರು. ಉಮೇಶ್ ಮಡಿವಾಳ ನಿರೂಪಿಸಿದರು. ಚಂದ್ರಶೇಖರ್ ಮಡಿವಾಳ ವಂದಿಸಿದರು.

.
Leave a Comment