
ಹಾನಿಯಲ್ಲಿರುವ ಸಾರಿಗೆಇಲಾಖೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಲಾಭದಾಯಕವನ್ನಾಗಿ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೊನ್ನಾವರ ಪಟ್ಟಣದಲ್ಲಿ 4.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಭರವಸೆ ನೀಡಿದರು.

ದುರ್ಗಾಕೇರಿಯ ದಂಡಿನ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿಗಳು ಕೇವಲ ಬಸ್ನಿಲ್ದಾಣ ನಿರ್ಮಿಸಿದ ಮಾತ್ರಕ್ಕೆ ನಮ್ಮ ಜವಾಬ್ಧಾರಿ ಮುಗಿಯಿತು ಎಂದುಕೊಳ್ಳುವುದಿಲ್ಲ. ಇಡೀ ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಏನೇನು ಕೆಲಸಗಳಾಗಬೇಕೋ ಅವನ್ನು ಈ ಜಿಲ್ಲೆಯ ಸಚಿವರು ಹಾಗೂ ಜಿಲ್ಲೆಯವರೇ ಆದ ವಿಧಾನಸಭಾಧ್ಯಕ್ಷರ ಜೊತೆ ನಿಂತು ಸಹಕರಿಸುತ್ತೇನೆ. ನನ್ನ ತವರು ಜಿಲ್ಲೆಯಾದ ಬೆಳಗಾವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇನೋ ಅಷ್ಟೇ ಪ್ರಾಮುಖ್ತೆಯನ್ನು ಉತ್ತರಕನ್ನಡಕ್ಕೂ ನೀಡುತ್ತೇನೆ ಎಂದರು.

ರಾಜ್ಯದಲ್ಲಿ 4 ಸಾವಿರ ಬಸ್ ಬೇಡಿಕೆ ಇದೆ. ರಸ್ತೆ ಸಾರಿಗೆ ಸಂಸ್ಥೆ ಜನರಿಗೆ ಒಳ್ಳೆಯ ಸೇವೆ ಕೊಡುವಂತೆ ಮಾಡುತ್ತೇನೆ. ಇಲೆಕ್ಟ್ರಿಕಲ್ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಸಾರಿಗೆ ನಿಗಮವು ಪ್ರಸ್ತುತ 4 ಸಾವಿರ ಕೋಟಿ ನಷ್ಟದಲ್ಲಿದೆ. ಇದರಿಂದ ಪ್ರತಿ ತಿಂಗಳು ಚಾಲಕರು, ನಿರ್ವಾಹಕರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತಿಂಗಳು ತಿಂಗಳು ಡಿಸೇಲ್ ಬಿಲ್ ಕಟ್ಟಲಾಗುತ್ತಿಲ್ಲ. ಇಲಾಖೆಯಲ್ಲಿ ಎಲ್ಲೆಲ್ಲಿ ಆದಾಯ ಸೋರಿಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದೇನೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ. ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಮುಂದಿನ ಮೂರು ವರ್ಷದಲ್ಲಿ ಲಾಭದ ಮಾರ್ಗಕ್ಕೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡಿದ್ದ ವಾ.ಕ.ರ.ಸಾ. ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್.ಪಾಟೀಲ್ ಅವರು ಮಾತನಾಡಿ ಸಾರಿಗೆ ಸಂಸ್ಥೆಯ ಬಸ್ಗಳು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಎನ್ನುವಂತಾಗಿದೆ. ಇದು ಸರಿಯಲ್ಲ ಪಾಲಕರು, ಪೋಷಕರೂ ಬಸ್ ಹತ್ತುವಂತಾಗಬೇಕು. ಸಾರಿಗೆ ಸಂಸ್ಥೆ ಲಾಬದತ್ತ ಮುಖಮಾಡಿದರೆ ಮತ್ತಷ್ಟು ಅಭಿವೃದ್ಧಿಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಯಾಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ 2 ವರ್ಷಗಳ ಹಿಂದೆ ಹೊನ್ನಾವರ ಬಸ್ ನಿಲ್ದಾಣ ಕಾಮಗಾರಿ ಮಂಜೂರಾತಿ ಕೇವಲ ಕಾಗದ ಪತ್ರಗಳಲ್ಲಿ ಮಂಜೂರಾತಿ ಇತ್ತು. ಇದಕ್ಕೆ ಅನುದಾನ ನೀಡುವಂಗತೆ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಬಳಿ ವಿನಂತಿಸಿದರೂ ಸ್ಪಂದಿಸಲಿಲ್ಲ.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಸ್ಪಂದಿಸಿ ಅನುದಾನ ನೀಡಿದ್ದಾರೆ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಇತ್ತೀಚೆಗೆ ಟೋಲ್ಗೇಟ್ ಸಮಸ್ಯೆಯ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದು ಗೇಟ್ ಆಚೆ ಮತ್ತು ಈಚೆ ಇರುವ ಹಳದಿಪುರ ಮತ್ತು ಧಾರೇಶ್ವರದವರು ಒಂದು ಕಿಲೋಮೀಟರ್ ಕ್ರಮಿಸುವುದಕ್ಕೆ 9 ರುಪಾಯಿ ಕೊಡಬೇಕು ಇದು ಸರ್ಕಾರದ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗಂಭೀರ ಚಿಂತನೆ ನಡೆಯಬೇಕು ಎಂದು ಆಗ್ರಹಿಸಿದರು.
ಸಿ.ಆರ್.ಝಡ್, ಟೋಲ್ ಪ್ಲಾಜಾ, ಅಭಯಾರಣ್ಯ, ಅರಣ್ಯ ಅತಿಕ್ರಮಣ, ಇ ಸ್ವತ್ತು ಸಮಸ್ಯೆಯಿಂದ ಜಿಲ್ಲೆಯ ಜನರು ಹೈರಾಣಾಗಿ ಹೋಗಿದ್ದಾರೆ. ಯಾಕಾದರೂ ಈ ಜಿಲ್ಲೆಯಲ್ಲಿ ಹುಟ್ಟಿದ್ದೇನೋ ಎಂದುಕೊಳ್ಳುವಂತಾಗಿದೆ. ಅಭಿವೃದ್ಧಿಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ ಜಿಲ್ಲೆಯ ಜನಜೀವನವನ್ನು ಎತ್ತರಿಸುವುದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಐಆರ್ಬಿ ಕಂಪನಿಯವರು ಟೋಲ್ ಶುಲ್ಕ 9 ರೂ ವಿಧಿಸುತ್ತಿದ್ದು ಸ್ಥಳೀಯ ವಾಹನಗಳಿಗೆ ಶುಲ್ಕದಿಂದ ವಿನಾಯಿತಿ ಕೊಡಿಸಬೇಕು ಎಂದರು.
ಅಂಕೋಲಾ ಬಸ್ ನಿಲ್ದಾಣದ ನಿಧಾನಗತಿ ಕಾಮಗಾರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರಿಗೆ ಸಚಿವನ್ನು ಕೋರಿದರು.
ವೇದಿಕೆಯಲ್ಲಿ ಜಿಲ್ಲಾಪಂಚಾಯತ ಸದಸ್ಯ ಶಿವಾನಂದ ಹೆಗಡೆ, ಗಜಾನನ ಪೈ, ತಾಲೂಕಪಂಚಾಯತ ಸದಸ್ಯೆ ಲಕ್ಮ್ಷಿ ಗೊಂಡ ವಾ.ಕ.ರ.ಸಾ.ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರ ಟಿ.ಕೆ.ಪಾಲನೇತ್ರ, ಪಟ್ಟಣಪಂಚಾಯತ ಸದಸ್ಯರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಐ.ಹೆಗಡೆ ಸ್ವಾಗತಿಸಿದರು, ನ್ಯೂ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ ನಾಡಗೀತೆ ಹಾಡಿದರು, ಉಪನ್ಯಾಸಕ ಪ್ರಶಾಂತ ಹೆಗಡೆ ನಿರ್ವಹಿಸಿದರು.



Leave a Comment