
ಯಾವುದೇ ರಾಜ್ಯವಿರಲಿ ಇಲ್ಲ ದೇಶವಿರಲಿ ಅದು ತನ್ನದೇ ಆದ,ಕಾನೂನು,ನೆಲೆಗಟ್ಟು,ಭಾಷೆ,ಆಂತರಿಕ ಭದ್ರತೆ,ಸಂಸ್ಕೃತಿಯನ್ನು ಹೊಂದಿರುತ್ತದೆ. ಹಾಗೆಯೆ ಕರ್ನಾಟಕವೂ ಕೂಡ. ಕರ್ನಾಟಕದಲ್ಲಿ ಕನ್ನಡಿಗ ಬಹಳ ಮಟ್ಟಿಗೆ ಭದ್ರವಾಗಿಯೇ ಇದ್ದಾನೆ. ಸೂಕ್ತವಾದ ವಸತಿ,ಊಟ ಎಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗಾವಕಾಶಗಳು ತಕ್ಕಮಟ್ಟಿಗೆ ದೊರೆಯುತ್ತಲೇ ಇದೆ. ಆದರೂ ಇತ್ತೀಚಿನ ದಿನಗಳಲ್ಲಿ ಸ್ಥಳೀಯರಿಗೇ ಉದ್ಯೋಗದಲ್ಲಿ ಸಿಂಹಪಾಲು ಎಂದು ಬೊಬ್ಬೆ ಇಡುತ್ತಿದ್ದಾರೆ. ಹೌದು ಸ್ಥಳೀಯರಿಗೇ ಉದ್ಯೋಗ ನೀಡಬೇಕೆಂಬುದು ನಿರ್ವಿವಾದ. ಆದರೆ ಅದರ ಸಾಧಕ ಬಾಧಕಗಳ ಬಗ್ಗೆ ಕಿಂಚಿತ್ತೂ ಗಮನಹರಿಸಬೇಡವೇ?
ನಮ್ಮ ರಾಜಕಾರಣಿಗಳಿಗೆ ಕಾನೂನಿನ ಪರಿಜ್ಞಾನ,ಸಂವಿಧಾನದ ಆಶಯಗಳು ,ಅದರ ಧ್ಯೇಯೋದ್ದೇಶಗಳ ಅರಿವು ತಿಳುವಳಿಕೆ ನಿಜವಾಗಿಯೂ ಇಲ್ಲವೋ ಅಥವಾ ಗೊತ್ತಿದ್ದೂ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರವೋ ತಿಳಿಯುತ್ತಿಲ್ಲ. ಇಲ್ಲದಿದ್ದರೆ ವಾಸ್ತವವನ್ನು ಪಕ್ಕಕ್ಕಿಟ್ಟು ತಮ್ಮ ರಾಜಕೀಯದ ರಂಗಿನಾಟಕ್ಕೆ ಜನರನ್ನು ಮರುಳುಮಾಡುತ್ತಿದ್ದಾರೋ ,ಒಟ್ಟಿನಲ್ಲಿ ಸ್ಥಳೀಯರಿಗೇ ೧೦೦ ಪ್ರತಿಶತ ಉದ್ಯೋಗ ಎಂದು ದಾರಿ ತಪ್ಪಿಸುತ್ತಿರುವುದಂತೂ ಸುಳ್ಳಲ್ಲ. ಹಾಗಾದರೆ ಖಂಡಿತವಾಗಿಯೂ ಅದರ ಅವಶ್ಯಕತೆ ಇದೆಯೇ . ಇದು ಎಷ್ಟರ ಮಟ್ಟಿಗೆ ಸರಿ . ಬನ್ನಿ ನೋಡೋಣ.

ಭಾರತದಲ್ಲಿ ಈಗಿರುವ ನಿರುದ್ಯೋಗದ ಶೇಕಡಾವಾರು ಪ್ರಮಾಣ ೮. ೨೦(೨೦೧೯ ರ ಆಗಸ್ಟ ಪ್ರಕಾರ). ೨೦೧೭ ರಿಂದ ೨೦೨೦ ರ ವರೆಗಿನ ನಿರುದ್ಯೋಗದ ಪ್ರಮಾಣ ೭. ೩೪ %. ಅದರಲ್ಲಿ ನಮ್ಮ ಕರ್ನಾಟಕದ ಪಾಲು ೬. ೫ ಶೇಕಡಾ. ಇದು ಇಡೀ ಭಾರತದಲ್ಲಿಯೇ ಅತ್ಯಂತ ಕಡಿಮೆ. ಅಂದರೆ ೧೦೦ ಜನರಲ್ಲಿ ಕೇವಲ ೬ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿಲ್ಲ. ಉಳಿದ ೯೪ ಜನರು ಕೆಲಸ ಮಾಡುತ್ತಿದ್ದಾರೆ ನಿಜ. ಆದರೆ ಕರ್ನಾಟಕದಲ್ಲಿಯೇ ಕೆಲಸ ಮಾಡುತ್ತಿದ್ದಾರಾ ಎಂಬುದು ಪ್ರಶ್ನೆ. ಅವರೂ ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯಗಳಲ್ಲಿ ನೆಲೆಸಿರಬಹುದಲ್ಲವೇ? ಈಗ ಮುಖ್ಯ ವಿಷಯಕ್ಕೆ ಬರೋಣ .ಆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಅಲ್ಲಿನ ಸರ್ಕಾರ ನೀವು ಹೊರ ರಾಜ್ಯದವರೆಂದು ಕೆಲಸದಿಂದ ತೆಗೆದು ಹಾಕಿದರೆ? ಇಲ್ಲಿರುವುದು ನಿಜವಾದ ಸಮಸ್ಯೆ. ಭಾರತದಂತಹ ೧೩೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳು ಹೊರಗಿನ ಉದ್ಯೋಗಾರ್ಥಿಗಳಿಗೆ ಬಾಗಿಲು ಮುಚ್ಸಿದರೆ ಹಿಂದುಳಿದಿರುವ ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯವೇ? ಕಾಲಕ್ರಮೇಣ ಅಭಿವೃದ್ಧಿ ಹೊಂದಿದ ರಾಜ್ಯಗಳೂ ಕೂಡ ನಷ್ಟಕ್ಕೆ ಗುರಿಯಾಗಿ ಕೊನೆಗೆ ದೇಶದ ಅರ್ಥವ್ಯವಸ್ಥೆಯೇ ಝರಿಝರಿತವಾಗುತ್ತದೆ. ಒಂದು ಅಂಕಿ ಅಂಶದ ಪ್ರಕಾರ ದೇಶದ ಹತ್ತು ಕೋಟಿ ಕಾರ್ಮಿಕರು ಮತ್ತು ಉದ್ಯೋಗಿಗಳಲ್ಲಿ ೨೦ ಶೇಕಡಾ ಮಂದಿ ವಲಸೆ ಬಂದವರೇ ಆಗಿದ್ದಾರೆ.
ಈ ಸ್ಥಳೀಯ ಉದ್ಯೋಗದ ತಕರಾರು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ,ಅಸ್ಸಾಂ,ಮಹಾರಾಷ್ಟ್ರದಲ್ಲೂ ಜೋರಾಗಿಯೇ ಇದೆ. ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಸ್ಥಳೀಯರಿಗೆ ೮೦ % ಮೀಸಲಾತಿ ಕೊಡುವುದಾಗಿ ಹೇಳಿತ್ತು . ಕೆಲವು ತಿಂಗಳುಗಳ ಹಿಂದೆಯಷ್ಟೇ ಆಂಧ್ರಪ್ರದೇಶ ಸರ್ಕಾರವೂ ಸ್ಥಳೀಯರಿಗೆ ೭೫% ಉದ್ಯೋಗ ನೀಡುವುದಾಗಿ ಭರವಸೆಯನ್ನು ನೀಡಿತ್ತು. ಈ ವಿಷಯದಲ್ಲಿ ಗೋವಾ ,ಮಧ್ಯಪ್ರದೇಶ ರಾಜ್ಯಗಳೂ ಹಿಂದೆ ಬಿದ್ದಿಲ್ಲ . ಇನ್ನು ಕರ್ನಾಟಕವಂತೂ ೨೦೧೬ ರಲ್ಲೇ ಸ್ಥಳೀಯರಿಗೆ ಶೇಕಡಾ ನೂರಕ್ಕೆ ನೂರರಷ್ಟು ಉದ್ಯೋಗ ನೀಡುವಂತೆ ಅಧಿಸೂಚನೆಯನ್ನೂ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಬೀಸಿದ ಚಾಟಿ ಏಟಿನಿಂದ ಆ ಮಸೂದೆಯನ್ನು ಹಿಂದಕ್ಕೆ ಪಡೆಯಿತು. ಅದಕ್ಕಾಗಿಯೇ ಹೇಳಿದ್ದು ರಾಜಕಾರಣಿಗಳಿಗೆ ಸಂವಿಧಾನದ ಗಂಧ ಗಾಳಿಯೂ ಇಲ್ಲದಂತೆ ಕಾಣುತ್ತದೆ ಎಂದು. ಸಂವಿಧಾನದ ೧೯ನೇ ವಿಧಿಯ ಪ್ರಕಾರ ಭಾರತದ ನಾಗರಿಕ ಭಾರತದಲ್ಲಿ ಎಲ್ಲಿ ಬೇಕಾದರೂ ನೆಲೆಸಬಹುದು .ಇನ್ನು ೧೫ ಮತ್ತು ೧೬ ನೇ ವಿಧಿಗಳು ಜನ್ಮಸ್ಥಳದ ಆಧಾರದಲ್ಲಿ ಉದ್ಯೋಗದಲ್ಲಿ ತಾರತಮ್ಯ ಮಾಡಬಾರದೆಂದು ಹೇಳುತ್ತದೆ. ಇದೆ ತರಹದ ಉದ್ಯೋಗಾವಕಾಶದ ತಕರಾರೊಂದನ್ನು ಮುಂಬೈನ ಬ್ಯೂಟಿ ಪಾರ್ಲರ್ ನ ಒಬ್ಬಾಕೆ ಹೂಡಿದ್ದಳು. ಆಗಲೂ ಸುಪ್ರೀಂ ಕೋರ್ಟ್ ಈ ಮೂರು ವಿಧಿಗಳ ಆಧಾರದ ಮೇಲೆಯೇ ತೀರ್ಪನ್ನು ನೀಡಿತ್ತು.
೨೦೦೦ನೆಯ ಇಸವಿಯ ನಂತರ ವಲಸೆ ಹೋಗಿರುವವರ ಸಂಖ್ಯೆ ಜಾಸ್ತಿಯೇ ಆದರೂ ಅವರೆಲ್ಲರೂ ಬೇರೆ ರಾಜ್ಯಗಳಿಗೆ ವಲಸೆ ಹೋಗಿಲ್ಲ. ತಮ್ಮ ತಮ್ಮ ರಾಜ್ಯದಲ್ಲಿಯೇ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.೨೦೦೧ರಿಂದ ೨೦೧೧ರ ಅವಧಿಯಲ್ಲಿ ದೇಶದಲ್ಲಿ ವಲಸೆ ಹೋಗಿರುವವರ ಸಂಖ್ಯೆ ಸರಿ ಸುಮಾರು ೧. ೩ ಕೋಟಿ . ಇನ್ನು ೨೦೧೧ರಿಂದ ೨೦೧೬ರ ವರೆಗೆ ವಲಸೆ ಹೋಗಿರುವವರ ಸಂಖ್ಯೆ ಹತ್ತಿರ ಹತ್ತಿರ ೯೦ ಲಕ್ಷ. ಇನ್ನು ಈ ಅಂಕಿ ಅಂಶಗಳಲ್ಲಿ ಬೇರೆ ರಾಜ್ಯಗಳಿಗೆ ಗುಳೆ ಹೋಗಿರುವವರ ಶೇಕಡಾ ಪ್ರಮಾಣ ೧೦ ರ ಒಳಗೆ ಇದೆ. ಇದು ೨೦೨೦ರ ನಂತರ ಹೆಚ್ಚಾಗಬಹುದಾದರೂ ೨೦ ನ್ನು ದಾಟಲಿಕ್ಕಿಲ್ಲ ಎನ್ನುತ್ತದೆ ವರದಿ. ಈ ವಲಸೆ ಬಂದವರ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆ ೮ % ಮಾತ್ರ.ಈ ವಿಷಯದ ಕುರಿತಾಗಿ ಬೊಬ್ಬಿಡುತ್ತಿರುವ ಮಧ್ಯ ಪ್ರದೇಶದಲ್ಲಿರುವ ವಲಸಿಗರ ಸಂಖ್ಯೆ ಶೇಕಡಾ ಐದಕ್ಕಿಂತಲೂ ಕೆಳಗೆ. . ಉತ್ತರ ಪ್ರದೇಶ,ಬಿಹಾರ,ರಾಜಸ್ಥಾನ ರಾಜ್ಯಗಳಿಂದ ವಲಸೆ ಬರುವ ಹೆಚ್ಚಿನ ಪಾಲು ಜನ ತಮಿಳುನಾಡು ,ಆಂಧ್ರ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಆದರೂ ಅತ್ಯಂತ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸಮಸ್ಯೆ ಇರುವುದು ಕೇರಳದಲ್ಲಿ(ಶೇ. ೧೧.೪). ಕೈಗಾರಿಕೆ,ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಗಳಿಲ್ಲದಿರುವುದೇ ಇದಕ್ಕೆಲ್ಲ ಕಾರಣ. ಹೊಸ ಹೊಸ ಉದ್ಯೋಗ ಸೃಷ್ಟಿಸಲಾಗದ ರಾಜ್ಯ ಸರ್ಕಾರಗಳಿಗೆ ಈ ವಲಸಿಗರ ಸಮಸ್ಯೆ ಶ್ರೀರಕ್ಷೆ ಆಗಿದೆಯೇ ಹೊರತು ಮತ್ತೇನಲ್ಲ..
ಸ್ಥಳೀಯರಿಗೇ ಉದ್ಯೋಗ ಎಂದು ಕಾಯಿದೆ ಮಾಡಿದಾಕ್ಷಣ ನಿರುದ್ಯೋಗ ಸಮಸ್ಯೆಯೇ ಇಲ್ಲವೆಂದಾಗುವುದಿಲ್ಲ. ಬದಲಾಗಿ ಹೆಚ್ಚಾಗುತ್ತದೆ. ತಮಗೆ ಬೇಕಾದ ಅನೂಕೂಲಗಳು,ಕಾರ್ಮಿಕರ ಲಭ್ಯತೆ ಇಲ್ಲವೆಂದ ಮೇಲೆ ಯಾವ ಕಂಪನಿಗಳೂ ಆ ರಾಜ್ಯಕ್ಕೆ ಬರಲು ಒಪ್ಪುವುದಿಲ್ಲ. ಹೊಸ ಹೊಸ ಉದ್ದಿಮೆಗಳು ಸ್ಥಾಪನೆಯಾಗದ ಹೊರತು ಉದ್ಯೋಗವೆಲ್ಲಿ ಹುಟ್ಟೀತು ಅಲ್ಲವೇ?. ಅಷ್ಟೇ ಅಲ್ಲದೆ ದೇಶದ ಆರ್ಥಿಕತೆಗೆ ಬೀಳುವ ನಷ್ಟ ಅಷ್ಟಿಷ್ಟಲ್ಲ. ಅರ್ಥವ್ಯವಸ್ಥೆಯನ್ನೇ ತಲೆಕೆಳಗು ಮಾಡುವ ಸಾಮರ್ಥ್ಯವೂ ಇದಕ್ಕಿದೆ.

ಪ್ಯಾಪಾರ, ಮಾರುಕಟ್ಟೆ, ಸೌಲಭ್ಯವಿರುವ ರಾಜ್ಯಗಳು ಸ್ವಾಭಾವಿಕವಾಗಿಯೇ ಉದ್ದಿಮೆ,ಕೈಗಾರಿಕೆಗಳನ್ನು ಸೆಳೆಯುತ್ತದೆ. ಉದ್ಯೋಗಾವಕಾಶಗಳು ಹೆಚ್ಚುತ್ತದೆ. ಈ ವಾಸ್ತವವನ್ನು ಸ್ವಲ್ಪ ಅವಲೋಕಿಸಿದರೆ ಮಾತ್ರ ಸ್ಥಳೀಯರಿಗೆ ಉದ್ಯೋಗ ಎಂಬ ನೀತಿಯಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆ ಕಾನೂನು ತರುವುದು ಅಷ್ಟು ಸುಲಭದ ಮಾತೂ ಅಲ್ಲ. ಆದ್ದರಿಂದಲೇ ಆಂಧ್ರಪ್ರದೇಶ ಸರ್ಕಾರ ಕಾರ್ಖಾನೆ,ಗಣಿಗಳು,ಫಾರ್ಮಾಕಂಪನಿಗಳನ್ನು ಈ ಕಾಯ್ದೆಯಿಂದ ಕೈಬಿಟ್ಟಿರುವುದು. ಮುಂಬರುವ ದಿನಗಳಲ್ಲಿ ಐಟಿ ಕ್ಷೇತ್ರವನ್ನೂ ಇದರಿಂದ ಹೊರಗಿಡಬೇಕಾದೀತು. ಇದ್ದ ಉದ್ಯೋಗಗಳಿಗೂ ಎಳ್ಳು ನೀರು ಬಿಡಬೇಕಾದೀತು. ಇದ್ದ ಉದ್ಯೋಗಗಳೇ ಕಿತ್ತುಕೊಂಡು ಹೋಗುತ್ತಿರುವಾಗ ಇನ್ನು ಹೊಸ ಉದ್ಯಮದ ಮಾತೆಲ್ಲಿ. ಐರೋಪ್ಯ ಒಕ್ಕೂಟದಿಂದ ಹೊರಬಂದ ಬ್ರಿಟನ್ಗೆ ಮುಂದೆ ಕಾದಿರುವ ಸಮಸ್ಯೆಯೂ ಇದೇ. ಯಾಕೆಂದರೆ ದೆಹಲಿ ಯಲ್ಲಿ ೪೦ ಶೇಕಡಾ ಮಂದಿ, ಮುಂಬೈನಲ್ಲಿ ೨೪ ಶೇಕಡಾ ಮಂದಿ, ಬೆಂಗಳೂರು ಚೆನ್ನೈನಲ್ಲಿ ೧೫ ಶೇಕಡಾ ಮಂದಿ ಹೊರಗಿನವರೇ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸ್ಥಳೀಯರಿಗೇ ಉದ್ಯೋಗ ಎಂದು ಬೊಬ್ಬೆ ಹೊಡೆಯುವ ಬದಲು ಉತ್ತಮ ಕೌಶಲ್ಯಾಭಿವೃದ್ಡಿ ಯೋಜನೆಗಳನ್ನು ತಂದಲ್ಲಿ ನಿರುದ್ಯೋಗ ಸಮಸ್ಯೆ ದೂರವಾದೀತು. ಆನಿಟ್ಟಿನಲ್ಲಿ ಕೆಲಸಗಳಾಗಲಿ ಎಂದು ಆಶಿಸೋಣ . ಬನ್ನಿ ಬದಲಾಗೋಣ .ಬದಲಾಯಿಸೋಣ .
ಬದುಕು ಜಟಕಾಬಂಡಿ ವಿಧಿಯದರ ಸಾಹೇಬ\
ಕುದುರೆ ನೀಂ ಆವಾ ಪೀಲದಂತೆ ಪಯಣಿಗರು\
ಮದುವೆಗೋ ಮಸಣಕೋ ಹೋಗೆಂದ ಕಡೆಹೋಗು\
ಪದಕುಸಿಯೇ ನೆಲವಿಹುದು -ಮಂಕುತಿಮ್ಮ\
Leave a Comment