
ಜನರಿಗಾಗಿ ಮಾಡುವ ಯೋಜನೆ – ಜನರಿಂದ ಶಾಪ ಪಡೆಯಬಾರದು- ಆರ್.ವಿ.ದೇಶಪಾಂಡೆ
ಜನರಿಂದ ವ್ಯಾಪಕ ದೂರು- ಕೆಲಸ ನಿರ್ವಹಿಸುವ ರೀತಿ ಸರಿಯಿಲ್ಲ- ದೇಶಪಾಂಡೆ ಅಸಮಾಧಾನ
ಹಳಿಯಾಳ:- ಜನರಿಗಾಗಿಯೇ ಮಾಡುವ ಯೋಜನೆಗಳ ಕಾಮಗಾರಿ ಮಾಡುವಲ್ಲಿ ಜನರ ಆಶೀರ್ವಾದ ಬೇಕು ಹೊರತು ಅವರಿಂದ ವಿನಾಃಕಾರಣ ಶಾಪ ಪಡೆಯಬಾರದು. ಕಳೆದ 2 ತಿಂಗಳಲ್ಲೇ ಒಳಚರಂಡಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಜನರು ಆಕ್ರೋಶ ಹೊರಹಾಕುತ್ತಿರುವ ಕಾರಣ ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಿ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಮಧ್ಯಾಹ್ನ ನಡೆಸಿದ ಹಳಿಯಾಳ ಮತ್ತು ದಾಂಡೇಲಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪ್ರಗತಿ ಪರಿಶೀಲನಾ ವಿಶೇಷ ಸಭೆಯಲ್ಲಿ ಅವರು ಪ್ರಗತಿ ಪರಿಶೀಲಿಸಿದರು.
ಒಳಚರಂಡಿ ಕಾಮಗಾರಿಯಿಂದ ಹಾಳಾದ ರಸ್ತೆ ದುರಸ್ಥಿಗಾಗಿ ಹಳಿಯಾಳ ಹಾಗೂ ದಾಂಡೇಲಿಗೆ ಸುಮಾರು ಅಂದಾಜು 30 ಕೋಟಿ ಹಣ ಬೇಕಾಗುತ್ತದೆ ಎನ್ನುವ ವಿಷಯ, ರಸ್ತೆಗಳ ದುರಸ್ಥಿಗೆ ಹೆಚ್ಚುವರಿ ಹಣ ಬೇಕಾಗುವುದು ಕಾರಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಬೇಡಿಕೆ ಇಡಬೇಕಾಗುವ ಬಗ್ಗೆ, ಜೆಸಿಬಿಯಿಂದ ರಸ್ತೆಗಳು ಅಗೆಯುವ ಬದಲು ಪರ್ಯಾಯ ಸಾಧನ ಬಳಸುವ ಬಗ್ಗೆ, ಪೈಪ ಅಳವಡಿಸಿದ ಬಳಿಕ ತಕ್ಷಣ ಅದನ್ನು ಮುಚ್ಚಿ ಅಲ್ಲಿ ದುರಸ್ಥಿ ಕಾರ್ಯ ನಡೆಸಿ ಧೂಳು ಹಾರದಂತೆ ಕ್ರಮ ಕೈಗೊಳ್ಳುವ ಬಗ್ಗೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಯಿತು.
ಅಲ್ಲದೇ ಗುತ್ತಿಗೆ ಪಡೆದಾಗ 53 ಕೀಮಿ ಇತ್ತು ಇಂದು 61 ಕೀಮಿ ಅಂದರೇ 8 ಕೀಮಿ ಹೆಚ್ಚಾಗಿದ್ದು ಲೆಔಟಗಳ ಸಂಖ್ಯೆ ಹೆಚ್ಚಾಗಿದೆ ಇಲ್ಲಿ ಪಂಪಹೌಸಗಳು ಹೆಚ್ಚಿಗೆ ಮಾಡಬೇಕಿದ್ದು 3 ಕೋಟಿಗೂ ಅಧಿಕ ಹಣ ಹೆಚ್ಚುವರಿ ತಗಲುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉತ್ತರ ವಿಭಾಗ ಮುಖ್ಯ ಅಭಿಯಂತರ ಚಾಮರಾಜ ಗೌಡ ಮಾಹಿತಿ ನೀಡಿದರು.

ಹಳಿಯಾಳ ಮತ್ತು ದಾಂಡೇಲಿ ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವವರ ಕೆಲಸ ಮಾಡುವ ರೀತಿ ಸರಿಯಿಲ್ಲ ಎಂದು ಅಸಮಾಧಾನ ಹೊರಹಾಕಿದ ಶಾಸಕ ಆರ್.ವಿ.ದೇಶಪಾಂಡೆ ಅವರು ಇಂತಹ ಕಾಮಗಾರಿಗಳು ನಡೆಯುವಾಗ ಸ್ವಲ್ಪ ತೊಂದರೆ ಆಗುತ್ತದೆ ಆದರೇ ನಿರಂತರ ತೊಂದರೆ, ಸಮಸ್ಯೆಗಳು ಆಗಬಾರದು ಅಲ್ಲದೇ ಜನರ ದೂರು ಕಡಿಮೆ ಇರಬೇಕು ಹೊರತು ದೂರುಗಳೇ ಆಗಬಾರದು ಎಂದು ಸಲಹೆ ನೀಡಿದರು.
ಒಳಚರಂಡಿ ಕಾಮಗಾರಿಯು ದೊಡ್ಡ ಮೊತ್ತದ ಯೋಜನೆಯಾಗಿದ್ದು ತೀರಾ ಜಾಗೃತೆಯಿಂದ ಕೆಲಸ ಮಾಡುವಂತೆ ಸೂಚಿಸಿದ ದೇಶಪಾಂಡೆ ಸಂಬಂಧಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರವಾರ ಉಪವಿಭಾಗ ಮತ್ತು ಹಳಿಯಾಳ ಪುರಸಭೆಯವರು ಮೇಲಿಂದ ಮೇಲೆ ಕಾಮಗಾರಿ ಪರಿಶೀಲನೆ ನಡೆಸುತ್ತಿರಬೇಕು. ಕೆಲಸದ ಬಗ್ಗೆ ಕಾಳಜಿ ಬೇಕು.
ವೀಕ್ಷಕರ ಪುಸ್ತಕವೊಂದನ್ನು ಮಾಡಿ ಕಾಮಗಾರಿ ನಡೆಯುವ ಸ್ಥಳಗಳಿಗೆ ಅನಿರೀಕ್ಷಿತವಾದ ಭೇಟಿಗಳನ್ನು ನೀಡಿ ಕಾಮಗಾರಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ ಇದನ್ನು ದಾಖಲೆ ಮಾಡಿ ಇಡಬೇಕೆಂದು ಶಾಸಕರು ಸೂಚಿಸಿದರು.
ಈಗಾಗಲೇ ಪೈಪಲೈನ್ ಅಳವಡಿಕೆಗಾಗಿ ಅಗೆದಿರುವ ರಸ್ತೆಗಳನ್ನು ಸಮತಟ್ಟು ಮಾಡಿ ಅಲ್ಲಿ ಧೂಳು ಹಾರದಂತೆ ಹಾಗೂ ಸಂಚಾರಕ್ಕೆ ತೊಂದರೆ ಆಗದಂತೆ ಹಾಳಾದ ರಸ್ತೆಗಳನ್ನು ಸರಿಪಡಿಸುವಂತೆ ಹೇಳಿದ ದೇಶಪಾಂಡೆ ರಸ್ತೆ ದುರಸ್ಥಿ ಕಾರ್ಯಗಳು ಬೇಗ ಆಗಬೇಕು. ಜನರನ್ನು ಹೆಚ್ಚಿಗೆ ಬಳಸಿ ಜನರಿಂದ ಮತ್ತೇ ದೂರುಗಳು ಬರದಂತೆ ಅಚ್ಚುಕಟ್ಟಾಗಿ ಗುಣಮಟ್ಟದ ಕೆಲಸ ಮಾಡುವಂತೆ ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರವಾರ ಉಪವಿಭಾಗದ ಸಹಾಯಕ ಅಭಿಯಂತರ ತಾನಾಜಿ ಕಾಳಗಿನಕರ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ದೇಶಪಾಂಡೆ ಅವರು ಹಳಿಯಾಳ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕು. ಕೆಲಸದ ಮೇಲೆ ಶೃದ್ದೆ ಇರಬೇಕು. ನಿಮ್ಮ ಬಗ್ಗೆ ದೂರುಗಳು ಬಂದಿವೆ ಕೆಲಸ ಮಾಡಲು ಆಗದಿದ್ದರೇ ಹೇಳಿ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಕೆಲಸದಲ್ಲಿ ನಿರಾಸಕ್ತಿ ತೊರಿದರೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೂ ಒಳಚರಂಡಿಗೆ ಮನೆಯ ಒಳಗಡೆಯಿಂದ ಹೊರಗೆ ಚೆಂಬರ್ ವರೆಗೆ ಪೈಪಲೈನ್ ಕನೆಕ್ಷನ್ಗೆ ಒಂದು ಸಾವಿರ ರೂ. ತಗಲುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾಹಿತಿ ನೀಡುತ್ತಿದ್ದಂತೆ ಮಾಧ್ಯಮದವರು ಮಧ್ಯ ಪ್ರವೇಶಿಸಿ ಸರಿಯಾದ ಮಾಹಿತಿ ನೀಡುವಂತೆ ಆಗ್ರಹಿಸಿದರು. ಆದರೂ ಸಹಿತ ಮನೆಯ ಒಳಗಡೆಯಿಂದ ಹೊರಗೆ ಪೈಪಜೊಡಣೆಗೆ ಒಂದು ಸಾವಿರ ಖರ್ಚು ತಗಲುತ್ತದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದು ಹಳಿಯಾಳ ಜನರ ಪ್ರಕಾರ ಪ್ರತಿ ಮನೆಗೆ ಕಡಿಮೆ ಎಂದರು 20ಸಾವಿರಕ್ಕೂ ಹೆಚ್ಚು ವೆಚ್ಚ ತಗುಲುತ್ತದೆ ಆದರೇ ಚೌಗಲೆ ಅವರ ಪ್ರಕಾರ ಒಂದು ಸಾವಿರ ಇದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟಣೆ ದೊರೆಯಬೇಕಿದೆ.
ಸಭೆಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಎಇಇ ಸುರೇಶ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಸುಪ್ರದಾ ಕಂಪೆನಿಯ ಬಿಎಮ್ ಶೆಟ್ಟಿ ಇತರರು ಇದ್ದರು.

Improper management of UGD project…