ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣ ಸಮೀಪದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿಯ ಮಧ್ಯ ಭಾಗದಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿರುವ ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳೆಗುಳೆ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ಭೆಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಹೃದಯಭಾಗದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿಖಾನೆಯ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೆ ಮೊದಲ ಬಾರಿಗೆ ಇಲ್ಲಿಗೆ ತೆರಳಿ ತುರ್ತು ಪರಿಶೀಲನೆ ಮಾಡಿ ಬಂದಿದ್ದಾರೆ.
ಅಲ್ಲದೇ ಮಂಗಳವಾರ ಕಸಾಯಿಖಾನೆ ಬಾಧಿತ ಪ್ರದೇಶದ ಮೇದಾರಗಲ್ಲಿಯ ಜನತೆ, ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮೇದಾರ ಸಮಾಜ, ಗೊಂಧಳಿ ಸಮಾಜ ಸೇರಿದಂತೆ ಅನೇಕರು ಮಂಗಳವಾರ ತಹಶೀಲ್ದಾರ್, ಪುರಸಭೆಗೆ ಹಾಗೂ ಹಳಿಯಾಳ ಪೋಲಿಸ್ ಠಾಣೆಗೂ ಮನವಿ ಸಲ್ಲಿಸಿದ್ದರು.

ಮನವಿಯಲ್ಲಿ ಕೊರೊನಾ(ಕೋವಿಡ್-19) ಮಾರಕ ಸಾಂಕ್ರಾಮಿಕ ರೋಗ ಸೇರಿದಂತೆ ಮಲೆರಿಯಾ, ಕಾಲರಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿಜ್ವರ ಸೇರಿದಂತೆ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದು ಕೇಳಿ ಬರುತ್ತಿದೆ. ಆದರೇ ರೋಗರುಜಿನಗಳ ಹರಡುವ ತಾಣವಾಗಿರುವ ಹಳಿಯಾಳದ ಅನಧಿಕೃತ ಕಸಾಯಿಖಾನೆ ಮಾತ್ರ ತನ್ನ ಕಾರ್ಯವನ್ನು ಯಾವುದೇ ಆತಂಕವಿಲ್ಲದೇ ನಡೆಸುತ್ತಿದ್ದು ಇದನ್ನು ಕೂಡಲೇ ತೆರವುಗೊಳಿಸಬೇಕೆಂದು ಲಿಖಿತ ಮನವಿಯನ್ನು ಸಲ್ಲಿಸಿ “ಕಡಲವಾಣಿ” ಪತ್ರಿಕೆಯ ವರದಿಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಮೇಶ ಕದಂ, ಪರಿಸರ ಅಭಿಯಂತರರಾದ ದರ್ಶಿತಾ, ಪೋಲಿಸ್ ಇಲಾಖೆಯವರು ಅಕ್ರಮ ಕಸಾಯಿಖಾನೆ(ಗೋವಧಾಲಯ) ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಸ್ವಚ್ಚತೆ ಇದೆಯೋ ಇಲ್ಲವೋ, ಸರ್ಕಾರದ ನಿಯಮಗಳನ್ನು ಪಾಲಿಸಲಾಗುತ್ತಿದೆಯೋ ಇಲ್ಲವೋ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೇದಾರಗಲ್ಲಿಯ ಬಾಧಿತ ಪ್ರದೇಶದ ಕೆಲವರು ಕಸಾಯಿಖಾನೆಯಿಂದ ಆಗುತ್ತಿರುವ ಸಮಸ್ಯೆಗಳ ಕುರಿತು, ಜನಗಳ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.
ಕೇವಲ 10 ರಿಂದ 15 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ ಮಾಸ್ಕ ಧರಿಸದೆ ಬಂದಿದ್ದ ಅಧಿಕಾರಿಗಳು ಇಲ್ಲಿಯ ಪರಿಸರದ ದುರ್ನಾತಕ್ಕೆ ಅಲ್ಲಿ ನಿಲ್ಲಲು ಆಗದೆ ಬೇಗನೆ ಕಾಲ್ಕಿತ್ತರು.

ನಂತರ ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಕಸಾಯಿಖಾನೆಯನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು. ಸದ್ಯ ಇರುವ ಕಸಾಯಿಖಾನೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಗೋವಧಾಲಯ ನಡೆಸಲು ಇರುವ ಸರ್ಕಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಶು ವೈದ್ಯಾಧಿಕಾರಿಗಳು ಮಾಂಸಕ್ಕಾಗಿ ಕಡಿಯುವ ಜಾನುವಾರು ಆರೋಗ್ಯವಾಗಿದೆಯೇ ಎಂದು ವೈದ್ಯಕೀಯ ಪರಿಶೀಲನೆ ನಡೆಸಬೇಕು. ಕಡಿದ ಬಳಿಕ ಮಾಂಸವು ಸೇವನೆಗೆ ಉತ್ತಮವೇ ಎಂಬ ಬಗ್ಗೆಯೂ ಪರೀಕ್ಷಿಸಿದ ಬಳಿಕವೇ ಅದನ್ನು ಮಾರಾಟ ಮಾಡಬೇಕು ಸೇರಿದಂತೆ ಹಲವು ಮಹತ್ವದ ಸೂಚನೆಗಳನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಅಧಿಕಾರಿಗಳಿಗೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಕಡಲವಾಣಿಯೊಂದಿಗೆ ಮಾತನಾಡಿ ಇಲ್ಲಿರುವ ಪುರಸಭೆ ಮಾಲಿಕತ್ವದ ಕಟ್ಟಡವನ್ನು ತೆರವುಗೊಳಿಸಲು ಅನುಮತಿಗೆ ಕೊರಿ ಈಗಾಗಲೇ ಲೋಕೊಪಯೋಗಿ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ. ಇಲ್ಲಿ ಸ್ವಚ್ಚತೆಯನ್ನು ಕಾಪಾಡಲು ಸೂಚಿಸಲಾಗಿದೆ ಅಲ್ಲದೇ ಶೀಘ್ರದಲ್ಲಿಯೇ ಕಸಾಯಿಖಾನೆ ಸ್ಥಳಾಂತರ ಪ್ರಕ್ರಿಯೆಯು ನಡೆಯಲಿದೆ ಎಂದರು.
ಅಲ್ಲದೇ ಬುಧವಾರ ತಾಲೂಕಾ ಆರೋಗ್ಯಾಧಿಕಾರಿ ಡಾ.ರಮೇಶ ಕದಂ ಅವರು ಕಸಾಯಿಖಾನೆಯ ಪರಿಸರ ಪರಿಶೀಲಿಸಿದ್ದಾರೆ. ಸ್ವಚ್ಚತೆಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಹಶೀಲ್ದಾರ್ ಹಾಗೂ ಪುರಸಭೆಗೆ ವರದಿ ನೀಡಲಿದ್ದು ಆ ಬಳಿಕ ಕಾನೂನಿನಂತೆ ಕ್ರಮ ಜರುಗಿಸಲಾಗುವುದು ಎಂದು ಕೇಶವ ಚೌಗಲೆ ತಿಳಿಸಿದರು. ಅಲ್ಲದೇ ಕೆಲಸದ ಒತ್ತಡದಲ್ಲಿ ಸ್ಥಳಕ್ಕೆ ಭೇಟಿ ನೀಡಲು ಬರುವುದನ್ನು ಮಾಧ್ಯಮದವರಿಗೆ ಹಾಗೂ ಅರ್ಜಿದಾರರಿಗೆ ಹೇಳಲು ಮರೆತಿದ್ದೇವೆ ಎಂದು ಮಾಧ್ಯಮ ಪ್ರತಿನಿಧಿಯ ಪ್ರಶ್ನೇಗೆ ಉತ್ತರಿಸಿದರು.
ಮನವಿ ಸಲ್ಲಿಸಿದ ಜನತೆಗೆ, ಸಂಘಟನೆಯವರಿಗೆ ಹಾಗೂ ಮಾಧ್ಯಮದವರಿಗೂ ತಿಳಿಸದೆ ಹಠಾತ್ತನೆ ಕಸಾಯಿಖಾನೆಗೆ ಭೇಟಿ ನೀಡಿರುವುದು ತೀವೃ ಅಸಮಾಧಾನಕ್ಕೆ ಕಾರಣವಾಗಿದೆ ಈ ಕುರಿತು ಪ್ರತಿಕ್ರಿಯಿಸಿದ ಮನವಿ ಸಲ್ಲಿಸಿರುವವರಾದ ಸರ್ವೆಶ ಕಾಂಡೊಳಕರ, ಚಂದ್ರಕಾಂತ ದುರ್ವೆ, ಬಸವರಾಜ ಬೆಂಡಿಗೇರಿಮಠ, ವಿಶು ಬುದಪ್ಪನವರ, ಯಲ್ಲವ್ವಾ, ರೇಣುಕಾ, ವಿನಾಯಕ ಮಡ್ಡಿ ಅಧಿಕಾರಿಗಳು ಭೇಟಿ ನೀಡುವ ಬಗ್ಗೆ ನಮಗೆ ತಿಳಿಸಿದ್ದರೇ ನಾವು ಕಸಾಯಿಖಾನೆಯ ಸುತ್ತಲು ಅಲ್ಲಿಯ ಸತ್ಯಾಸತ್ಯತೆಯನ್ನು ಪ್ರತ್ಯಕ್ಷವಾಗಿ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವು ಆದರೇ ಮಾಹಿತಿ ನೀಡದೆ ಇರುವುದು ಜನರ ಅಳಲು ಕೆಳದಿರುವುದು ಸರಿಯಾದ ಕ್ರಮವಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
Leave a Comment