ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ #ವಾಜಪೇಯಿ ಅವರಿಂದಲೂ ಶ್ಲಾಘಿಸಲ್ಪಡುತ್ತಿದ್ದ
ಅಪ್ರತಿಮ ಸ್ವಾತಂತ್ರ್ಯ ಯೋಧರಾದ ‘#ವೀರ #ಸಾವರಕರ್‘ ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರು ಮೇ 28, 1883ರ ವರ್ಷದಲ್ಲಿ ಮಹಾರಾಷ್ಟ್ರದ ನಾಸಿಕ್ ಬಳಿಯ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ ‘ವೀರ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ ವಿರುದ್ಧ ಸಾವರಕರ್ ಸಿಡಿದೆದ್ದಿದ್ದರು. ಬಾಲ್ಯದಿಂದಲೂ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುತ್ತ ಬಂದಿದ್ದ ಅವರು ಉತ್ತಮ ಬರಹಗಾರ, ಬ್ಯಾರಿಸ್ಟರ್,ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಹಾಗೂ ದಾರ್ಶನಿಕರು.
ಸಾವರಕರ್ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ 1857ರ ಸಿಪಾಯಿ ದಂಗೆ ಬಗ್ಗೆ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಪುಸ್ತಕ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಆ ಪುಸ್ತಕವನ್ನು ಆಂಗ್ಲ ಆಡಳಿತ ನಿಷೇಧಿಸಿತ್ತು. ಕ್ರಾಂತಿಕಾರಿ ಸಂಘಟನೆ ಇಂಡಿಯಾ ಹೌಸ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಬ್ರಿಟಿಷರು ಅವರನ್ನು 1910ರಲ್ಲಿ ಬಂಧಿಸಿದ್ದರು. ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಅವರಿಗೆ 50 ವರ್ಷ ಕಠಿಣ ಶಿಕ್ಷೆಯಾಗಿ ‘ಕಾಲಾಪಾನಿ’ ಶಿಕ್ಷೆಗೆ ಪ್ರಸಿದ್ಧಿ ಪಡೆದಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಿಡಲಾಯಿತು.
ಅಂಡಮಾನ್ ಜೈಲಿನಲ್ಲಿದ್ದಾಗ ಶಿಕ್ಷೆ ಮಾಫಿಗಾಗಿ ಕೋರಿದ್ದಕ್ಕಾಗಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೀತಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದ ಸಾವರಕರ್ ಅವರನ್ನು ಕ್ರಾಂತಿಕಾರಿ ಚಟುವಟಿಕೆಯಿಂದ ಹಿಂದುಳಿಯುವ ಮುಚ್ಚಳಿಕೆ ಬರೆಸಿಕೊಂಡು1921ರಲ್ಲಿ ಬಿಡುಗಡೆ ಮಾಡಲಾಯಿತು. ಸಾವರಕರ್ ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ್ದರು.
ಹಿಂದೂ ಮಹಾಸಭಾದ ಸ್ಥಾಪಕ ಅಧ್ಯಕ್ಷರಾಗಿದ್ದ ವೀರ ಸಾವರಕರ್ ಅವರು ಜೀವನದುದ್ದಕ್ಕೂ ಹಿಂದೂತ್ವವನ್ನು ಬೆಂಬಲಿಸುತ್ತಲೇ ಬಂದಿದ್ದರು. ಹಿಂದುತ್ವ ಕುರಿತು ಅನೇಕ ಪುಸ್ತಕಗಳನ್ನು ಬರೆದರು. ಸಾವರ್ಕರ್ ಅವರು 1966ರ ಫೆಬ್ರವರಿ 26ರಂದು ವಿಧಿವಶರಾದರು.
ದೇಶಕ್ಕಾಗಿ ತನ್ನ ಜೀವನಪೂರ್ತಿ ಕಷ್ಟಪಟ್ಟು ಹಗಲಿರುಳೂ ಕಷ್ಟಗಳ ನೆರಳಿನಲ್ಲಿ ಬದುಕಿದ ಈ ಸ್ವಾತಂತ್ರ್ಯ ಹೋರಾಟಗಾರರ ಚೇತನಕ್ಕೆ ನಮ್ಮ ನಮನ.
Leave a Comment