
ಹಳಿಯಾಳ:- ಇದೆನು ಕ್ರೀಡಾಂಗಣವೋ ? ಕೆಸರುಗದ್ದೆಯೋ ? ಹಿಗೊಂದು ಸಂಶಯ ಮೂಡುವುದು ಪಟ್ಟಣದ ಅಂಚಿನಲ್ಲಿರುವ ಹವಗಿ ಗ್ರಾಮದ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದ ಅವ್ಯವಸ್ಥೆಯನ್ನು ನೋಡಿದಾಗ.
ಹೌದು ಈ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು ಸಂಪೂರ್ಣ ಕೆಸರುಗದ್ದೆಯಾಗಿದೆ. ಕಳೆದ 3-4 ವರ್ಷಗಳಿಂದ ಪ್ರತಿ ಮಳೆಗಾಲವನ್ನು ನೂರಾರು ವಿದ್ಯಾರ್ಥಿಗಳು, ಹತ್ತಾರು ಶಿಕ್ಷಕರು ಕೆಸರುಗದ್ದೆಯಲ್ಲಿಯೇ ಎದ್ದು-ಬಿದ್ದು, ಕೆಸರನ್ನು ಬಟ್ಟೆಗಳಿಗೆ ಅಂಟಿಸಿಕೊಂಡು ಕಳೆಯಬೇಕಾದ ಸ್ಥಿತಿ ಇದೆ.
ಇನ್ನೂ ಬುಧವಾರ ಇಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಗೆ ಆಗಮಿಸಿದ ನೂರಾರು ಜನರು ಕೆಸರುಗದ್ದೆ ದಾಟಿ ಸಭಾಂಗಣಕ್ಕೆ ತೆರಳಲು ಹರಸಾಹಸ ಪಟ್ಟ ವಿದ್ಯಾಮಾನ ಜರುಗಿತು. ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗವಹಿಸಿದ್ದು ಕೆಸರುಗದ್ದೆ ಆಟದ ಅನುಭವ ಪಡೆದುಕೊಂಡು ಹೊದರು.
2015-16ನೇ ಸಾಲಿನ ಲೆಕ್ಕ ಶಿರ್ಷಿಕೆ 4202 ಶಿಕ್ಷಣ(ಯೋಜನೆ) ಅಡಿಯಲ್ಲಿ ಹಳಿಯಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಟದ ಮೈದಾನ, ಪ್ರೇಕ್ಷಕರ ಗ್ಯಾಲರಿ ಮತ್ತು ಇತರೇ ಅಗತ್ಯ ಕಾಮಗಾರಿಗಳ ಅನುಷ್ಠಾನಕ್ಕಾಗಿ 50 ಲಕ್ಷ ರೂ. ಮೊತ್ತದ ಅನುದಾನ ಮಂಜೂರಿಯಾಗಿತ್ತು.

ಆ ಸಂದರ್ಭದಲ್ಲಿ ಕಾಲೇಜಿಗೆ ಸಂಪರ್ಕಿಸಲು ಇದ್ದ ಡಾಂಬರು ರಸ್ತೆಯನ್ನು ಸಹಿತ ಅಗೆದು ತೆಗೆದು ಆಟದ ಮೈದಾನವನ್ನು ಸಮತಟ್ಟು ಮಾಡುವ ಕೆಲಸ ಮಾಡಲಾಗಿತ್ತು. ಹಳಿಯಾಳ ಲೋಕೊಪಯೋಗಿ ಇಲಾಖೆ ಈ ಕೆಲಸ ಮಾಡಿದ್ದು ಕಾಮಗಾರಿ ಅನುಷ್ಠಾನ ಸರಿಯಾಗಿಲ್ಲ ಎನ್ನುವುದು ಜನರ ಆರೋಪವಾಗಿದೆ.
ಕಾಲೇಜಿನ ಪ್ರವೇಶದ್ವಾರದ ಗೇಟನಿಂದ ಹಿಡಿದು ಒಳಗೆ ಸಭಾಂಗಣ ಹಾಗೂ ವಿದ್ಯಾಲಯಕ್ಕೂ ತೆರಳಲು ಪ್ರತಿ ಮಳೆಗಾಲದಲ್ಲಿ ಕೆಸರಿನ ಗದ್ದೆಯಲ್ಲಿಯೇ ವಿದ್ಯಾರ್ಥಿಗಳು ಪರದಾಡಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರುವುದು ದುರ್ದೈವದ ಸಂಗತಿಯಾಗಿದೆ. ಆದರೇ ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು, ಜನಪ್ರತಿನಿಧಿಗಳು ಕಣ್ಣು ತೆರೆದು ನೋಡುತ್ತಿಲ್ಲ ಎನ್ನುವುದು ವಿದ್ಯಾರ್ಥಿ ಸಮುದಾಯದ ಆರೋಪವಾಗಿದೆ.
ಏನೇ ಆಗಲಿ ಕಾಲೇಜು ಪ್ರಾರಂಭಕ್ಕೂ ಮುನ್ನ ಮಹಾವಿದ್ಯಾಲಯ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಿ, ಕ್ರೀಡಾಂಗಣದಲ್ಲಿ ನಿಲ್ಲುವ ಅಪಾರ ಪ್ರಮಾಣದ ನೀರನ್ನು ಹೊರಗೆ ಹೊಗುವ ಹಾಗೆ ಸರಿಯಾದ ವ್ಯವಸ್ಥೆ ಮಾಡಿ ಮತ್ತೇ ಕ್ರೀಡಾಂಗಣ ಕೆಸರುಗದ್ದೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹಗಳು ಕೇಳಿ ಬರುತ್ತಿವೆ.
Leave a Comment