
ಕಾರವಾರ :- ಉತ್ತರ ಕನ್ನಡದ ಕರಾವಳಿಯಾದ್ಯಂತ ಕಳೆದ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ವರೆಗೆ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದು ಗ್ರಾಮಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾರವಾರ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾ ಬಳಿ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ರಾ.ಹೆ.66 ರಲ್ಲಿ ಸುಮಾರು 3 ಅಡಿಗೂ ಹೆಚ್ಚಿನ ನೀರು ಭರ್ತಿಯಾಗಿ ಹಳ್ಳಕ್ಕೆ ಇರುವ ಕಿರು ಸೇತುವೆಯ ಮೇಲಿನಿಂದಲೂ ನೀರು ರಭಸವಾಗಿ ಹರಿಯಿತು.
ಅಲ್ಲದೇ ಮುದಗಾದಿಂದ ಅಮದಳ್ಳಿಯವರೆಗೂ ನೀರು ಸಂಗ್ರಹವಾಗಿದ್ದು ಪ್ರಸಿದ್ಧ ವೀರಗಣಪತಿ ದೇವಸ್ಥಾನಕ್ಕೆ ನೀರು ನುಗ್ಗುವ ಆತಂಕ ಎದುರಾಗಿದ್ದು ದೇವಾಲಯದ ಮೆಟ್ಟಿಲವರೆಗೆ ನೀರು ಸಂಗ್ರಹವಾಗಿದ್ದು ಕಂಡು ಬಂದಿತು.
ಇನ್ನು ಇಲ್ಲಿನ ಗ್ರಾಮಗಳ ಹಲವಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.ಅಮದಳ್ಳಿಯ ಬಾಳೆರಾಶಿಯಲ್ಲಿನ ಹಳ್ಳವು ತುಂಬಿ ಹರಿದು ಗದ್ದೆಗಳೆಲ್ಲ ನೀರು ಪಾಲಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಶಿರ್ವೆ, ನಿವಳಿ, ಬರ್ಗಲ್ಗಳಲ್ಲಿಯೂ ಗುಡ್ಡದಿಂದ ಬರುವ ಹಳ್ಳಗಳು ರಭಸವಾಗಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದು ಗ್ರಾಮಗಳು ಜಲಾವೃತವಾಗಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್:
ಮುದಗಾದಲ್ಲಿ ನೀರು ಭರ್ತಿಯಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂದಿದ್ದು ವಾಹನಗಳ ಸಾಲು ಸಾಲು ಕಂಡು ಬಂದವು. ಎರಡೂ ಕಡೆಗಳಲ್ಲಿ ಸುಮಾರು 2 ಕಿ.ಮೀ. ಗೂ ಅಧಿಕ ವಾಹನಗಳ ಸಾಲು ಕಂಡು ಬಂದಿತು.
ಗುರುವಾರ ಮಧ್ಯಾಹ್ನದ ಬಳಿಕ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ರಸ್ತೆ ಸಂಚಾರ ಪುಣಃ ಪ್ರಾರಂಭವಾಗಿದೆ.



Leave a Comment