
ಯಕ್ಷಗಾನ’ – ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ. ಜಾನಪದ ಕಲೆಯಾದರೂ ಶಾಸ್ತ್ರದ ಚೌಕಟ್ಟಿನಲ್ಲಿಯೇ ಬೆಳೆದು ಬಂದ ವಿಶಿಷ್ಟ ಕಲೆ.ನವರಸಗಳನ್ನೂ ತನ್ನೊಳಗೆ ತುಂಬಿಕೊಂಡಿರುವ ಅಪರೂಪದ ಚೈತನ್ಯ ಈ ಕಲೆ ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ. ಇದು ಗಂಡು ಕಲೆಯೇ ಆದರೂ ಇತ್ತೀಚಿನ ವರ್ಷಗಳಲ್ಲಿ ಮಹಿಳಾಮಣಿಯರೂ ಕೂಡ ಈ ಕಲೆಯತ್ತ ಒಲವು ತೋರಿಸಿ ಬಹಳಷ್ಟು ಸಾಧನೆ ಮಾಡಿದ್ದಾರೆ. ರಂಗದಲ್ಲಿ ಪುರುಷರಂತೆ ಗೆಜ್ಜೆ ಕಟ್ಟಿ ಕುಣಿದು ಸಾವಿರಾರು ಕಲಾಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ, ಗೆದ್ದಿದ್ದಾರೆ. ಅಂತಹ ಮಹಿಳಾ ರತ್ನಗಳಲ್ಲಿ ಒಬ್ಬರಾಗಿ ಮಿಂಚುತ್ತಿರುವ ಕುಮಾರಿ ನಿಹಾರಿಕಾ ಭಟ್ ಅವರ ಕುರಿತಾದ ಸಣ್ಣ ಪರಿಚಯದ ಪ್ರಸ್ತುತಿ ಇಲ್ಲಿದೆ. ಯಕ್ಷಗಾನಕ್ಕೆ ಹೆಸರಾದ ಕರಾವಳಿ ಇವರ ತವರೂರು.ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅದನ್ನು ಕರಗತ ಮಾಡಿಕೊಂಡು , ವೃತ್ತಿಪರರಷ್ಟೇ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಾ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ.ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನ ಹಲವು ವೇದಿಕೆಗಳಲ್ಲಿ ಹಾಗೂ ವೃತ್ತಿಪರ ಕಲಾವಿದರ ಜೊತೆ ಗುರುತಿಸಿಕೊಂಡಿರುವ ಇವರು ಯಕ್ಷಲೋಕದ ರತ್ನಪ್ರಭೆ.

ಚಿಕ್ಕಂದಿನಿಂದಲೇ ಯಕ್ಷಗಾನದ ಬಗೆಗೆ ಆಸಕ್ತಿ: ಮೂಲತಃ ಕಾಸರಗೋಡು ಜಿಲ್ಲೆಯ ಮುಳಿಯಾರು ಊರಿನ ಅಮೆಕ್ಕಾರು ಪಿ.ವಿ ಭಟ್ ಹಾಗೂ ವೈಜಯಂತಿಮಾಲಾ ದಂಪತಿಯ ಪುತ್ರಿ ಈ ನಿಹಾರಿಕಾ ಭಟ್. ಪ್ರಸ್ತುತ ದ್ವೀತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಈಕೆ ಯಕ್ಷಗಾನ ರಂಗ ಪ್ರವೇಶ ಮಾಡಿದ್ದು ತನ್ನ ಎಂಟನೇ ವಯಸ್ಸಿನಲ್ಲಿಯೇ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಈಕೆ ಯಕ್ಷಗಾನದತ್ತ ಒಲವು ತೋರಿಸಿದ್ದಳು. ಹಾಗಾಗಿ ಪೋಷಕರು ಏಳನೇ ವಯಸ್ಸಿಗೇ ಈಕೆಯನ್ನು ಶ್ರೀ ಶ್ರೀನಿವಾಸ ಸಾಸ್ತಾನ ಅವರ ‘ ಕರ್ನಾಟಕ ಕಲಾದರ್ಶಿನಿ ‘ ಎಂಬ ಸಂಸ್ಥೆಗೆ ಸೇರಿಸಿದರು. ಅಲ್ಲಿಂದಲೇ ಪ್ರಾರಂಭವಾದ ಯಕ್ಷಗಾನದ ಹೆಜ್ಜೆಗಳು ಇಂದಿಗೂ ಜನರನ್ನು ರಂಜಿಸುತ್ತಲೇ ಇದೆ. ಇವಳು ಶ್ರೀ ಶಂಕರ ಬಾಳ್ಕುದ್ರು ಅವರಿಂದ ಯಕ್ಷಗಾನ ಪ್ರಸಂಗಗಳ ಮಾರ್ಗದರ್ಶನ ಪಡೆದಿದ್ದಾಳೆ. ಪ್ರಸಿದ್ಧ ಭಾಗವತರಾದ ಸುಬ್ರಾಯ್ ಹೆಬ್ಬಾರ್ ಬಲ್ಗೋಣ್ ಹಾಗೂ ಖ್ಯಾತ ಮದ್ದಳೆ ವಾದಕರಾದ ಎ. ಪಿ. ಪಾಠಕ್ ರ ಅಪರಿಮಿತವಾದ ಪ್ರೋತ್ಸಾಹ ನಿಹಾರಿಕಾ ಭಟ್ ಅವಳೊಳಗಿನ ಅಪೂರ್ವ ಕಲಾವಿದೆಯನ್ನು ಪೋಷಿಸಿದೆ. ಒಬ್ಬ ಯಕ್ಷಗಾನ ಕಲಾವಿದನಾಗಿ ನನಗರಿವಿರುವಂತೆ ಯಕ್ಷಗಾನ ಉಳಿದ ಕಲೆಗಳಂತಲ್ಲ ಅಥವಾ ಉಳಿದ ಶಿಕ್ಶಣದಂತೆಯೂ ಅಲ್ಲ. ಲಯ , ತಾಳ, ಶ್ರುತಿ, ಆಕಾರ, ಅಭಿನಯದ ಜೀವಂತಿಕೆ ಹಾಗೂ ಸಂದರ್ಭೋಚಿತ ಮಾತುಗಾರಿಗೆ ಮಾತ್ರವೇ ಒಬ್ಬ ಸಮರ್ಥ , ಶ್ರೇಷ್ಠ ಕಲಾವಿದನನ್ನು ರೂಪಿಸಬಲ್ಲವು. ಈ ಎಲ್ಲ ವಿಭಾಗದಲ್ಲಿಯೂ ಸಾಕಷ್ಟು ಪರಿಣಿತಿ ಹೊಂದಿರುವ ನಿಹಾರಿಕಾ ಭಟ್ ರಂಗಕ್ಕೆ ಬಂದೊಡನೆ ಬೀಳುವ ಚಪ್ಪಾಳೆ, ಕೇಕೆಗಳ ಸುರಿಮಳೆಯೇ ಇವರ ಕಲಾನೈಪುಣ್ಯತೆಗೆ ಸಾಕ್ಷಿ.
700 ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನ: ತಮ್ಮ ಓದಿನ ಜೊತೆಜೊತೆಗೆ ಯಕ್ಷಗಾನವನ್ನೂ ಸಂಭಾಳಿಸಿ ಬರುತ್ತಿರುವ ನಿಹಾರಿಕಾ ಭಟ್ ಇದುವರೆಗೂ ಸುಮಾರು 700 ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಬಳಕೂರು, ತೀರ್ಥಹಳ್ಳಿ ಗೋಪಾಲಾಚಾರಿ, ಮೋಹನದಾಸ ಶೆಣೈ ಅಂತಹ ದಿಗ್ಗಜ ಯಕ್ಷಕಲಾವಿದರ ಜೊತೆ ರಂಗವನ್ನು ಹಂಚಿಕೊಂಡಿರುವ ಇವರು ಶಿರಸಿ, ದಕ್ಷಿಣ ಕನ್ನಡ, ಅಂಕೋಲಾ, ಕುಮಟಾ ಉತ್ಸವ, ಉಡುಪಿ, ಮೈಸೂರು ದಸರಾ, ಹಂಪಿ ಉತ್ಸವ ,ಬೆಂಗಳೂರು ಅಷ್ಟೇ ಅಲ್ಲದೆ ಮುಂಬೈ, ಹೈದ್ರಾಬಾದ್ ಗಳಲ್ಲಿಯೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾಳೆ. ಹಾಲಿ ಹವ್ಯಾಸಿ ಮೇಳಗಳಾದ ‘ ಯಕ್ಷಗಾನ ಯೋಗಕ್ಷೇಮ ಟ್ರಸ್ಟ್’ ಹಾಗೂ ಮಹಿಳಾ ಮೇಳವಾದ ‘ಸಿರಿಕಲಾ ಮೇಳ’ ದಲ್ಲಿ ಪ್ರಮುಖ ಕಲಾವಿದೆಯಾಗಿ ಕೃಷ್ಣ, ಬಲರಾಮ, ಅಭಿಮನ್ಯು, ಲವ ,ಕುಶ, ಧರ್ಮಾಂಗದ ನಂತಹ ಪಾತ್ರಗಳಲ್ಲಿ ಮಿಂಚುತ್ತಿದ್ದಾಳೆ. ಜೊತೆಗೆ ಸ್ತ್ರೀ ವೇಷಗಳನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಾಳೆ ಎಂಬ ಹಿರಿಮೆಯನ್ನೋ ಪಡೆದಿದ್ದಾಳೆ. ಸಣ್ಣ ವಯಸ್ಸಿನಲ್ಲಿಯೇ ಸಾಕಷ್ಟು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ಯುವ ಕಣ್ಮಣಿಗೆ ಪ್ರೀತಿಯಿಂದೊಮ್ಮೆ ಹಾರೈಸೋಣ ಬನ್ನಿ…. ಯಕ್ಷಗಾನವನ್ನು ನೋಡಿ..ಆನಂದಿಸಿ…ಪ್ರೋತ್ಸಾಹಿಸಿ.

Leave a Comment