ಹಳಿಯಾಳ:- ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ತಾಯಿ ಮತ್ತು ಮಗಳಿಗೆ, ಓರ್ವ ಕಂದಾಯ ಇಲಾಖೆ ಸರ್ವೆ ಅಧಿಕಾರಿಗೆ ಹಾಗೂ ಗ್ರಾಮಾಂತರ ಭಾಗದಲ್ಲಿ ೪ಜನ ಯುವಕರಿಗೆ ಒಟ್ಟೂ ೭ ಪ್ರಕರಣಗಳು ದೃಢಪಡುವ ಮೂಲಕ ಮಂಗಳವಾರ ಹಳಿಯಾಳಕ್ಕೆ ಅಮಂಗಳವಾಗಿದ್ದು ಕೊರೊನಾ ಸೊಂಕಿತರ ಸಂಖ್ಯೆ ೩೦ಕ್ಕೆ ಏರಿಕೆಯಾಗಿದ್ದರೇ ಒಂದೇ ದಿನ ೬ ಪ್ರದೇಶ ಸೀಲ್ಡೌನ್ ಆಗಿವೆ.

ದೇಶಪಾಂಡೆ ನಗರ :- ಪಟ್ಟಣದ ದೇಶಪಾಂಡೆ ನಗರದಲ್ಲಿ ೪೨ ವರ್ಷ ವಯಸ್ಸಿನ ತಾಯಿ ಹಾಗೂ ೧೧ ವರ್ಷ ವಯಸ್ಸಿನ ಮಗಳಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿ ಇವರು ವಾಸಿಸುತ್ತಿದ್ದ ೧೦೦ ಮೀಟರ್ ಪ್ರದೇಶ ಸೀಲ್ಡೌನ್ ಆಗಿದ್ದು ೨೦೦ ಮೀಟರ್ ಬಪ್ಪರ್ ಝೋನ್ ಎಂದು ಗುರುತಿಸಲಾಗಿದೆ. ಮಹಿಳೆ ಧರ್ಮಸ್ಥಳ ಸಂಘದಲ್ಲಿ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಜ್ವರ, ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆ ಮಾಡಲಾಗಿದ್ದು ಸೊಂಕು ದೃಢಪಟ್ಟಿದೆ. ಸೊಂಕಿತರ ಪತಿ ಬಿಡಾ ಅಂಗಡಿ ನಡೆಸುತ್ತಿದ್ದರಿಂದ ಪಟ್ಟಣದಲ್ಲಿ ಇನ್ನಷ್ಟು ಭಯದ ವಾತಾವರಣ ಸೃಷ್ಠಿಯಾಗಿದೆ. ಸರ್ವೇ ಅಧಿಕಾರಿಗೆ ಸೊಂಕು:– ಮೂರನೇ ಪ್ರಕರಣದಲ್ಲಿ ಪಟ್ಟಣದ ದೇಸಾಯಿಗಲ್ಲಿ ನಿವಾಸಿ ಹಳಿಯಾಳ ತಹಶೀಲ್ದಾರ್ ಕಚೇರಿಯಲ್ಲಿ ಸರ್ವೇ ಅಧಿಕಾರಿಯಾಗಿರುವ ೪೫ ವರ್ಷ ವಯಸ್ಸಿನ ವ್ಯಕ್ತಿಗೆ ಸೊಂಕು ದೃಢಪಟ್ಟಿದೆ. ಇವರು ಬೆಂಗಳೂರಿಗೆ ಹೊಗಿ ಬಂದಿದ್ದು ಅವರಿಗೆ ಅಲ್ಲಿಯೇ ಸೊಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೇಸಾಯಿಗಲ್ಲಿ ಸೀಲ್ಡೌನ್ ಮಾಡಲಾಗಿದೆ.

ತೇರಗಾಂವದಲ್ಲೂ ಖಾತೆ ತೆರೆದ ಕೊರೊನಾ :- ನಾಲ್ಕನೇ ಪ್ರಕರಣದಲ್ಲಿ ತೇರಗಾಂವ ಗ್ರಾಮದ ೨೮ ವರ್ಷ ವಯಸ್ಸಿನ ಯುವಕನಿಗೆ ಕೊರನಾ ವಕ್ಕರಿಸಿದ್ದು ಶಿವಾಜಿ ನಗರ ಶೀಲ್ಡೌನ್ ಮಾಡಲಾಗಿದೆ. ಕೆರವಾಡಕ್ಕೂ ಎಂಟ್ರಿ :- ಐದನೇ ಪ್ರಕರಣದಲ್ಲಿ ತಾಲೂಕಿನ ಕೆರವಾಡ ಗ್ರಾಮದ ೩೫ ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ವೈರಸ್ ಪತ್ತೆಯಾಗಿದ್ದು ಗ್ರಾಮದ ಗಿರಣಿ ಓಣಿ ಸೀಲ್ಡೌನ್ ಮಾಡಲಾಗಿದೆ.
ತತ್ವಣಗಿಗೂ ಕಾಲಿಟ್ಟ ವೈರಸ್:- ೬ನೇ ಪ್ರಕರಣ ತತ್ವಣಗಿ ಗ್ರಾಮದ್ದಾಗಿದ್ದು ರಜೆಗೆಂದು ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ ೨೯ ವರ್ಷದ ಸೈನಿಕನಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿಯೂ ೧೦೦ಮೀ.ಸೀಲ್ಡೌನ್ ಮಾಡಲಾಗಿದೆ. ಬಸವಳ್ಳಿ ಗ್ರಾಮದಲ್ಲಿ ೨ ನೇ ಪ್ರಕರಣ :- ಇನ್ನೂ ಕೊನೆಯ ೭ನೇ ಪ್ರಕರಣ ಬಸವಳ್ಳಿ ಗ್ರಾಮದ್ದಾಗಿದ್ದು ೨೫ ವರ್ಷದ ಯುವಕನಲ್ಲಿ ಕೊವಿಡ್-೧೯ ದೃಢವಾಗಿದ್ದು ಗ್ರಾಮದ ನವನಗರವನ್ನು ಸೀಲ್ಡೌನ್ ಮಾಡಲಾಗಿದೆ.
ಮಂಗಳವಾರ ಪತ್ತೆಯಾದ ಈ ೭ ಸೊಂಕಿತರು ರೋಗ ಲಕ್ಷಣಗಳನ್ನು ಹೊಂದಿದವರಾಗಿದ್ದು ಹಳಿಯಾಳದ ತಾಲೂಕಾ ಆಸ್ಪತ್ರೆಯ ಕೊವಿಡ್-ಕೇರ್ ಸೆಂಟರ್ಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಈ ೭ಜನ ಸೊಂಕಿತರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಕ್ಕೆ ಬಂದ ೧೦೦ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪಿಎಸ್ಐ ಯಲ್ಲಾಲಿಂಗ್ ಕುನ್ನೂರ, ಆರೋಗ್ಯಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದರು.

Leave a Comment