
ಅಂದು 1999 ರ ಜುಲೈ 26. ಭಾರತೀಯ ಸೇನೆ ತನ್ನದೇ ಆದ ಕಾರ್ಗಿಲ್ ಅನ್ನು ಪಾಪಿ ಪಾಕಿಸ್ತಾನಿಯರಿಂದ ಮರಳಿ ಪಡೆದು ವಿಜಯದ ನಗೆ ಬೀರಿತ್ತು. ಅಂದಿನಿಂದ ಇಂದಿನವರೆಗೂ ದೇಶ ಈ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ’ ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂದು ಆ ವಿಜಯಕ್ಕೆ 21 ರ ಹರೆಯ. ಬಹಳ ವಿಜೃಂಭಣೆ ಇಲ್ಲದಿದ್ದರೂ ಈ ವರ್ಷ ಡಿಜಿಟಲ್ ಮಾಧ್ಯಮದಲ್ಲಾದರೂ ವಿಜಯ ದಿವಸ್ ಆಚರಿಸಲ್ಪಡಬಹುದು. ಹೀಗಾಗಿ ಕಾರ್ಗಿಲ್ ವಿಜಯ ದಿವಸ್ ದಲ್ಲಿರುವ ನಾವುಗಳು ಅದರ ಹಿನ್ನೆಲೆಯನ್ನು ಕಿಂಚಿತ್ತೂ ಅರಿಯದಿದ್ದರೆ ತಪ್ಪಾದೀತು. ಬನ್ನಿ ಆ ಕುರಿತ ಪಕ್ಷಿನೋಟ ಇಲ್ಲಿದೆ…..
ಹಿನ್ನೆಲೆ:
ಕಾರ್ಗಿಲ್ ಎಂಬುದು ಜಮ್ಮು ಮತ್ತು ಕಾಶ್ಮೀರದ ಒಂದು ಜಿಲ್ಲೆಯ ಹೆಸರು. ಬಹಳ ಎತ್ತರದ ಗುಡ್ಡಗಾಡುಗಳಿಂದ ಆವೃತವಾಗಿದ್ದು ಅತ್ಯಂತ ಇಕ್ಕಟ್ಟಾದ ಅಪಾಯಕಾರಿ ಜಾಗ. ಈ ಸ್ಥಳವನ್ನು ವಿಶ್ವದ ಅತ್ಯಂತ ಅಪಾಯದ ಜಾಗದಲ್ಲಿ ಒಂದು ಎಂದು ಕರೆಯಲಾಗುತ್ತದೆ. ಹಿಮಾಲಯದ ತಪ್ಪಲಿನಲ್ಲಿರುವುದರಿಂದ ವರ್ಷವಿಡೀ ಚಳಿಗಾಲವೇ. ಕನಿಷ್ಠ -15 ರಿಂದ -20 ಡಿಗ್ರಿ ವರೆಗೂ ತಾಪಮಾನ ದಾಖಲಾಗುವ ಕೆಲವೇ ಸ್ಥಳಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ನವೆಂಬರ್ ನಿಂದ ಮೇ ಆಸುಪಾಸಿನ ವರೆಗೆ ಈ ಜಾಗದಲ್ಲಿ ಅತ್ಯಂತ ಹೆಚ್ಚಿನ ಹಿಮ ಬೀಳುವುದರಿಂದ ಅಲ್ಲಿ ನಡೆದಾಡುವುದೂ ಕಷ್ಟ. ಹೀಗಾಗಿ ಭಾರತ- ಪಾಕಿಸ್ತಾನದ ಸೈನಿಕರು 1971 ರ ಶಿಮ್ಲಾ ಒಪ್ಪಂದದ ಪ್ರಕಾರ ಆ ಸ್ಥಳದಲ್ಲಿ ಕಾವಲು ಕಾಯುತ್ತಿರುವುದಿಲ್ಲ. ಎರಡೂ ಕಡೆಯ ಸೈನಿಕರೂ ವಾಪಸ್ ಬರುತ್ತಾರೆ. ಮತ್ತೂ ಬರಲೇಬೇಕೆಂದು ಒಪ್ಪಂದ ಹೇಳುತ್ತದೆ. ಆದರೆ 1999 ರಲ್ಲಿ ಹಾಗಾಗಲೇ ಇಲ್ಲ. ಅಂದಿನ ಪ್ರಧಾನಿ ವಾಜಪೇಯಿ ಅವರು ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧ ಕಾಪಾಡಿಕೊಳ್ಳುವುದಕ್ಕಾಗಿ ಭಾರತದಿಂದ ಫೆಬ್ರುವರಿಯಲ್ಲಿ ಪಾಕಿಸ್ತಾನದ ಲಾಹೋರ್ ಗೆ ನೇರ ಬಸ್ ಸೇವೆ ಆರಂಭಿಸಿದರು. ಜೊತೆಗೆ ಪಾಕಿಸ್ತಾನಕ್ಕೂ ತೆರಳಿ ಶಾಂತಿ ಮಾತುಕತೆಯನ್ನು ಆಡಿಕೊಂಡು ಬಂದಿದ್ದರು. ಆದರೆ ಇದಾದ ಎರಡೇ ತಿಂಗಳಲ್ಲಿ ಅಂದರೆ ಏಪ್ರಿಲ್ ನಲ್ಲಿ ಪಾಕಿಸ್ತಾನಿಯರು ಶಿಮ್ಲಾ ಒಪ್ಪಂದವನ್ನು ಮುರಿದು ಮರಳಿ ಕಾರ್ಗಿಲ್ ಗುಡ್ಡವನ್ನೇರಿ ಭಾರತದ ಜಾಗವನ್ನು ಅತಿಕ್ರಮಸಿಕೊಂಡುಬಿಟ್ಟರು. ಕೇವಲ ಭೂಭಾಗವನ್ನಲ್ಲದೆ ಭಾರತೀಯ ಸೇನೆಯ ಬಂಕರ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಟ್ಟರು. ಆದರೆ ಭಾರತಕ್ಕೆ ಮಾತ್ರ ಇದಾವ ಸುಳಿವೂ ಸಹ ಇರಲಿಲ್ಲ. ಭಾರತ ತಾನು ಸಾಮಾನ್ಯವಾಗಿಯೇ ಉಳಿದುಬಿಟ್ಟಿತ್ತು.
ಯುದ್ಧ ಘೋಷಣೆ: ಅತ್ತ ಪಾಕಿಸ್ತಾನ ಕಾರ್ಗಿಲ್ ಅನ್ನು ವಶಪಡಿಸಿಕೊಂಡ ನಂತರ ಲಡಾಖ್, ಜಮ್ಮುವನ್ನು ತನ್ನದಾಗಿಸಿಕೊಳ್ಳಬೇಕೆಂದು ಹವಣಿಸುತ್ತಿತ್ತು. ಗಡಿಯಲ್ಲಿ ಶಾಂತಿ ಕದಳುವಂತೆ ಮಾಡಿ ಜಗತ್ತಿನೆದುರು ಭಾರತವನ್ನು ಆರೋಪಿಯನ್ನಾಗಿಸಿ , ಜಾಗತಿಕ ಒತ್ತಡ ತರುವುದು ಅದರ ಯೋಜನೆಯಾಗಿತ್ತು. ಹೀಗಿರುವಾಗಲೇ ಒಂದು ದಿನ ಶಶಿ ಸಂಗ್ಯಾಲ್ ಎನ್ನುವ ಕುರಿಕಾಯುವವನೊಬ್ಬ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನ ಸೈನಿಕರು ವಶಪಡಿಸಿಕೊಂಡಿರುವುದಾಗಿ ಭಾರತೀಯ ಸೈನ್ಯಕ್ಕೆ ಸುದ್ದಿ ಮುಟ್ಟಿಸಿದ. ನಂತರ ನಡೆದಿದ್ದೇ ರಣಭಯಂಕರ ಇತಿಹಾಸ. ಸುದ್ದಿ ತಿಳಿದೊಡನೆ ಭಾರತೀಯ ಸೇನೆ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದ ಐದು ಜನರ ತಂಡವನ್ನು ಸ್ಥಳದ ಅವಲೋಕನೆಗೆ ಕಳುಹಿಸಿತು. ಸೌರಭ್ ಕಾಲಿಯಾ ಮತ್ತವರ ತಂಡ , ಹೋದವರು ಮತ್ತೆ ಮರಳಿದ್ದು ಹುತಾತ್ಮರಾಗಿ. ಹೇಗೂ ವಿಚಾರಿಸಿಕೊಂಡು ಬರುವ ಸಲುವಾಗಿ ಹೊರಟಿದ್ದ ಇವರುಗಳು ಭಾರೀ ಪ್ರಮಾಣದಲ್ಲಿ ಮದ್ದು ಗುಂಡುಗಳನ್ನೇನೂ ತೆಗೆದುಕೊಂಡು ಹೋಗಿರಲಿಲ್ಲ. ಆದರೆ ಕುತಂತ್ರಿಗಳಾದ ಪಾಕಿಗಳು ಇವರನ್ನು ಯುದ್ಧಕೈದಿಗಳನ್ನಾಗಿ ಸೆರೆಹಿಡಿದು ಆ ನಂತರ ಕೊಟ್ಟ ಚಿತ್ರಹಿಂಸೆಯನ್ನು ಅವರ ಪಾರ್ಥಿವ ಶರೀರವೇ ಹೇಳುತ್ತಿತ್ತು. ಇಡೀ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿತ್ತು. ಕಣ್ಣುಗಳಿಗೆ ಚೂಪಾದ ಆಯುಧಗಳಿಂದ ಇರಿಯಲಾಗಿತ್ತು. ಮರ್ಮಾಂಗವನ್ನು ಘಾಸಿಗೊಳಿಸಲಾಗಿತ್ತು. ಜೊತೆಗೆ ಪರಿಚಯವೂ ಸಿಗದ ಮಟ್ಟಿಗೆ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಆ ಮೂಲಕ ಯುದ್ಧಕ್ಕೆ ಪಾಕಿಸ್ತಾನ ಕರೆಕೊಟ್ಟಿತ್ತು. ಬಹುಶಃ ಪಾಕಿಸ್ಥಾನಕ್ಕೂ ಗೊತ್ತಿರಲಿಲ್ಲ ,ತನ್ನ ಸಾವಿಗೆ ತಾನೇ ಮುನ್ನುಡಿ ಬರೆದುಕೊಂಡೇ ಎಂದು. ಈ ಎಲ್ಲಾ ಬೆಳವಣಿಗೆಗಳು ಮೇ ಎರಡನೇ ವಾರದಲ್ಲಿ ನಡೆದ ತಕ್ಷಣ ಭಾರತ ಅಧಿಕೃತವಾಗಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಘೋಷಿಸಿಯೇ ಬಿಟ್ಟಿತು. ಅದಾಗಲೇ ಪಾಕಿಸ್ತಾನ ಭಾರತದ 160 ಕಿ.ಮೀ . ಭೂಭಾಗವನ್ನು ಆಕ್ರಮಿಸಿಯಾಗಿತ್ತು.
ಕ್ಯಾಪ್ಟನ್ ಸೌರಭ್ ಕಾಲಿಯಾ ತಂಡ: ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾರಾಮ್, ಮೂಲರಾಮ್, ನರೇಶ್ ಸಿಂಗ್
ಆಪರೇಷನ್ ವಿಜಯ್: ಭಾರತ ತನ್ನ ಈ ಶಸ್ತ್ರಸಜ್ಜಿತ ಯೋಜನೆಗೆ ಆಪರೇಷನ್ ವಿಜಯ್ ಎಂದು ಹೆಸರಿಟ್ಟಿತು. ಆ ಮೂಲಕ ಈ ಯುದ್ಧದಲ್ಲಿ ಜಯ ಎಂದಿದ್ದರೂ ನಮ್ಮದೇ ಎಂಬ ಸ್ಪಷ್ಟ ಸಂದೇಶವನ್ನು ಸಾರಿತ್ತು. ಹಾಗಿದ್ದರೂ ಯುದ್ಧ ಮಾಡುವುದು ಸುಲಭದ ಮಾತಾಗಿರಲಿಲ್ಲ. ಸರಿಸುಮಾರು 18 ಸಾವಿರ ಅಡಿ ಎತ್ತರದ ಕಾರ್ಗಿಲ್ ಪರ್ವತವನ್ನು ಶಸ್ತ್ರ , ಅಹಾರ ಸಮೇತ 25 ಕೆ.ಜಿ.ಗಳ ಬೆನ್ನುಭಾರದೊಂದಿಗೆ ಏರುವುದು ಸಾಹಸದ ಕೆಲಸವೇ ಆಗಿತ್ತು. ಅತ್ತ ಮೇಲೆ ನಿಂತ ಪಾಕಿಸ್ತಾನಿ ಸೈನಿಕರು ಆಗಲೇ ಗುಂಡಿನ ಚಕಮಕಿಯನ್ನು ನಡೆಸಲು ಪ್ರಾರಂಭಿಸಿದ್ದರು. ಭಾರತೀಯ ಸೈನಿಕರು ತನ್ನ ಮೊದಲ ಹಂತವಾಗಿ ತೋಲೋಲಿಂಗ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದರು. ಈ ತೋಲೋಲಿಂಗ್ ಬೆಟ್ಟ ಕಾರ್ಗಿಲ್ ಅನ್ನು ಗೆಲ್ಲಲು ಅತೀ ಅವಶ್ಯವಾಗಿತ್ತು. ಏಕೆಂದರೆ ಈ ಬೆಟ್ಟದ ಮೇಲಿಂದ ಸಂಪೂರ್ಣ 200 ಕಿ.ಮೀ. ವ್ಯಾಪ್ತಿಯನ್ನು ನಿಯಂತ್ರಿಸಬಹುದಾಗಿತ್ತು. ಈ ಪ್ರಕ್ರಿಯೆಗೆ ಭಾರತೀಯ ವಾಯುಸೇನೆ , ಭೂಸೇನೆಗೆ ಬೆಂಗಾವಲಾಗಿ ನಿಂತಿತು. ವಾಯುಸೇನೆ ‘ ಆಪರೇಷನ್ ಸಪೇದ್ ಸಾಗರ್ ‘ ಎನ್ನುವ ಹೆಸರಿನೊಂದಿಗೆ ಪಾಕಿಸ್ತಾನಿ ಸೈನಿಕರ ಮೇಲೆ ಗುಂಡುಗಳ ಸುರಿಮಲೆಗೈಯ್ಯ ತೊಡಗಿತು. ಆ ಮೂಲಕ ತೋಲೋಲಿಂಗ್ ಭಾರತದ ತೆಕ್ಕೆಗೆ ಬಂತು. ಈ ಮುನ್ನಡೆಯ ನಂತರದ ಸವಾಲಿದ್ದುದು ಟೈಗರ್ ಹಿಲ್ ನ 4150 ಪಾಯಿಂಟ್. ಅಂದರೆ 4150 ಮೀಟರ್ ಎತ್ತರದ ಟೈಗರ್ ಹಿಲ್ ಗುಡ್ಡ. ಈ ಗುಡ್ಡವನ್ನು ವಶಪಡಿಸಿಕೊಳ್ಳಬೇಕಾದರೆ ಎರಡೂ ಕಡೆಯ ಸೈನಿಕರಲ್ಲೂ ಅಪಾರ ಸಾವು- ನೋವುಗಳಾದವು. ಪಾಕಿಸ್ತಾನದ ಹತ್ತಕ್ಕೂ ಹೆಚ್ಚು ಸೈನಿಕರು ಇದೇ ಸಂಘರ್ಷದಲ್ಲಿ ಹತರಾದರು. ಕೊನೆಗೂ ಆ ಗುಡ್ಡವೂ ನಮ್ಮದಾಯಿತು. ಇವೆಲ್ಲದರ ಮಧ್ಯ ಅಂದಿನ ಪ್ರಧಾನಿ ವಾಜಪೇಯಿಯವರು ಜುಲೈ 7 ರಂದು ದೇಶವನ್ನುದ್ದೇಶಿಸಿ ” ನಮ್ಮ ಸೈನಿಕರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ಭಾಗ ನಮ್ಮದಾಗಿಯೇ ಆಗುತ್ತದೆ. ” ಎಂದು ಮಾಡಿದ ಭಾಷಣ ಸೈನಿಕರ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿತು. ಒಟ್ಟಿನಲ್ಲಿ 20 ಸಾವಿರ ಭೂಸೇನೆಯ ಸೇನಾನಿಗಳು, 10 ಸಾವಿರ ವಾಯುಸೇನೆಯ ಸಿಬ್ಬಂದಿಗಳು, ಮತ್ತಿತರ ಪ್ಯಾರಾ ಮಿಲಿಟರಿ ಪಡೆಯ ಒಟ್ಟೂ ಬಲದೊಂದಿಗೆ ಅರವತ್ತು ದಿನಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಯುದ್ಧರಂಗ ಜುಲೈ 26 ರ ವಿಜಯಭಾಸ್ಕರನ ದರ್ಶನದೊಂದಿಗೆ ಅಂತ್ಯವಾಯ್ತು. ಆದರೆ ಭಾರತದ ಈ ಗೆಲುವಿಗಾಗಿ ಸೈನ್ಯದ ಐದುನೂರಾ ಇಪ್ಪತ್ತೇಳು ಯೋಧರು ತಮ್ಮ ಪ್ರಾಣವನ್ನೇ ಆಹುತಿ ನೀಡಿದ್ದರು.
ಕೂತೂಹಲಕಾರಿ ಸಂಗತಿಗಳು: * ಟಿವಿ ಮಾಧ್ಯಮದಲ್ಲಿ ನೇರ ಪ್ರಸಾರ ಕಂಡ ಮೊದಲ ಯುದ್ಧ. * ವಿಕ್ರಂ ಭಾತ್ರಾ ಹೇಳಿದ್ದ ” ಯೇ ದಿಲ್ ಮಾಂಗೆ ಮೋರ್ ” ಎಂಬ ಘೋಷಣೆ ನಂತರ ಪೆಪ್ಸಿ ಕಂಪನಿಯ ಸ್ಲೋಗನ್ ಆಯಿತು. * ಇದು ಭಾರತ – ಪಾಕಿಸ್ತಾನ್ ನಡುವೆ ನಡೆದ ನಾಲ್ಕನೇ ನೇರ ಯುದ್ಧ . * ಈ ಯುದ್ಧವನ್ನು ಆಧರಿಸಿ 2003ರಲ್ಲಿ ‘ ಎಲ್.ಓ.ಸಿ. ಕಾರ್ಗಿಲ್ ‘ ಮತ್ತು 2004 ರಲ್ಲಿ ‘ ಲಕ್ಷ್ಯ’ ಚಿತ್ರಗಳು ತೆರೆಕಂಡವು. * ಯುದ್ಧದಲ್ಲಿ ಸತ್ತ ಪಾಕ್ ಸೈನಿಕರ ಸಂಖ್ಯೆ 696. ಸ್ನೇಹಿತರೇ, ಇಂದು ವಿಜಯದಿವಾಸವನ್ನೇನೋ ಆಚರಿಸಿಬಿಡುತ್ತೇವೆ. ಆದರೆ ನಾಳೆಯಿಂದ ಮತ್ತೆ ದೇಶಕ್ಕಾಗಿ ಪ್ರಾಣತೆತ್ತ ಯೋಧರನ್ನು ಮರೆತುಬಿಡುತ್ತೇವೆ. ಅಷ್ಟೇ ಆದರೂ ಪರವಾಗಿಲ್ಲ…ಸೈನಿಕರನ್ನು, ಸೈನ್ಯವನ್ನು ತುಚ್ಛವಾಗಿ ಕಾಣುವ ಸಂಸ್ಕೃತಿ ಬೆಳೆಯುತ್ತಿದೆ. ಭಾರತ ತೆರೆ ತುಕಡೆ ಹೋಂಗೆ ಎಂಬ ಘೋಷಣೆಗಳು ಇದೇ ಭಾರತದಲ್ಲಿ ಕೇಳಿಸುತ್ತಿದೆ. ಈ ಮನಸ್ತಿತಿಯನ್ನು ನಾವು ಮೆಟ್ಟಿ ನಿಲ್ಲಲೇ ಬೇಕಿದೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ ದೇಶದ್ರೋಹಿಗಳು ತಮ್ಮ ಅಸಲಿಯತ್ತನ್ನು ತೋರಿಸುತ್ತಿದ್ದಾರೆ. ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೇ ಬೇಕು. ನಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ದೇಶ ಕಾಯುವ ಯೋಧರಿಗೊಂದು ಬೇಡಿಕೆಯನ್ನು ಮೀಸಲಿಡೋಣ. ಸೈನಿಕರನ್ನು ಗೌರವಭಾವದಿಂದ ಕಾಣೋಣ… ಭಾರತ ಬದಲಾಗಲಿ…ಭಾರತ ವಿಶ್ವಗುರುವಾಗಲಿ…..ಬನ್ನಿ ಬದಲಾಗೋಣ…ಬದಲಾಯಿಸೋಣ……
Leave a Comment