ಆ ವೃತ್ತಿಯೇ ಅಂತಹುದು.. ಶಾಲೆಯೆಂಬ ದೇಗುಲವನ್ನು ಸೇರಿದ ನಂತರ ಶಿಕ್ಷಕರಾದವರು ಅಲ್ಲಿರುವ ಎಲ್ಲಾ ಮಕ್ಕಳನ್ನೂ ತಮ್ಮ ಮಕ್ಕಳಂತೆಯೇ ಕಾಣುವ ವಿಶಾಲತ್ವವನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಇನ್ನು ಕೆಲವು ಶಿಕ್ಷಕರಂತೂ ಶಾಲೆಯಾಚೆಗೂ ಮಕ್ಕಳ ಒಳಿತಿಗಾಗಿ ಹಂಬಲಿಸುತ್ತಾರೆ..ಮಕ್ಕಳು ಓದಿಗೆ ಬೆನ್ನುಹಾಕಿ ಕೇವಲ ಆಟದಲ್ಲಿ ಕಳೆದುಹೋಗುತ್ತಿದ್ದರೆ ಅಂತವರಿಗಾಗಿ ಮರುಗುತ್ತಾರೆ ಅಂತಹ ಅಪರೂಪದ ಗುರುಗಳಲ್ಲೊಬ್ಬರು ಕಲ್ಕಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪಿ.ಆರ್.ನಾಯ್ಕ.
ಸದಾ ಶಿಷ್ಯರ ಒಳಿತನ್ನೇ ಬಯಸುವ ಗುರುವಾಗಿ..ಶಿಕ್ಷಣ ಇಲಾಖೆ ಮಕ್ಕಳ ಏಳಿಗೆಗಾಗಿ ರೂಪಿಸುವ ಯೋಜನೆಗಳನ್ನು ಅತ್ಯಾಸಕ್ತಿಯಿಂದ ಅನುಷ್ಠಾನಮಾಡುವ ಕಟ್ಟಾಳುವಾಗಿ ಗುರುತಿಸಿಕೊಂಡಿದ್ದಾರೆ ಇವರು. ಓದಿದ ತಂದೆ ತಾಯಿ ಮನೆಯಲ್ಲಿರುವ ಮಕ್ಕಳು ಸರ್ಕಾರಿ ನೌಕರರ ಮಕ್ಕಳು, ಉಳ್ಳವರ ಮಕ್ಕಳು ಖಾಸಗಿ ಶಾಲೆಯನ್ನು ಸೇರುತ್ತಾರೆ. ಶಾಲೆಯಲ್ಲಿ ನಡೆಯುವಷ್ಟೇ ಅಭ್ಯಾಸ ಮಕ್ಕಳು ಮನೆ ಸೇರಿದ ನಂತರ ಪಾಲಕರಿಂದಲೂ ನಡೆಯುತ್ತದೆ. ಆದರೆ ಸರ್ಕಾರಿ ಶಾಲೆಯ ಮಕ್ಕಳು ಹಾಗಲ್ಲ ಹೆಚ್ಚಾಗಿ ಓದಿರದ, ಕಷ್ಟಪಟ್ಟು ದುಡಿದು ಕೂಲಿ ನಾಲಿ ಮಾಡಿ ಬದುಕುವವರ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಶಾಲೆಗೆ ಸೇರುವುದು. ಇಂತಹ ಮಕ್ಕಳಿಗೆ ಗುರುಗಳು ಹೇಳಿದ ಪಾಠವೇ ಶ್ರೀರಕ್ಷೆ.


ಕಲ್ಕಟ್ಟು ಶಾಲೆಯ ಪರಿಸರದ ಮಕ್ಕಳ ಸ್ಥಿತಿಯೂ ಇದೇ ಆಗಿತ್ತು. ತಂದೆ ತಾಯಿ ಬೆಳಕು ಹರಿದಾಗ ಮನೆ ಬಿಟ್ಟರೆ ಮತ್ತೆ ಮನೆ ಸೇರುವುದು ಮುಸ್ಸಂಜೆಯಾದಾಗಲೇ. ಮನೆ ಮಂದಿಯ ತುತ್ತಿನ ಚೀಲ ತುಂಬಬೇಕಾದರೆ ಈ ಹೋರಾಟ ಅವರಿಗನಿವಾರ್ಯವಾಗಿತ್ತು. ಆದರೆ ಪಾಲಕರ ಕಾಳಜಿಯಿಂದ ವಂಚಿತರಾದ ಮಕ್ಕಳು ಶಾಲೆಯೂ ಇಲ್ಲದ ಕಾರಣ ಅವರಿವರ ಮನೆಯ ಅಂಗಳದಲ್ಲೋ ತೋಟದಲ್ಲೋ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಇಂತಹ ಮಕ್ಕಳನ್ನೇ ಗುರಿಯಾಗಿಸಿಕೊಂಡು ಸರ್ಕಾರ ವಿದ್ಯಾಗಮ ಎನ್ನುವ ಮಾದರಿಯನ್ನು ಪರಿಚಯಿಸುವ ತಿಂಗಳು ಮೊದಲೇ ಕಲ್ಕಟ್ಟುವಿನಲ್ಲಿ ಮನೆ ಮನೆ ಸರ್ವೇ ಮಾಡಿ ಸ್ಥಳಾವಕಾಶವಿರುವ ಮೂರ್ನಾಲ್ಕು ಮನೆಯನ್ನು ಗುರುತಿಸಿ ಮೂವರು ಸ್ವಯಂ ಸೇವಕರ ನೆರವನ್ನು ಪಡೆದುಕೊಂಡು ಕೊರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯಾಗಮ ಮಾದರಿಯನ್ನು ಪರಿಚಯಿಸಿದ ಕೀರ್ತಿ ಪಿ.ಆರ್.ನಾಯ್ಕ ಅವರದಾಗಿದೆ. ಸದಾ ಶಿಷ್ಯರ ಒಳಿತಿಗಾಗಿ ಹಂಬಲಿಸುವ ಇವರ ನಿಸ್ವಾರ್ಥ ಶ್ರಮಕ್ಕೆ ನಮ್ಮದೊಂದು ಸಲಾಂ.

Leave a Comment