ಬೆಳ್ಳಿತೆರೆಯಲ್ಲಿ ಮಿನುಗುವ ತಾರೆಗಳಿಗೆ ಪ್ರತಿಭೆಯ ಜೊತೆ ಅದೃಷ್ಟದ ಬಲವೂ ಬೇಕು ಆದರೆ ಅಪ್ಪಟ ಪ್ರತಿಭಾವಂತರನ್ನು ಮಾತ್ರ ಸೆಳೆಯುವ, ವೇದಿಕೆ ಕಲ್ಪಿಸುವ ರಂಗಭೂಮಿ ಮಾತ್ರ ಬೆಳ್ಳಿತೆರೆಗೆ ಅಪ್ಪಟ ಪ್ರತಿಭೆಗಳನ್ನೇ ಕೊಡುಗೆಯಾಗಿ ಕೊಡುತ್ತಾ ಬಂದಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ ಅದಕ್ಕೊಂದು ಹೊಸ ಸೇರ್ಪಡೆ ಕಿರಣ ನಾಯ್ಕ.

ಹುಟ್ಟಿದ್ದು ಸಾಗಾರದ ತಾಳಗುಪ್ಪಾ ಬೆಳೆದಿದ್ದು ಓದಿದ್ದು ಎಲ್ಲಾ ಶರಾವತಿಯ ಒಡಲು ಹೊನ್ನಾವರದಲ್ಲಿಯೇ. ತಾರೀಬಾಗಿಲ ಪ್ರಾಥಮಿಕ ಶಾಲೆ, ಸೈಂಟ್ ಅಂಥೋನಿ ಪ್ರೌಢಶಾಲೆ, ಎಸ್.ಡಿ.ಎಮ್ ಕಾಲೇಜು ಶೈಕ್ಷಣಿಕ ಬದುಕಿಗೆ ಬುನಾದಿಯಾದರೆ ಪ್ರಖ್ಯಾತ ಕಲಾ ಶಾಲೆ ಹೆಗ್ಗೋಡಿನ ನೀನಾಸಂ ಕಿರಣ್ ಪ್ರತಿಭೆಗೆ ಸಾಣೆ ಹಿಡಿದು ತಿಕ್ಕಿ ತೀಡಿ ಹೊಳಪನ್ನು ನೀಡಿದೆ ಎನ್ನುವುದನ್ನು ಮರೆಯುವಂತಿಲ್ಲ. ಕುರುಕ್ಷೇತ್ರ, ಹಂಸದಮಯಂತಿ, ಬಿರುಕು, ಜಂಟಲಮ್ಯಾನ್ ಆಪ್ ವೈಟುಕೆ, ಸತ್ರು ಅಂದ್ರೆ ಸಾಯ್ತಾರೆ ನಾಟಕಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಂತರ ವಿನ್ಯಾಸಕಾರರಾಗಿಯೂ ಶಾಕುಂತಲಾ, ಸಂಸಾರದಲ್ಲಿ ಸನಿದಪ, ಕಂತು ಸೇರಿದಂತೆ ಹಲವಾರು ನಾಟಕಗಳಲ್ಲಿ ದುಡಿದಿದ್ದಾರೆ. ರಂಗಭೂಮಿಯ ಖ್ಯಾತ ನಿರ್ದೇಶಕರುಗಳಾದ ಚಿದಂಬರ್ ರಾವ್ ಜಂಬೆ, ಬಿ.ವಿ ಕಾರಂತ, ನಟರಾಜ ಹೊನ್ನವಳ್ಳಿ, ಸುರೇಶ ಆನಗಳ್ಳಿ, ರಘುನಂದನ್, ಇಕ್ಬಾಲ್ ಅಹಮದ್ ಮುಂತಾದವರ ಗರಡಿಯಲ್ಲಿ ಪಳಗಿದ ತಾಲೂಕಿನ ಪ್ರತಿಭೆ ನಂತರ ಅವಕಾಶವನ್ನರಸಿ ಹೊರಟಿದ್ದು ಮಾಯಾನಗರಿ ಬೆಂಗಳೂರಿಗೆ.
ಜೊತೆ ಜೊತೆಯಲಿ, ಅಳಿಗುಳಿಮನೆ, ಕಿನ್ನರಿ ಶುಭಮಂಗಳ ಮುಂತಾದ ಜನಪ್ರೀಯ ಕಿರುತೆರೆ ದಾರವಾಹಿಗಳಲ್ಲಿ, ಜನುಮದ ಜೋಡಿ, ಜಟ್ಟ, ತುಂಡ ಹೈಕ್ಳ ಸಹವಾಸ, ತಾಯಿಗೆ ತಕ್ಕ ಮಗ, ಯುವರತ್ನ, ಅವನೇ ಶ್ರೀಮನ್ನಾರಾಯಣ, ದೇವರ ನಾಡಲ್ಲಿ ಮುಂತಾದ ಸಿನೆಮಾಗಳಿಗೂ ಬಣ್ಣ ಹಚ್ಚಿರುವ ಇವರು ಈಗಲೂ ರಂಗಭೂಮಿಯ ಸೆಳೆತವನ್ನು ಬಿಟ್ಟುಕೊಡದೇ ಥಿಯೇಟರ್ ತತ್ಕಾಲ್ ತಂಡವನ್ನು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಪ್ರತಿಭೆಯಿಂದಲೇ ಪ್ರಕಾಶಿಸುತ್ತಿರುವ ಕಿರಣ್ ತಾಲೂಕಿಗೊಂದು ಹೆಮ್ಮೆ.


Leave a Comment