ಭಾರತ ಬಹಳ ದೊಡ್ಡ ರಾಷ್ಟ್ರ. ಇಲ್ಲಿನ ಜನಸಂಖ್ಯೆ 130 ಕೋಟಿಗೂ ಅಧಿಕ. ಇಲ್ಲಿ ನಾವು ಯಾವುದೇ ರೀತಿಯ ಉದ್ಯೋಗ ಪ್ರಾರಂಭಿಸಿದರೂ ಅದಕ್ಕೆ ಗ್ರಾಹಕರನ್ನು ಹುಡುಕಬಹುದು. ಅದರಲ್ಲೂ ಸರಿ ದಾರಿಯಲ್ಲಿ ನಡೆಯುವುದಕ್ಕಿಂತ ತಪ್ಪು ದಾರಿಯಲ್ಲಿ ಹೋದರೆನೆ ಬಹಳ ಬೇಗನೆ ಹಣ ಮಾಡಬಹುದು. ಇದು ಭಾರತದ ಅಲಿಖಿತ ಸಂಪ್ರದಾಯ. ಇಲ್ಲಿ ಕಾರಕೂನನಿಂದ ಹಿಡಿದು ಕಾರ್ಯದರ್ಶಿಯ ವರೆಗೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಕೊಂಡುಕೊಳ್ಳಬಹುದು. ಹೀಗಾಗಿಯೇ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ಬೆಳೆಯುತ್ತಿರುವುದು. ವಿಪರ್ಯಾಸವೆಂದರೆ ಕಾನೂನು ಮಾಡುವವರೇ ಇಂಥ ಕಾನೂನು ಬಾಹಿರ ಕೆಲಸ ಮಾಡುತ್ತಿರುವುದರಿಂದ, ಯಾವನೋ ಒಬ್ಬ ನಿಷ್ಠಾವಂತ ಅಧಿಕಾರಿ ಇದರ ವಿರುದ್ಧ ಮಾತನಾಡಿದನೆಂದರೆ, ಆತ ಹೇಳ ಹೆಸರಿಲ್ಲದೆ ಸಾಯುತ್ತಾನೆ. ಇದೊಂದು ವಿಷಪೂರಿತ ಜಾಲವೆ ಹೊರತು ಮತ್ತೇನಲ್ಲ.

ಇಂತಹುದೇ ಒಂದು ಕಾನೂನುಬಾಹಿರ ಚಟುವಟಿಕೆಯ ಮುಂದುವರಿದ ಭಾಗವೇ ಇಂದು ಸುದ್ದಿಯಲ್ಲಿರುವ ಡ್ರಗ್ಸ್ ದಂಧೆ. ಟಿ.ವಿ. ಮಾಧ್ಯಮದವರು ಈ ವಿಷಯದ ಕುರಿತು ಹೇಳಿದ್ದನ್ನೇ ನೂರು ಬಾರಿ ಹೇಳುತ್ತಿದ್ದಾವೆಯೇ ಹೊರತು, ರಾಜ್ಯದ ಜನಸಾಮಾನ್ಯನಿಗೆ ಅದರ ಆಲದ ಅರಿವನ್ನು ಮೂಡಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಹಾಗಾದರೆ ಏನಿದು ಡ್ರಗ್ಸ್ ದಂಧೆ….?!ಅದರ ಬಗೆಗಿನ ಚುಟುಕಾದ ಮಾಹಿತಿ ಇದರಲ್ಲಿದೆ.
ಡ್ರಗ್ಸ್ ಎಂಬುದು ಒಂದು ತಂಬಾಕಿನಂತಹುದೇ ಮಾದಕ ದ್ರವ್ಯ. ಆದರೆ ಅದಕ್ಕಿಂತಲೂ ಹೆಚ್ಚಿನ ಅಪಾಯಕಾರಿ ದ್ರವ್ಯ. ಇದನ್ನು ಒಮ್ಮೆ ಸೇವಿಸಿದವನು ಮತ್ತೆ ಮತ್ತೆ ಸೇವಿಸಬೇಕೆಂದು ಬಯಸುತ್ತಾನೆ.ಇದು ಒಂದು ರೀತಿಯ ನಶೆಯ ಪದಾರ್ಥ. ನಮ್ಮ ಮೆದುಳಿನ ನರವ್ಯೂಹದ ಮೇಲೆ ಇದು ಬೀರುವ ಪರಿಣಾಮವಿದೆಯಲ್ಲ,ಅದನ್ನು ಊಹಿಸಲು ಅಸಾಧ್ಯ. ಒಂದು ಸಣ್ಣ ಉದಾಹರಣೆಯೊಂದಿಗೆ ಹೇಳಬೇಕೆಂದರೆ ಒಮ್ಮೆ ನೀವು ಇದನ್ನು ಸೇವಿಸಿದಿರಿ ಎಂದರೆ ನೀವು ನಿಮ್ಮ ಪ್ರಚೋದನಾ ಸಾಮರ್ಥ್ಯ ವನ್ನೇ ಕಳೆದುಕೊಳ್ಳುತ್ತೀರಿ. ನಿಮಗೆ ಯಾವುದೇ ರೀತಿಯ ಭಾವನೆಗಳು ಉಂಟಾಗುವುದಿಲ್ಲ. ಮೆದುಳು ತನ್ನ ಕಾರ್ಯವನ್ನು ನಿಲ್ಲಿಸಿಬಿಡುತ್ತದೆ. ಆ ಸಮಯದಲ್ಲಿ ನೀವೇನು ಮಾಡುತ್ತೀರಿ ಎಂಬುದು ನಿಮ್ಮ ಅರಿವಿಗೇ ಬಂದಿರುವುದಿಲ್ಲ. ಅಷ್ಟು ಭಯಾನಕ ಈ ಡ್ರಗ್ಸ್. ಇಂತಹ ಪ್ರಾಣಾಪಾಯದ ವಸ್ತುವನ್ನು 1982 ರಲ್ಲಿ ರಾಜೀವ ಗಾಂಧಿ ಸರ್ಕಾರ ಭಾರತದಲ್ಲಿ ಅಧಿಕೃತವಾಗಿ ನಿಷೇಧಿಸಿತು. ಅಲ್ಲದೆ ಈ ಡ್ರಗ್ಸ್ ಅನ್ನು ಮಾರುವುದು , ಸೇವಿಸುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿತು. ಆದರೆ ಇದಾದ ಮೇಲೆಯೇ ಡ್ರಗ್ಸ್ ನ ಅಸಂವಿಧಾನಿಕ ದಂಧೆ ಶುರುವಾದದ್ದು.
ದಂಧೆ ಬೆಳೆಯುವುದು ಹೇಗೆ?…
ಬಹುತೇಕ ಪಟ್ಟಣಗಳಲ್ಲಿ ಬೆಳೆಯುವ ಮಕ್ಕಳು ತಮ್ಮ ಬಾಲ್ಯದ ದಿನಗಳಿಂದಲೇ ಒತ್ತಡ ತಾಳಲಾರದೆ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುತ್ತಾರೆ. ಹೀಗೆ ಸಿಗರೇಟ್, ಮಧ್ಯದಿಂದ ತಮ್ಮ ಒತ್ತಡ ಕಡಿಮೆಯಾಗುತ್ತದೆಂದು ನಂಬುವುದೂ ಅಲ್ಲದೇ ಇತರರಿಗೂ ಇದನ್ನು ಸೇವಿಸುವುದಕ್ಕೆ ಪ್ರಚೋದಿಸುತ್ತಾರೆ. ಆದರೆ ಇದು ಇಷ್ಟಕ್ಕೆ ನಿಲ್ಲದೇ ಚಟವಾಗಿ ಬದಲಾಗಿ ಗಾಂಜಾ, ಡ್ರಗ್ಸ್ ಗಳ ಸೇವನೆಗೆ ಮುನ್ನುಡಿ ಬರೆಯುತ್ತದೆ. ಹೀಗೆ ಒಮ್ಮೆ ಡ್ರಗ್ಸ್ ಸೇವಿಸಿದವರು, ಮುಂದೆ ಅದನ್ನು ಬಿಟ್ಟು ಒಂದರೆಕ್ಷಣವೂ ಇರಲಾರದಂತಾಗುತ್ತಾರೆ. ಮೊದಮೊದಲು ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಈ ಡ್ರಗ್ಸ್ ಮಾರ್ಜಾಲ ನಿಧಾನವಾಗಿ ಈ ಶೋಕಿಲಾಲರ ಮೂಲಕ ಮಧ್ಯಮವರ್ಗದ ಮಕ್ಕಳನ್ನೂ ತನ್ನ ದಾಸರಾಗುವಂತೆ ಮಾಡುತ್ತದೆ. ಹಳ್ಳಿಗಳಿಂದ, ದೂರದೂರದ ಊರುಗಳಿಂದ ಬೆಂಗಳೂರಿನಂತ ದೊಡ್ಡ ದೊಡ್ಡ ಮಹಾನಗರಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳೇ ಈ ಡ್ರಗ್ಸ್ ಪಾಪಿಗಳ ನೆಚ್ಚಿನ ಟಾರ್ಗೆಟ್ ಆಗಿ ಕಾಣುತ್ತಾರೆ. ಅಲ್ಲದೆ ಇಂಥವರನ್ನು ಸುಲಭದಲ್ಲಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ ಕೂಡ. ಬಹಳ ದುರ್ದೈವದ ಸಂಗತಿ ಎಂದರೆ , ಈ ಡ್ರಗ್ಸ್ ಗೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನದಾಗಿ ಅಡಿಕ್ಟ್ ಆಗುತ್ತಿರುವುದು.
ಈ ಡ್ರಗ್ಸ್ ದಂಧೆ ಎಂಬುದು ಕೋಟ್ಯಂತರ ರೂಪಾಯಿಗಳ ಬಹುದೊಡ್ಡ ವ್ಯಾಪಾರ. ವಿದೇಶಗಳಿಂದ ಬರುವ ಅಕ್ರಮ ಮಾಲನ್ನು ಭಾರತದಲ್ಲಿರುವ ಅನೇಕ ಡ್ರಗ್ಸ್ ಏಜೆನ್ಸಿ ಗಳು ಅದೇ ರೀತಿ ಅಕ್ರಮವಾಗಿಯೇ ದಾಸ್ತಾನು ಮಾಡುತ್ತಾರೆ. ನಂತರ ಡೀಲರ್ ಗಳ ಮೂಲಕ ಇದು ದೇಶದ ವಿವಿಧ ಭಾಗಗಳಿಗೆ ಸಾಗಿಸಲ್ಪಡುತ್ತದೆ. ಇವೆಲ್ಲದಕ್ಕೂ ಅಧಿಕಾರಿಗಳೂ ಶಾಮೀಲಾಗುತ್ತಾರೆ. ಕೊನೆಗೆ ಡೀಲರ್ ಗಳಿಂದ ದೊಡ್ಡ ದೊಡ್ಡ ಪಾರ್ಟಿಗಳಿಗೆ ಈ ಡ್ರಗ್ಸ್ ಸರಬರಾಜಾಗುತ್ತದೆ. ಅಲ್ಲಿ ಸಿನಿಮಾ ನಟ ನಟಿಯರು, ರಾಜಕೀಯ ಮುಖಂಡರುಗಳು , ಅವರ ಮಕ್ಕಳು ಈ ವಿಷವರ್ತುಲಕ್ಕೆ ಸೇರಿಕೊಳ್ಳುತ್ತಾರೆ. ಕೊನೆಯ ಹಂತವಾಗಿ ಇದು ಕಾಲೇಜು ವಿದ್ಯಾರ್ಥಿಗಳ ತನಕವೂ ಬಂದು ತಲುಪುತ್ತದೆ. ಮುಂದುವರಿದು ಇಂತಹ ಅಕ್ರಮ ಚಟುವಟಿಕೆ ನಡೆಸುವ ನಾಲಾಯಕಗಳೇ ದೇಶದ ಆಡಳಿತ ನಡೆಸುವ ನಾಯಕರುಗಳಾಗಿ ಬದಲಾಗುತ್ತಾರೆ. ಇದು ಭಾರತದ ದುರಂತ.
ಇನ್ನು ಇತ್ತೀಚಿನ ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿಯೇ ಈ ಡ್ರಗ್ಸ್ ದಂಧೆ ಅಕ್ರಮವಾಗಿ ಚಾಲ್ತಿಯಲ್ಲಿರುವುದು ನಿಚ್ಚಳವಾಗಿ ಗೋಚರಿಸುತ್ತದೆ. ಅಚ್ಚರಿಯೇನಿಲ್ಲದಿದ್ದರೂ ಯಾವ ಯುವ ಸಮೂಹ ನಮ್ಮ ದೇಶದ ಸಂಪತ್ತಾಗಿತ್ತೋ ಅವರನ್ನೇ ತಪ್ಪುದಾರಿಗೆಳೆಯುವ ಹುನ್ನಾರವಂತೂ ಖಂಡಿತ ನಡೆಯುತ್ತಿದೆ.ಒಟ್ಟಿನಲ್ಲಿ ಇಂಥವರ ಉದ್ದೇಶ ಸ್ಪಷ್ಟ. ಭಾರತದ ಯುವ ಮನಸುಗಳನ್ನು ಕೆಡಿಸಿದರೆ , ಪೂರ್ತಿ ಭಾರತವನ್ನು ನಾಶಮಾಡಬಹುದೆಂಬುದು. ಇದಕ್ಕಿಂತಲೂ ಬೇಸರದ ಸಂಗತಿ ಎಂದರೆ ಯಾರು ಈ ಡ್ರಗ್ಸ್ ,ಗಾಂಜಾಗಳ ಅಕ್ರಮ ದಂಧೆಯ ಕಿಂಗ್ ಪಿನ್ ಗಳಾಗಿ ಹೊರಬೀಳುತ್ತಿದ್ದಾರೋ ಅಂತವರೆ ನಮ್ಮ ರೋಲ್ ಮಾಡೆಲ್ ಗಳಾಗಿ ಕಾಣುತ್ತಿದ್ದಾರೆ. ಎಲ್ಲಿಗೆ ತಲುಪಿದೆ ತರುಣ ರಾಷ್ಟ್ರದ ಮನಸ್ಥಿತಿ ಎಂಬುದೇ ಅರ್ಥವಾಗುತ್ತಿಲ್ಲ. ಈಗ ಚಾಲ್ತಿಯಲ್ಲಿರುವ ಚಂದನವನದ ಡ್ರಗ್ಸ್ ದಂಧೆಯ ವಿಚಾರದಲ್ಲೂ ಮುಂದೆ ಯಾವ ಯಾವ ಬಲಿಷ್ಠ (?) ಕುಳಗಳು ಹೊರಬೀಳುತ್ತವೆಯೂ ದೇವರೇ ಬಲ್ಲ. ಆದರೆ ಇನ್ನಾದರೂ ತಮ್ಮನ್ನು ತಾವು ಮಾರಿಕೊಳ್ಳುವ ಇಂತಹ ಕೆಲವು ನೀಚರಿಗೆ ಮರುಳಾಗದಿರೋಣ.ಪೋಷಕರೂ ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ದೂರದೂರಿಗೆ ಕಳುಹಿಸುವ ಮುನ್ನ ಎಚ್ಚರವಹಿಸಲಿ.
ಚೈತನ್ಯ, ಗಾಂಧಿ, ಬುದ್ಧ ,ಪರಮಹಂಸ, ವಿವೇಕಾನದರಂತಹ ಮಹಾನ್ ಮಹಿಮರು ನಮಗೆಲ್ಲ ಆದರ್ಶವಾಗಿ ಬದಲಾಗಲಿ…ಆಗ ಮಾತ್ರ ಭಾರತವನ್ನು ಕೆಲವು ಕುಲಗೇಡಿಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ಕಾಲವೇ ನಿರ್ಧರಿಸುತ್ತದೆ. ಭಾರತವನ್ನು ತುಂಡರಿಸಲು ಹೊರಟಿರುವ ಇಂತಹ ಕುಖ್ಯಾತ ಬೆವಕೋಫ ಬುದ್ಧಿಜೀವಿಗಳ ಆಟ ನಿಲ್ಲಲಿ. ಭಾರತ ಬದಲಾಗಲಿ…ಭಾರತ ವಿಶ್ವಗುರುವಾಗಲಿ… ಬನ್ನಿ ಬದಲಾಗೋಣ….ಬದಲಾಯಿಸೋಣ…
Leave a Comment