ಹೊನ್ನಾವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ `ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ’ ಹೊನ್ನಾವರ ಘಟಕವು ಶುಕ್ರವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ಶರಾವತಿ ಸರ್ಕಲ್ನಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಟ್ಟಡ ಕಾರ್ಮಿಕರು ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಸೂಕ್ತ ನ್ಯಾಯ ಸಿಗುವಂತೆ ಘೋಷಣೆ ಕೂಗಿದರು.

ಬಿಎಂಎಸ್ ಸಂಯೋಜಿತ ಕಟ್ಟಡ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಹರೀಶ್ಚಂದ್ರ ನಾಯ್ಕ ಮಾತನಾಡಿ, `ಕಳೆದ ಎರಡು-ಮೂರು ವರ್ಷಗಳಿಂದ ಬಾಕಿ ಇರುವ ಎಲ್ಲಾ ಧನಸಹಾಯದ ಅರ್ಜಿಗಳನ್ನು ವಿಲೇವಾರಿ ಮಾಡದೆ ಇರುವುದರಿಂದ ಹಣ ಸಂದಾಯವಾಗದೆ ಬಾಕಿ ಉಳಿದಿವೆ. ಸಾವಿರಾರು ಕೋಟಿ ರೂಪಾಯಿ ಹಣವನ್ನು ಬೇರೆ ರಾಜ್ಯದ ವಲಸೆ ಕಟ್ಟಡ ಕಾರ್ಮಿಕರಿಗೆ, ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಇಲಾಖೆಯ ಅಧಿಕಾರಿಗಳ ಖರ್ಚು ವೆಚ್ಚಕ್ಕಾಗಿ ಉಪಯೋಗಿಸುತ್ತಿರುವುದು ತಿಳಿದುಬಂದಿದೆ. ಇಷ್ಟು ಅಪಾರವಾದ ಹಣ ಬಿಡುಗಡೆಯಾದರೂ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ 5 ಸಾವಿರ ರೂ. ಸಹಾಯಧನ ಇನ್ನೂ ಶೇ.30 ರಷ್ಟು ಬಾಕಿ ಇದೆ. ಇದಕ್ಕೆ ಕಾರ್ಮಿಕ ಇಲಾಖೆಯ ಅವೈಜ್ಞಾ ನಿರ್ಧಾರಗಳು ಕಾರಣವಾಗಿದೆ’ ಎಂದರು. ಆನ್ಲೈನ್ ಅರ್ಜಿ ಪ್ರಾರಂಭದಿಂದ ಈವರೆಗೂ ಸರ್ವರ್ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಕಾರ್ಡ್ನಲ್ಲಿ ಮೊಬೈಲ್ ಲಿಂಕ್ ಹಾಗೂ ಹೆಸರು, ವಿಳಾಸ ತಿದ್ದುಪಡಿ ಮಾಡುವುದು ಸಧ್ಯ ಸ್ಥಗಿತಗೊಂಡಿದೆ. ಇದರಿಂ ಫಲಾನುಭವಿಗಳಿಗೆ ಆನ್ಲೈನ್ ಅರ್ಜಿ ಹಾಕಲು ಆಗುತ್ತಿಲ್ಲ. ಮದುವೆ ಧನ ಸಹಾಯ 50 ಸಾವಿರ ರೂ. ಹಣದಲ್ಲಿ 25 ಸಾವಿರ ರೂ. ಎಫ್ಡಿ ಠೇವಣಿ ಕೊಡುವುದನ್ನು ಕಡಿತಮಾಡಿ ಪೂರ್ತಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಹಲವಾರು ಬಾರಿ ವಿನಂತಿಸಲಾಗಿದ್ದು, ಅದು ಈವರೆಗೂ ಈಡೇರಲಿಲ್ಲ. ನಕಲಿ ಸಹಿ ಮಾಡು ಸಾಧ್ಯತೆ ಇರುವುದರಿಂದ ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ರಿನಿವಲ್ಗೆ ಸಹಿ ಮಾಡುವ ಹೊಣೆಗಾರಿಕೆಯನ್ನು ಕಟ್ಟಡ ಮಾಲಿಕರಿಗೆ ನೀಡದೆ ಲೈಸೆನ್ಸ್ ಪಡೆದ ಗುತ್ತಿಗೆದಾರರು ಮತ್ತು ಇಂಜಿನೀಯರ್ಗಳಿಗೆ ಮಾತ್ರ ಅವಕಾಶ ನೀಡಬೇಕು.ಕಾರ್ಮಿಕ ಇಲಾಖೆ ಮತ್ತು ಸಂಘಟನೆಗಳಿಗಾಗಿ ಒಂದು ತಂತ್ರಾಂಶ ಅಭಿವೃದ್ಧಿಪಡಿಸಿ ಕಾರ್ಮಿಕರಿಗೆ ಸುಲಭವಾಗಿ ಸಕಾಲದಲ್ಲಿ ಸೌಲಭ್ಯ ಸಿಗುವಂತೆ ಮಾಡಬೇಕು. ಇಎಸ್ಐ ಸೌಲಭ್ಯದಂತೆ ಕಾರ್ಮಿಕರು ಚಿಕಿತ್ಸೆ ಪಡೆದ ಆಸ್ಪತ್ರೆಗಳಿಗೆ ಮಂಡಳಿಯಿಂದ ಹಣ ಸಂದಾಯವಾಗಬೇಕು. ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಮದ ವಿಶೇಷ ಆದ್ಯತೆ ಮೇಲೆ ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಕಾರ್ಡ್ ನವೀಕರಣ ಹಾಗೂ ಸೌಲಭ್ಯದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ರಾಜ್ಯಾದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಿಗೆ ಕಾರ್ಮಿಕ ನಿರೀಕ್ಷಕರನ್ನು ನೇಮಿಸಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸೌಲಭ್ಯ ಸಿಗುವಂತೆ ಮಾಡಬೇಕು.ಈ ಬಾರಿಯ ಶೈಕ್ಷಣಿಕ ಧನ ಸಹಾಯಕ್ಕಾಗಿ ಕೇವಲ ಪಾಸಾದ ಅಂಕಪಟ್ಟಿಯನ್ನು ಪರಿಗಣಿಸಿ ಆನ್ಲೈನ್ನಲ್ಲೂ ಅರ್ಜಿ ಸಲ್ಲಿಸಲು ಶೈಕ್ಷಣಿಕ ವರ್ಷಾವಧಿ ಪೂರ್ಣ ಕಾಲಾವಕಾಶ ನೀಡಬೇಕು. ಕಾರ್ಮಿಕ ಫಲಾನುಭವಿಗಳ ಮನೆ ನಿರ್ಮಾಣ, ಖರೀದಿಗೆ 2 ಲಕ್ಷ ರೂ. ಬದಲು 10 ಲಕ್ಷಕ್ಕೆ ಹೆಚ್ಚಿಸಬೇಕು. 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಕೊಡುವ 1 ಸಾವಿರ ರೂ. ವೇತನದ ಬದಲಾಗಿ 3 ಸಾವಿರ ರೂ. ನಿವೃತ್ತಿ ವೇತನ ಕೊಡಬೇಕು. ಮರಳು, ಚಿರೆಕಲ್ಲು, ಜಲ್ಲಿ ಸೇರಿದಂತೆ ಕಚ್ಚಾ ಸಾಮಗ್ರಿಗಳಿಗೆ ಶೀಘ್ರ ಪರವಾನಿಗೆ ದೊರೆಯಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಇರುವಂತೆ ಇತರೆ ಅಲ್ಲಾ ಅಸಂಘಟಿತ ಕಾರ್ಮಿಕರಿಗೂ ಪ್ರತ್ಯೇಕ ಮಂಡಳಿ ರಚಿಸಿ ಅವರಿಗೂ ಸೌಲಭ್ಯ ಸಿಗುವಂತಾಗಬೇಕು. ಅತೀ ಶೀಘ್ರದಲ್ಲಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ರಾಜ್ಯದ ಎಲ್ಲಾ ಕಾರ್ಮಿಕ ಕಲ್ಯಾಣ ಮಂಡಳಿಯು ವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಾಗೇಶ ನಾಯ್ಕ, ರಾಜ್ಯ ಸದಸ್ಯ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಮೋಹನ ನಾಯ್ಕ, ಆದರ್ಶ ನಾಯ್ಕ, ಗೋಪಾಲ ನಾಯ್ಕ, ಸೀತಾರಾಮ ನಾಯ್ಕ, ಪರಮೇಶ್ವರ ಮಡಿವಾಳ, ಬಾಲಚಂದ್ರ ಕೆಸರಕೋಡ, ಸಾವಿತ್ರಿ ನಾಯ್ಕ, ಸೀತು ಇತರರು ಪಾಲ್ಗೊಂಡಿದ್ದರು. ಉಪ ತಹಸೀಲ್ದಾರ್ ಸತೀಶ ಗೌಡ ಅವರು ಮನವಿ ಸ್ವೀಕರಿಸಿದರು.
Leave a Comment