ಲಂಪಿ ಚರ್ಮಗಂಟು ರೋಗ /Lumpy skin disease
ಇದೊಂದು ಹೊಸ ರೀತಿಯ ವೈರಾಣು ಕಾಯಿಲೆ. ಲಂಪಿ ಚರ್ಮಗಂಟು ರೋಗವು ಜಾನುವಾರುಗಳಲ್ಲಿ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಒಂದು ವೈರಸ್ ಖಾಯಿಲೆಯಾಗಿದ್ದು, ಸಿಡುಬು ರೋಗ ವೈರಸ್ ಕುಟುಂಬದ ಮೇಕೆ ಸಿಡುಬು ಜಾತಿಗೆ ಸೇರುತ್ತದೆ. ಕುರಿ ಸಿಡುಬು ಸಹ ಇದೇ ಜಾತಿಯದ್ದು. ಈ ರೋಗವು ಮೂಲತಃ ಆಫ್ರಿಕಾ ದೇಶಗಳಲ್ಲಿ ಕಂಡುಬಮ್ದಿದ್ದು, ನಂತರದಲ್ಲಿ ಮಧ್ಯ ಪ್ರಾಚ್ಯ, ದಕ್ಷಿಣ ಪೂರ್ವ ಯೂರೋಪ್, ರಷ್ಯ ಮತ್ತು ಕಜಕ್ ಸ್ಥಾನಗಳಲ್ಲಿ ಕಂಡುಬ0ದಿತ್ತು.
ಲಂಪಿ ಚರ್ಮಗಂಟು ರೋಗ /Lumpy skin disease
ಇತ್ತೀಚಿಗೆ, ಒಡಿಷಾದಲ್ಲಿ ಹಾಗು ನಮ್ಮ ರಾಜ್ಯದಲ್ಲೂ ಸಹ ಚದುರಿದಂತೆ, ಚನ್ನರಾಯಪಟ್ಟಣ, ಸಿರಸಿ, ಕಲುಬುರಗಿ ವ್ಯಾಪ್ತಿಯಲ್ಲಿ ವಿರಳವಾಗಿ ಕಂಡುಬ0ದಿದೆ. ಇದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಕೈಪಿಡಿಯಂತೆ, ಒಂದು ಅಧಿಸೂಚಿತ ಖಾಯಿಲೆಯಾಗಿದೆ. ಈ ಕಾಯಿಲೆಯು ಪ್ರಮುಖವಾಗಿ, ಆರ್ದ್ರ ಬೇಸಿಗೆಯಲ್ಲಿ ರೋಗವಾಹಕಗಳಾದ ಕ್ಯುಲೆಕ್ಸ್, ಏಡಿಸ್ ಸೊಳ್ಳೆಗಳಿಂದ ಸ್ಟೊಮಾಕ್ಸಿಸ್, ಸ್ಟೆಬಲ್, ಬಯೋಮಿಯ ಎಂಬ ಕಚ್ಚುವ ನೊಣಗಳಿಂದ, ರೆಪಿಸೆಫಲಸ್ ಹಾಗೂ ಆಂಬ್ಲಿಯೋಮ ಉಣ್ಣೆಗಳ ಮೂಲಕ ಪ್ರಸರಣವಾಗುತ್ತದೆ.
ಉಳಿದಂತೆ, ರೋಗಗ್ರಸ್ತ ಪ್ರಾಣಿಗಳ ನೇರ ಸಂಪರ್ಕದಿಂದ, ವಿರಳವಾಗಿ ಕಲುಷಿತಗೊಂಡ ನೀರು / ಮೇವಿನಿಂದಲೂ ಸಹ ಈ ರೋಗವು ಹರಡಬಹುದು. ವೈರಾಣು ಅತೀ ಸದೃಢವಾಗಿದ್ದು, 55 ಡಿಗ್ರೀ ಸೆಂಟಿಗ್ರೇಡ್ ಉಷ್ಣತೆಯನ್ನು ಎರಡು ಗಂಟೆಗಳವರೆಗೂ ಮತ್ತು 65 ಡಿಗ್ರೀ ಉಷ್ಣತೆಯನ್ನು ಸುಮಾರು 3ಂ ನಿಮಿಷಗಳವರೆಗೂ ತಡೆಯಬಲ್ಲವು. ಸಮಾದಾನಕರ ವಿಷಯವೆಂದರೆ ಆದರೆ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ರೋಗಗ್ರಸ್ತ ಪ್ರಾಣಿಗಳಲ್ಲಿ ಜ್ವರ ಕಾಣಿಸಿಕೊಂಡ ಒಂದು ವಾರದಲ್ಲಿ ಚರ್ಮದಲ್ಲಿ ಗಂಟುಗಳು ಕಾಣಿಸಿ, ಕ್ರಮೇಣ ಚರ್ಮ ಗಂತಿ / ಹಕ್ಕಳೆ / ತುರಿಗಳಾಗಿ, ಇವುಗಳಲ್ಲಿ ವೈರಾಣು 35 ದಿನಗಳ ಕಾಲ ಉಳಿಯುತ್ತವೆ.
ಲಂಪಿ ಚರ್ಮಗಂಟು ರೋಗ /Lumpy skin disease
ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಲ್ಲಿ ಈ ವೈರಾಣುಗಳು ಇದ್ದು, ವೀರ್ಯ ಮತ್ತು ಹಾಲಿನ ಮುಖೇನ ಹೊರಹಾಕಲ್ಪಡುತ್ತವೆ. ರೋಗಗ್ರಸ್ತ ದನಗಳಲ್ಲಿ ಅತಿಯಾದ ಜ್ವರವಿದ್ದು, ಮಂಕಾಗಿ, ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ದುಗ್ದರಸಗಂತಿಗಳ ಊತ, ಹಾಲಿನ ಇಳುವರಿಯಲ್ಲಿ ಗಣನೀಯ ಇಳಿಕೆ, ಮೇವು ತಿನ್ನದೆ ಕ್ರಮೇಣವಾಗಿ ರಾಸುಗಳು ಬಡಕಲಾಗುತ್ತವೆ. ಸುಮಾರು 2 ರಿಂದ 5 ಸೆಂಮೀ ಗಾತ್ರದ ಚರ್ಮದ ಗಂತಿಗಳಾಗಿ ಕ್ರಮೇಣ ಈ ಗಂತಿಗಳು ನಾರುಯುತವಾಗಿ, ಕೊಳೆತು, ಚರ್ಮದ ಮೇಲೆ ಹಕ್ಕಳೆ / ತುರಿಗಳಾಗಿ ಧೀರ್ಘಕಾಲದವರೆಗೆ ಉಳಿದು ಚರ್ಮೋಧ್ಯಮಕ್ಕೆ ಭಾರಿ ನಷ್ಟವನ್ನುಂಟು ಮಾಡುತ್ತವೆ.
ತಳಿ ಸಂವರ್ಧನೆಗಾಗಿಯೇ ಇರುವ ಹೋರಿಗಳು ಬಂಜೆಯಾಗಿ, ಗರ್ಭ ತುಂಬಿದ ಆಕಳುಗಳಲ್ಲಿ ಗರ್ಭಪಾತವಾಗಿ ಬಹುಕಾಲದವರಿಗೆ ಬಂಜೆಯಾಗಿ ಉಳಿದುಬಿಡುತ್ತವೆ, ಅಲ್ಲದೆ ಮಾಸು ಚೀಲದ ಮೂಲಕ ರೋಗಪ್ರಸರಣದ ಸಾದ್ಯತೆಯೂ ಇದೆ. ಚಿಕಿತ್ಸೆ ಮಾಡಿಸದಿದ್ದಲ್ಲಿ ರೋಗ ಪೀಡಿತ ರಾಸುಗಳು ಬಡಕಲಾಗಿ, ಚರ್ಮದ ಗಂತಿಗಳು ಕೊಳೆತು, ನೊಣಗಳ ಉಪಟಳದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ಮಂದೆಯಲ್ಲಿನ ರಾಸುಗಳಲ್ಲಿ ಶೇ 10 ರಿಂದ 20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದಾಗಿದ್ದು, ಅವುಗಳಲ್ಲಿ ಶೇ 1 ರಿಂದ 5 ರಷ್ಟು ರಾಸುಗಳು ಸಾವನ್ನಪ್ಪಬಹುದು. ನಿಯಂತ್ರಣ ಮತ್ತು ತಡೆಗಟ್ಟುವಿಕೆ: 1. ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ಪ್ರಾಣಿಗಳಿಂದ ಬೇರ್ಪಡಿಸಿ ಕೂಡಲೆ ಚಿಕಿತ್ಸೆಗೆ ಒಳಪಡಿಸಬೇಕು.
ಲಂಪಿ ಚರ್ಮಗಂಟು ರೋಗ /Lumpy skin disease
ಸೊಳ್ಳೆಗಳ / ನೊಣಗಳ ಹಾವಳಿಯನ್ನು ನೊಣನಿವಾರಕ ಮುಲಾಮು ಹಚ್ಚಿ ಹತೋಟಿಯಲ್ಲಿಡಬೇಕು. 2. ಸೊಳ್ಳೆ ಪರದೆಗಳನ್ನು ಬಳಸಬೇಕು. 3. ರಾಸುಗಳ ಸಾಗಾಣಿಕೆ, ಜಾತ್ರೆ / ಪಶು ಮೇಳಗಳನ್ನು ಕಟ್ಟುನಿಟ್ಟಾಗಿ ನಿಷೇದಿಸಬೇಕು. 4. ದನದ ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ ಸೂಕ್ತವಾದ ಅಂಟುಜಾಡ್ಯ ನಿವಾರಕಗಳಾದ 2-3% ಸೋಡಿಯಂ ಹೈಪೋಕ್ಲೋರೈಟ್, 2% ವಿರ್ಕಾನ್, 1:33 ಅಯೋಡಿನ್, 20% ಈಥರ್, 1% ಕ್ಲೋರೊಫಾರ್ಮ್, ಫಾರ್ಮಲಿನ್ ಗಳನ್ನು, ಪಶುವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಸಿಂಪಡಿಸಬೇಕು. 5. ಚೇತರಿಕೆಗೆ ಎರಡರಿಂದ ಮೂರು ವಾರಗಳ ಚಿಕಿತ್ಸೆಯು ಬೇಕಾಗುತ್ತದೆ. 6. ಸತ್ತ ರಾಸುಗಳ ಕಳೇಬರವನ್ನು ಆಳವಾಗಿ ಹೂತು ಅಂಟುಜಾಡ್ಯ ನಿವಾರಕವನ್ನು ಸಿಂಪಡಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. 7. ಹೊರದೇಶದಲ್ಲಿ ದುರ್ಬಲಗೊಳಿಸಿದ ಜೇವಂತ ಲಸಿಕೆಗಳು ಲಭ್ಯವಿದ್ದು; ಉಳಿದ ದೇಶಗಳಲ್ಲಿ ರೋಗೋದ್ರೇಕ ಸಂದರ್ಭಗಳಲ್ಲಿ, ಮೇಕೆ /ಕುರಿ ಸಿಡುಬಿನ ಲಸಿಕೆಯನ್ನೇ ಉಪಯೋಗಿಸಿ ಈ ರೋಗವನ್ನು ನಿಯಂತ್ರಿಸಿದ ನಿದರ್ಶನಗಳಿವೆ.
ಲಂಪಿ ಚರ್ಮಗಂಟು ರೋಗ /Lumpy skin disease
ಮನೆ ಮದ್ದು: ಅನೇಕ ರೀತಿಯ ಮನೆ ಮದ್ದುಗಳನ್ನು ಬಳಸಬಹುದು.ಹಸಿ ಬೇವಿನ ಎಲೆಗಳು 100 ಗ್ರಾಂ ತುಳಸಿ ಎಲೆಗಳು 100 ಗ್ರಾಂ ಬೆಳ್ಳುಳ್ಳಿ 100 ಗ್ರಾಂ ಅರಿಶಿಣ 50 ಗ್ರಾಂ ಬೇವಿನ ಎಣ್ಣೆ 500 ಗ್ರಾಂ ಎಲ್ಲವನ್ನೂ ಚೆನ್ನಾಗಿ ಅರೆದು ಬೇವಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಶರೀರದ ಮೇಲೆ ಇರುವ ಹುಣ್ಣುಗಳ ಮೇಲೆ 10-15 ದಿನ ನಿಯಮಿತವಾಗಿ ಲೇಪಿಸಬೇಕು. ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಈ ರೋಗವು ಇತ್ತೀಚೆಗೆ ಜಾನುವಾರುಗಳಲ್ಲಿ ಬಹಳವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಮಾಹಿತಿಯನ್ನು ಬಹುಜನರಿಗೆ ತಲುಪಿಸುವುದು ಒಳ್ಳೆಯದು.
(ಮಾಹಿತಿ ಮೂಲ: ಡಾ:ಬಿ.ಎಂ.ವೀರೇಗೌಡ)
Leave a Comment