ಕಾರವಾರ: ಔಷಧಿ ನೀಡುವುದಾಗಿ ನಂಬಿಸಿ 2.34 ಲಕ್ಷ ರೂ ವಂಚಿಸಿದ ನಕಲಿ ವೈದ್ಯನಿಗೆ 3 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ಸಿ.ಜಿ.ಎಂ ನ್ಯಾಯಾಲಯದ ನ್ಯಾಯಾದೀಶ ಎನ್ ಎಂ ರಮೇಶ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ಮೂಲದ ಹರೀಶ ಯಲ್ಲಪ್ಪ ಗೊಲ್ಲರ್ ಎಂಬ ವ್ಯಕ್ತಿಯೂ ಇನ್ನೊಬ್ಬ ಆರೋಪಿಯ ಜೊತೆ ಸೇರಿ ಕಾರವಾರದ ಹೊಟೇಲ್ ವೊಂದರಲ್ಲಿ ಪರಿಚಯವಾದ ಶ್ರೀಕಾಂತ ಆನಂದರಾವ್ ದೇಶಪಾಂಡೆ ಎಂಬಾತರಿಗೆ ಔಷಧಿ ನೀಡುವುದಾಗಿ ನಂಬಿಸಿದ್ದರು. ಶ್ರೀಕಾಂತ ಆನಂದರಾವ್ ದೇಶಪಾಂಡೆ ಅವರ ಕೈ ನಡುಗುತ್ತಿದ್ದ ಇದಕ್ಕೆ ಚಿಕಿತ್ಸೆ ಕೊಡುವುದಾಗಿ ತಿಳಿಸಿ ಹಬ್ಬುವಾಡ ಬಾಡಿಗೆ ಕಚೇರಿಯೊಂದಕ್ಕೆ ಕರೆದೊಯ್ದು 2.30 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಇಲ್ಲದ ಬಗ್ಗೆ ತಿಳಿಸಿದಾಗ ಕಿಸೆಯಲ್ಲಿ ಇದ್ದ 4 ಸಾವಿರ ರೂ ಪಡೆದು ಉಳಿದ ಹಣವನ್ನು ಖಾತೆಗೆ ಜಮಾ ಮಾಡುವಂತೆ ಸೂಚಿಸಿದ್ದರು. ಔಷಧಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಶ್ರೀಕಾಂತ ಅವರು ಖಾತೆಗೆ ಹಣ ಜಮೆ ಮಾಡಿದ್ದರು. ಆದರೆ, ಅವರಿಗೆ ನಕಲಿ ವೈದ್ಯ ಯಾವುದೇ ಔಷಧಿ ನೀಡಿರಲಿಲ್ಲ.
ಹಬ್ಬುವಾಡದ ಕಚೇರಿಗೆ ಆಗಮಿಸಿ ನೋಡಿದಲ್ಲಿ ಅವರು ಬಾಡಿಗೆ ಕಚೇರಿಯನ್ನು ಖಾಲಿ ಮಾಡಿದ್ದರು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಅಂದಿನ ಪಿಸೈ ಭಗವಂತ ಕಾಳೆ ತನಿಖೆ ನಡೆಸಿ ಆರೋಪಿ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ದೂರುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಮಹಾದೇವ ಗಡದ್ ವಾದ ಮಂಡಿಸಿದ್ದರು.
Leave a Comment