ಮುಂಡಗೋಡ : ತಾಲೂಕಿನ ಚಿಗಳ್ಳಿ ಹಾಗೂ ಬಾಚಣಕಿ ಗ್ರಾಮಗಳಲ್ಲಿ ಒಟ್ಟು ನಾಲ್ಕು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋದ ಘಟನೆ ರಾತ್ರಿ ನಡೆದಿದೆ.
ಚಿಗಳ್ಳಿ ಗ್ರಾಮದ ಫಕೀರಪ್ಪ ಹರಿಜನ ಎಂಬುವರ ಮನೆಯ ಹಿತ್ತಲಿನಲ್ಲಿ ಒಂದು ಮರ, ಉಪಾಸಗೇರಿ ಓಣಿಯಲ್ಲಿ ಇರುವ ಝಂಡೇಕಟ್ಟಿಯ ಬಳಿಯಲ್ಲಿದ್ದ ಒಂದು ಮರ, ಉಲ್ಲಾಸ ಕುಲಕರ್ಣಿ ಎಂಬುವರ ಮನೆಯ ಆವರಣದಲ್ಲಿದ್ದ ಒಂದು ಮರ ಸೇರಿ ಒಟ್ಟು 3 ಶ್ರೀಗಂಧದ ಮರಗಳನ್ನು ಕಡಿದುಕೊಂಡು ಟೊಂಗೆಗಳನ್ನು ಅಲ್ಲಿಯೆ ಬಿಟ್ಟಿದ್ದಾರೆ.

ಬಾಚಣಕಿ ಗ್ರಾಮದ ಯಲ್ಲಪ್ಪಾ ಕರಡಿ ಎಂಬುವರ ಮನೆಯ ಮುಂಭಾಗಲ್ಲಿದ್ದ ಒಂದು ಶ್ರೀಗಂಧದ ಮರವನ್ನು ಕಡಿದಿದ್ದಾರೆ. ಮನೆಯಿಂದ ಸ್ವಲ್ಪ ದೂರದಲ್ಲಿ ಟೊಂಗೆಗಳನ್ನು ಬೇರ್ಪಡಿಸುತ್ತಿರುವಾಗ ಶಿವಪ್ಪ ಗುಂಜಾಳ ಮತ್ತು ರಾಜು ಹೊತಗಣ್ಣವರ ಇವರಿಬ್ಬರು ಸೇರಿ ಬೆನ್ನು ಹತ್ತಿದಾಗ 4 ಜನ ಕಳ್ಳರು ಶ್ರೀಗಂಧದ ಕಟ್ಟಿಗೆ ಸಮೇತ ಪರಾರಿಯಾಗಿದ್ದಾರೆ.
ಬಾಚಣಕಿ ಗ್ರಾಮದ ಶ್ರೀಪಾದ ಪಾಯಣ್ಣನವರ ಎಂಬುವರ ಮನೆಯ ಹಿತ್ತಲಿನಲ್ಲಿದ್ದ 15 ಶ್ರೀಗಂಧದ ಮರಗಳ ಪೈಕಿ 9 ಗಿಡಗಳಿಗೆ ಕಚ್ಚು ಹಾಕಿ ನೋಡಿ ಎಳೆಯ ಮರವೆಂಬ ಕಾರಣಕ್ಕೆ ಹಾಗೆಯೇ ಬಿಟ್ಟು ಹೋಗಿದ್ದಾರೆ.
ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಅವ್ಯಾಹತವಾಗಿ ಶ್ರೀಗಂಧದ ಮರಗಳು ಕಳುವು ಆಗುತ್ತಿರುವುದು ಯಕ್ಷ ಪಶ್ನೆಯಾಗಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ನ್ಯಾಸರ್ಗಿ, ಟಿಬೆಟಿಯನ್ ಕಾಲೋನಿ ಸೇರಿದಂತೆ ಇತರ ಕಡೆ ಶ್ರೀಗಂಧದ ಗಿಡ ಕಡಿದಿರುವ ಘಟನೆ ನಡೆದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
Leave a Comment