ಕಾರವಾರ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ರೈತ ಪರ ನಿಲುವು ಹೊಂದಿದ್ದು 2022ರ ಒಳಗೆ ರೈತರ ಆದಾಯವನ್ನು ದ್ವಿಗುಣ ಮಾಡುವ ಗುರಿ ಹೊಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪ್ರಯೋಜನಕಾರಿ ಅಂಶಗಳನ್ನು ಬಿಜೆಪಿ ಜಾರಿಗೆ ತಂದಿದೆ. ಆದರೂ, ವಿರೋಧಿ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡೆಯಿಂದ ರೈತರಿಗೆ ಅನುಕೂಲ ಆಗಲಿದೆ. ಮದ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕಾಯ್ದೆ ಸಹಾಯವಾಗಲಿದೆ. ರೈತ ತಾನು ಬೆಳೆದ ಉತ್ಪನ್ನವನ್ನು ದೇಶದ ಯಾವುದೇ ಮೂಲೆಗೆ ಮಾರಾಟ ಮಾಡಲು ಈ ಕಾಯ್ದೆ ಅವಕಾಶ ನೀಡುತ್ತದೆ ಎಂದು ಹೇಳಿದರು. ಮೊದಲು ರೈತ ಬೆಳೆದ ಬೆಳೆಗಳು ಎಪಿಎಂಸಿ ಮೂಲಕವೇ ಮಾರಾಟ ಆಗಬೇಕಿತ್ತು. ಇದರಿಂದ ಮದ್ಯವರ್ತಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತಿತ್ತು. ನೇರ ಮಾರಾಟ ವ್ಯವಸ್ಥೆಯಿಂದ ರೈತರಿಗೆ ಪ್ರಯೋಜನವಾಗಲಿದೆ ಎಂದರು.
ರೈತ ಹಾಗೂ ಉದ್ದಿಮೆದಾರರ ನಡುವಿನ ಸಂಪರ್ಕಕೊಂಡಿಯಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಉದ್ದಿಮೆದಾರರು ರೈತ ಬೆಳೆಯುವ ಉತ್ಪನ್ನಕ್ಕೆ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರಿದಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಇದರಿಂದ ಬೆಳೆ ನಷ್ಟ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ ಎಂದರು. ದಲ್ಲಾಳಿಗಳ ಜೊತೆ ಸೇರಿಕೊಂಡ ವಿರೋಧ ಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂದು ದೂರಿದರು.
ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಮಹೇಶ ಹೊಸಕೊಪ್ಪ, ಪ್ರಮುಖರಾದ ನಾಗರಾಜ ನಾಯಕ ಇತರರು ಇದ್ದರು.
Leave a Comment