ಪ್ರತಿ ಆರು ತಿಂಗಳಿಗೊಮ್ಮೆ ರೈತರು ತಮ್ಮ ಪಹಣಿ ಪತ್ರಿಕೆಯನ್ನು ಹೊಸದಾಗಿ ಪಡೆದು ಪಹಣಿ ಪತ್ರಿಕೆಯಲ್ಲಿನ ದಾಖಲಾತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕೆಂದು ಹೊನ್ನಾವರ ತಾಲೂಕಾ ದಂಡಾಧಿಕಾರಿ ವಿವೇಕ್ ಶೇಣ್ವಿ ಸಲಹೆ ನೀಡಿದರು.

ಅವರು ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಹೊನ್ನಾವರ ಹೋಬಳಿಮಟ್ಟದ ಕಂದಾಯ ಅದಾಲತ್ ಸಭೆ ನಡೆಸಿ ರೈತರ ಅಹವಾಲುಗಳಿಗೆ ಸ್ಪಂದಿಸಿದರು.
ಪಹಣಿಪತ್ರಿಕೆಗಳು ಗಣಕೀಕೃತಗೊಂಡ ತರುವಾಯ ಪಹಣಿ ಪತ್ರಿಕೆಗಳಲ್ಲಿನ ಲೋಪದೋಷಗಳನ್ನು ಸಕಾಲದಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೇ ಗ್ರಾಮೀಣರು ತಮ್ಮ ಗ್ರಾಮದಲ್ಲೇ ಪಹಣಿ ಪತ್ರಿಕೆಗಳನ್ನು ಸಕಾಲದಲ್ಲಿ ಪಡೆಯಬಹುದಾಗಿದೆ.
ಬೆಳೆ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳನ್ನು ರೈತರ ಮನೆಬಾಗಿಲಿನಲ್ಲೆ ಪಡೆಯುವಂತೆ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪಹಣಿಪತ್ರಿಕೆಗಳಲ್ಲಿ ಲೋಪದೋಷ ತಿದ್ದುಪಡಿ, ದುರಸ್ತಿ, ಸೇರ್ಪಡೆ ಮುಂತಾದವುಗಳನ್ನು ರೈತರಿರುವಲ್ಲೆ ತೆರಳಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪಿಂಚಣಿದಾರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಕೆಲವು ಪ್ರಕರಣಗಳ ಇತ್ಯರ್ಥದ ವ್ಯಾಪ್ತಿಯು ಉಪವಿಭಾಗಾಧಿಕಾರಿಗಳಿಗೆ ಸೇರಿದ್ದಾಗಿದೆ. ಮುಂದಿನ ದಿನದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೃಹತ್ ಕಂದಾಯ ಅದಾಲತ್ ನಡೆಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಆರು ಪಿಂಚಣಿದಾರ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಮೂವತ್ತೆರಡು ಭೂಮಾಲೀಕರ ಪಹಣಿ ಪತ್ರಿಕೆಗಳ ಲೋಪದೋಷಗಳಿಗೆ ಪರಿಹಾರ ಕಲ್ಪಿಸಲಾಯಿತು. ಗ್ರಾ.ಪಂ. ಆಡಳಿತಾಧಿಕಾರಿ ಮಹೇಶ್, ಗ್ರಾ.ಪಂ.ಮಾಜಿ ಸದಸ್ಯ ಎಂ.ಜಿ.ಹೆಗಡೆ ಕಡ್ಲೆ, ಪಿಡಿಓ ವನಮಾಲಾ ನಾಯ್ಕ,ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರಾದ ಅಸ್ಲಂ ಗಣಿ ಮತ್ತಿತರ ಅಧಿಕಾರಿಗಳು ಹಾಜರಿದ್ದು ಸ್ಪಂದಿಸಿದರು.
Leave a Comment