ಮಳೆಗಾಲದಲ್ಲಿ ತರಕಾರಿ ಬೆಳೆಯುವ ಮೂಲಕ ದುಡಿಮೆಯ ದಾರಿ ಕಂಡುಕೊಂಡಿದ್ದ ತಾಲೂಕಿನ ನೂರಾರು ಕುಟುಂಬಕ್ಕೆ ಕೊರೊನಾಘಾತಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ ನಾಗರ ರೋಗ. ಕಷ್ಟಪಟ್ಟು ಬೆಳೆಸಿದ ತರಕಾರಿ ಗಿಡಗಳೆಲ್ಲಾ ನಾಗರ ಬಂದು ಫಸಲನ್ನು ನೀಡಿದೇ ಮುರುಟಿ ಹೋಗಿದೆ. ಅಳಿದುಳಿದ ಗಿಡಗಳಲ್ಲಿಯೇ ಸಿಕ್ಕ ಒಂದಿಷ್ಟು ಬೆಂಡೆ ಹೀರೆ ಸೌತೆಕಾಯಿಗಳನ್ನೇ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ತೆಗೆಯುವ ಪ್ರಯತ್ನ ನಡೆಯುತ್ತಲೇ ಇದೆ.

ಆದರೆ ತನ್ನ ವಿಶಿಷ್ಟ ರುಚಿಯಿಂದ ತಾಲೂಕಿನ ಮನೆಮಾತಾಗಿದ್ದ ಇಬ್ಬುಡ್ಲ ಹಣ್ಣು ಮಾತ್ರ ಈ ಬಾರಿ ಎಲ್ಲಿಯೂ ತಿನ್ನುವುದಕ್ಕಿರಲಿ ಕಾಣಲು ಸಿಗುವುದೇ ಅಪರೂಪ ಎನ್ನುವಂತಾಗಿದೆ.
ಮೊಗೆಕಾಯಿ ಜಾತಿಗೆ ಸೇರಿದ ಗಾತ್ರದಲ್ಲಿ ಅಷ್ಟೇ ಇರುವ ಆದರೆ ತುಸು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುವ ಇಬ್ಬುಡ್ಲ ಕಾಯಿ ಹಣ್ಣಾದಂತೆ ಮೈ ಬಿರಿದು ಸುವಾಸನೆ ಬೀರುತ್ತದೆ. ಹಣ್ಣಿನ ಸಿಪ್ಪೆ ಮತ್ತು ಬೀಜವನ್ನು ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಹೆಚ್ಚಿ ತೆಂಗಿನ ಕಾಯಿ ಹಾಲು ಸಕ್ಕರೆ, ಏಲಕ್ಕಿ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ ದೋಸೆಯೊಂದಿಗೆ ಅಥವಾ ಪ್ರತ್ಯೇಕವಾಗಿ ಮನೆಮಂದಿಯೆಲ್ಲಾ ಸವಿಯುತ್ತಿದ್ದ ಇಬ್ಬುಡ್ಲ ಪಾಯಸ ಈ ವರ್ಷ ಬರೀ ನೆನಪಷ್ಟೇ ಆಗಿದೆ.
ಯಾರಿಗಾದರೂ ಐವತ್ತು ರುಪಾಯಿ ಹಣ್ಣು ಕೊಟ್ಟರೆ ಅವರು ನೂರೈವತ್ತು ರುಪಾಯಿ ಖರ್ಚುಮಾಡಿ ರಸಾಯನ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ವ್ಯಂಗವಾಗಿ ಇಬ್ಬುಡ್ಲನ್ನು ಶತ್ರುಗಳಿಗೆ ಕೊಡುವ ಹಣ್ಣು ಎಂದೂ ಕರೆಯುತ್ತಾರೆ.

Leave a Comment