ಹೊನ್ನಾವರ – ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟಿದ ದಿನವನ್ನು ರಾಷ್ಟ್ರಾದ್ಯಂತ ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಿಸುತ್ತಾರೆ. ಜೊತೆಗೆ ಗಾಂಧೀಜಿಯವರು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ತತ್ವಾದರ್ಶಗಳನ್ನು ನೆನಪಿಸಿಕೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ಅರ್ಥಬರುತ್ತದೆ ಎನ್ನುವ ಅಣಿಮುತ್ತನ್ನೂ ವೇದಿಕೆಯಲ್ಲಿದ್ದವರು ಅಂದು ಉದುರಿಸುತ್ತಾರೆ ಮಾತ್ರವಲ್ಲ ಕೇಳಿಸಿಕೊಂಡವರೂ ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿರುತ್ತಾರೆ.

ಆದರೆ ಪ್ರತೀ ವರ್ಷ ಗಾಂಧಿಜಯಂತಿಯಂದು ಸ್ವಚ್ಛತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ನನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇನೆನ್ನುವ ಸಂಕಲ್ಪ ತೊಟ್ಟವರು ಆಡಿದ ಮಾತನ್ನು ಮಾಡಿದ ಪ್ರತಿಜ್ಞೆಯನ್ನು ಅದೆಷ್ಟು ದಿನ ನೆನಪಿಟ್ಟುಕೊಂಡು ಪಾಲಿಸುತ್ತಾರೆ ಎಂದು ಯಾರಿಂದಲೂ ಹೇಳು ಸಾಧ್ಯವಿಲ್ಲ. ಯಾಕೆಂದರೆ ಗಾಂಧೀ ಜಯಂತಿಯನ್ನು ಪ್ರತೀ ವರ್ಷ ಆಚರಿಸುತ್ತಿದ್ದರೂ ಇಂದಿಗೂ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.
ಹೊನ್ನಾವರ ಪಟ್ಟಣದ ಶಕ್ತಿಕೇಂದ್ರ ಎನಿಸಿರುವ ತಹಶೀಲ್ದಾರ್ ಕಛೇರಿಯ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯ ಹಾಗೂ ಅದರ ಆಚೆ ಈಚೆ ನೋಡಿದರೆ ಎಂತವರಿಗೂ ಹೇವರಿಕೆ ಹುಟ್ಟುತ್ತದೆ. ದಿನಬೆಳಗಾದರೆ ಪಟ್ಟಣ ಪಂಚಾಯತ ಕಸವಿಲೇವಾರಿ ವಾಹನಗಳು ಸ್ವಚ್ಛತೆಯ ಬಗ್ಗೆ ಕಹಳೆಮೊಳಗಿಸುತ್ತಾ ಬಂದರೂ ಕಸದ ರಾಶಿ ರಸ್ತೆ ಪಕ್ಕದಲ್ಲಿ ಶೇಖರಣೆಯಾಗುವುದು ಮಾತ್ರ ತಪ್ಪಿಲ್ಲ. ನಿತ್ಯ ಸಾವಿರಾರು ಜನರು ಬೇಟಿಕೊಡುವ ಜಾಗದಲ್ಲಿದ್ದರೂ ಶೌಚಾಲಯದ ದುರವಸ್ಥೆಯನ್ನು ಸರಿಪಡಿಸುವ ದೊಡ್ಡತನ ಯಾವ ಅಧಿಕಾರಿಗೂ ಬಂದಿಲ್ಲ. ಶೌಚಾಲಯದ ಹೊಲಸು ತುಂಬಿಕೊಳ್ಳುವುದಕ್ಕೆ ಮಾಡಿದ ಟ್ಯಾಂಕ್ ಮೇಲಿನ ಮುಚ್ಚಿದ ಹಲಗೆಗಳು ಮುರಿದು ಎಲ್ಲಾಕಡೆ ತೆರೆದುಕೊಂಡು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಬದಲಾಗಿದೆ. ಇನ್ನು ಮುಂದಾದರೂ ಪಟ್ಟಣ ಪಂಚಾಯತ ಎಚ್ಚೆತ್ತುಕೊಂಡು ಪಟ್ಟಣದ ಸ್ವಚ್ಛತೆಗೆ ಗಮನ ಹರಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

Leave a Comment