ಹೊನ್ನಾವರ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ, ಕೇಂದ್ರ ಹಾಗೂ ರಾಜ್ಯದ ಬಿ.ಜೆ.ಪಿ ಸರಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಮಸೂದೆಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಹಿ ಸಂಗ್ರಹಣೆ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿ ಹೊನ್ನಾವರ ತಹಶೀಲ್ದಾರ ವಿವೇಕ ಶೇಣ್ವಿಯವರಿಗೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ-ರಾಜ್ಯ ಸರಕಾರಗಳು ಜಾರಿಗೆ ತಂದ ಮೂರು ಕರಾಳ ಮಸೂದೆಗಳನ್ನು ತಕ್ಷಣ ಹಿಂಪಡೆಯಬೇಕು. ಕೃಷಿಕರ ಮೇಲೆ ಸವಾರಿ ಹೊರಟ ಸರಕಾರದ ನಿಲುವನ್ನು ಸಹಿಸಲು ಅಸಾಧ್ಯ. ಮೋದಿ ಸರಕಾರ ಹಸಿರು ಕ್ರಾಂತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ದೇಶದ ಅನ್ನ ನೀಡುವ ಅನ್ನದಾತನ ಬೆನ್ನೆಲುಬನ್ನು ಮುರಿಯುವ ಹುನ್ನಾರ ಈ ಮಸೂದೆಯಲ್ಲಿದೆ ಎಂದು ಖೇದ ವ್ಯಕ್ತಪಡಿಸಲಾಗಿದೆ. ದೇಶದ 62 ಕೋಟಿ ಜನ ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಧಿಕಾರದ ಮದ, ಬಂಡವಾಳ ಶಾಹಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಇಂತಹ ಕರಾಳ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಪತ್ರದಲ್ಲಿ ಆಪಾದಿಸಲಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಈ ಮಸೂದೆಯನ್ನು ನ್ಯಾಯ ಬದ್ಧವಾಗಿ ವಿರೋದಿಸುತ್ತಿರುವವರ ಮೇಲೆ ಅನಗತ್ಯವಾಗಿ ಸರಕಾರ ಲಾಠಿ ಚಾರ್ಜ ಮೂಲಕ ಬೆದರಿಸುತ್ತಿದೆ. ದೇಶದ ನೂರಾರು ರೈತ ಸಂಘಟನೆಗಳ ಬಾಯನ್ನು ಬೆದರಿಕೆಯ ಮೂಲಕ ಬಂದ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಕೂಡಲೇ ವಾಪಸ್ಸು ಪಡೆಯುವಂತೆ ಆಗ್ರಹಿಸಲಾಗಿದೆ.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ದೇಶದ ರೈತ ಸಂಘಟನೆ, ರೈತ ಮುಖಂಡರು ಅಷ್ಟೇ ಅಲ್ಲದೇ ವಿದಾನಸಭೆ ಮತ್ತು ಲೋಕಸಭೆಯಲ್ಲಿ ಚರ್ಚಿಸದೇ ಈ ಕರಾಳ ಮಸೂದೆಯನ್ನು ಅಂಗೀಕರಿಸಲಾಗಿದೆ. ಮೋದಿ ಸರಕಾರ ರೈತರ ಬೆಳೆಯನ್ನು ದೇಶದ ಯಾವುದೇ ಮಾರÀುಕಟ್ಟೆಯಲ್ಲಿ ಮಾರಾಟ ಮಾಡಬಹುದು ಅನ್ನೋ ಸುಳ್ಳನ್ನು ಜನತೆಗೆ ಹೇಳುತ್ತಿದೆ. ಇದರಿಂದ ಎ.ಪಿ.ಎಂ.ಸಿ ನಾಶ ಖಚಿತ ಎಂದು ಆಪಾದಿಸಿದರು. ದೇಶದ ಶೇ16.5% ರೈತರು 5 ಎಕೆರೆಗಿಂತ ಕಡಿಮೆ ತುಂಡು ಭೂಮಿಯನ್ನು ಹೊಂದಿದ್ದಾರೆ. ಇಂತಹ ಕರಾಳ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತನ ಹೊಟ್ಟೆ ಮೇಲೆ ಬರೆ ಎಳೆದಿದೆ. ಇಂತಹ ರೈತ ವಿರೋಧಿ ಕಾನೂನು ಕೂಡಲೇ ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಹೊನ್ನಾವರ ಕಾಂಗೇಸ್ ಸೇವಾದಳ ಅಧ್ಯಕ್ಷ ಸಂತೋಷ ಮೇಸ್ತ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಸಾಬ್, ಶಕ್ತಿ ಸಂಚಾಲಕ ಬಾಲಚಂದ್ರ ನಾಯ್ಕ, ಮಾದೇವ ನಾಯ್ಕ, ಕರ್ಕಿ, ಸಾಲ್ವೋದರ ಡಿಸೋಜಾ, ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ನೆಲ್ಸನ್ ರೊಡ್ರಿಗಿಸ್, ಜೋಸೆಪ್ ಡಿಸೋಜಾ, ಕೃಷ್ಣ ಹರಿಜನ, ಅಲ್ಲು ಪಾತ್ರೊನ ಫರ್ನಾಂಡಿಸ್, ಬಿ. ಕಾರ್ತಿಕ್, ಮದನ್ ರಾಜ್, ಲಾರ್ಸನ್ ರೊಡ್ರಿಗಿಸ್, ಅಜಮ್ ಶೇಖ, ಶಂಕರ ಮೇಸ್ತ, ಪಾಂಡುರಂಗ ನಾಯ್ಕ ಇನ್ನು ಮುಂತಾದವರು ಉಪಸ್ಥಿತರಿದ್ದರು.
Leave a Comment