ಹೊನ್ನಾವರ; ಇತ್ತಿಚಿಗೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿ ಮನಿಷಾಳ ಅತ್ಯಾಚಾರದಂತಹ ಹೀನ ಕೃತ್ಯ ಖಂಡಿಸುವ ಜೊತೆ ಸಾವಿನ ತನಿಖೆಯನ್ನು ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಘಟಕ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಶರಾವತಿ ವೃತ್ತದಿಂದ ತಹಶೀಲ್ದಾರ್ ಕಛೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿದರು. ಉತ್ತರಪ್ರದೇಶದಲ್ಲಿ ದಲಿತ ಸಮುದಾಯದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಕೋಮು ಸಂಘರ್ಷ ತಾರಕಕ್ಕೇರಿದ್ದು ಅಲ್ಪಸಂಖ್ಯಾತರು ಹಿಂದುಳಿದ ವರ್ಗದ ಜನರು ಗಲಭೆಗಳಲ್ಲಿ ಬಲಿಯಾಗುತ್ತಿದ್ದಾರೆ. ಪೊಲೀಸರು ಅಮಾನವೀಯ ವರ್ತನೆ ತೋರುತ್ತಿದ್ದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಉತ್ತರಪ್ರದೇಶದಲ್ಲಿರುವ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು, ಮನಿಷಾಳ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವುದನ್ನು ಬಿಟ್ಟು ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಶವವನ್ನು ಕುಟುಂಬಕ್ಕೆ ನೀಡದೇ ಸುಟ್ಟು ಹಾಕಿದ ಪೊಲೀಸರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಹಶೀಲ್ದಾರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿದರು. ನಾಗರಾಜ ಹಳ್ಳೇರ, ಜಿ.ಟಿ.ಹಳ್ಳೇರ, ಎಸ್.ಎಮ್.ಹಳ್ಳೇರ, ಕಮಲಾಕರ ಮುಕ್ರಿ, ಮಂಜುನಾಥ ಹಳ್ಳೇರ, ಗಣಪತಿ ಹಳ್ಳೇರ, ಪ್ರಭು ಹಳ್ಳೇರ, ಶ್ರೀಕಾಂತ ಹಳ್ಳೇರ, ಮೋಹನ ಹಳ್ಳೇರ ಮುಂತಾದವರು ಹಾಜರಿದ್ದರು.
Leave a Comment