ಕೊರೊನಾ ಬಗ್ಗೆ ಭಯಗೊಂಡು ಲಾಕ್ಡೌನ್ ಜಾರಿ ಮಾಡಿದಾಗ ದೂರದ ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಿಂದ ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ಸಿಕ್ಕಿಹಾಕಿಕೊಂಡು ಕೆಲಸವೂ ಇಲ್ಲದೆ ಊಟಕ್ಕೂ ಪರದಾಡಿದ ಘಟನೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕೆಲದಿನ ಹಾಸ್ಟೆಲ್ಗಳಲ್ಲಿಟ್ಟು ಉಪಚರಿಸಿ ಬಸ್ಸುಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು.

ಇದೀಗ ಲಾಕ್ಡೌನ್ ಮಾರ್ಗಸೂಚಿಗಳು ಬದಲಾಗಿದ್ದು ಬಹತೇಕ ಎಲ್ಲಾ ಚಟುವಟಿಕೆಗಳು ಮೊದಲಿನಂತೆ ಪ್ರಾರಂಭವಾಗಿದೆ. ಮರಳುಗಾರಿಕೆ, ಮೀನುಗಾರಿಕೆ, ಗಾರೆ ಕೆಲಸ, ರಸ್ತೆ, ಸೇತುವೆ, ಬೃಹತ್ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು ಅತ್ಯವಶ್ಯವಾಗಿದ್ದು ಗುತ್ತಿಗೆದಾರರು ಬೋಟ್ ಮಾಲಿಕರು ಬಿಹಾರಿ, ಉತ್ತರಪ್ರದೇಶ ಮುಂತಾದ ರಾಜ್ಯಗಳ ಕಾರ್ಮಿಕರನ್ನು ಸಂಫರ್ಕಿಸುವ ಪ್ರಯತ್ನದಲ್ಲಿದ್ದಾರೆ. ಕಾರ್ಮಿಕರೂ ಇಲ್ಲಿಗೆ ಬರಲು ಉತ್ಸುಕರಾಗಿದ್ದರೂ ಒಬ್ಬೊಬ್ಬ ಕಾರ್ಮಿಕನನ್ನು ಅಲ್ಲಿಂದ ಇಲ್ಲಿಗೆ ಕರೆಸಿಕೊಳ್ಳುವ ಖರ್ಚಿನ ಬಾಬ್ತು ವಿಪರೀತ ಹೆಚ್ಚಿದೆ ಎನ್ನುವ ಗೊಣಗಾಟ ಕೇಳಿಬರುತ್ತಿದೆ.
ಮೊದಲಿನಷ್ಟು ರೈಲುಗಳು ಓಡಾಡುತ್ತಿಲ್ಲವಾದ ಕಾರಣ ರೈಲಿನಲ್ಲಿ ಸೀಟ್ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಅನಿವಾರ್ಯತೆ ಇದ್ದವರು ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದಾರೆ. ಹಿಂದೆ ಒಬ್ಬ ಕಾರ್ಮಿಕನಿಗೆ ಒಂದೂವರೆಯಿಂದ ಎರಡು ಸಾವಿರ ಖರ್ಚಾಗುತ್ತಿತ್ತು ಆದರೆ ಈಗ ಒಬ್ಬೊಬ್ಬರಿಗೆ 7 ಸಾವಿರ ರುಪಾಯಿ ಖರ್ಚಾಗುತ್ತಿದೆ ಎಂದು ಲೆಕ್ಕ ಹೇಳುತ್ತಿದ್ದಾರೆ ಗುತ್ತಿಗೆದಾರರು ಬೋಟ್ ಮಾಲಕರು. ಲಾಕ್ಡೌನ್ ತೆರವಾದರೂ ಅದರ ಪರಿಣಾಮಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇದೆ.
Leave a Comment