ಹಳಿಯಾಳ:- 2019-20 ನೇ ಸಾಲಿನಲ್ಲಿ ಟಿಪಿಎಮ್ಸಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯ ಮತ್ತು ಸಹಕಾರಿ ಸಂಘದ ಹೆಸರಿನಲ್ಲಿ ರೈತರಿಗೆ ಪೂರೈಸಬೇಕಾದಂತ ಫರ್ಟಿಲೈಸರ್ ಗೊಬ್ಬರವನ್ನು ಹಳಿಯಾಳದ ಟಿಪಿಎಮ್ಎಸ್ ಸಂಘದ ಹೆಸರಿನಲ್ಲಿ ಖರೀದಿ ಮಾಡಿ ರೈತರಿಗೆ ಗೊಬ್ಬರ ಪೂರೈಸದೆ ಬೆರೆ ತಾಲೂಕಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಹಳಿಯಾಳ ಬಿಜೆಪಿ ಪಕ್ಷ ಗಂಭೀರ ಆಪಾದನೆ ಮಾಡಿದೆ.

ಸೋಮವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು ಇಲ್ಲಿಯ ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಆಗಮಿಸಿ ಸಂಘದ ಆಡಳಿತಾಧಿಕಾರಿಯಾಗಿರುವ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಮಂಡಿಸಿ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಲಿಖಿತ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಈಶ್ವರ ಅವರನ್ನು ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿದ್ಯಮಾನವು ನಡೆಯಿತು.

ಮನವಿಯಲ್ಲಿ ಸಹಕಾರಿ ಸಂಘಗಳು ಸರ್ಕಾರದಿಂದ ಕಡಿಮೆ ಬೆಲೆಗೆ ಗೊಬ್ಬರ ಪಡೆದು ತಾಲೂಕಿನ ರೈತರಿಗೆ ಮಾರಾಟ ಮಾಡಬೇಕಾಗಿರುತ್ತದೆ. ಆದರೇ ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ಹೆಚ್ಚಿನ ದರದಲ್ಲಿ ಬೇರೆ ತಾಲೂಕಿನಲ್ಲಿ ಮಾರಾಟ ಮಾಡಿ ಸಂಘಕ್ಕೆ ನಷ್ಟ ಮಾಡಲಾಗಿದೆ. ಅಂದಾಜು 25 ರಿಂದ 30 ಲಕ್ಷದವರೆಗೆ ನಷ್ಟವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಎಲ್ಲಾ ಹಣವನ್ನು ಸಂಘಕ್ಕೆ ಭರಿಸದೆ ಸ್ವಂತಕ್ಕೆ ಬಳಕೆಯಾಗಿದ್ದು ಸಹ ಸಾರ್ವಜನೀಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಅನೇಕ ಬಾರಿ ರೈತರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ ತಕರಾರು ಮಾಡಿದ್ದಾರೆ ಆದರೇ ಯಾವ ಕ್ರಮಗಳು ಜರುಗಿಸಿಲ್ಲ ಎಂದು ಆಪಾದಿಸಲಾಗಿದೆ.
ಆದ್ದರಿಂದ ಸಂಘಕ್ಕೆ ಆದ ನಷ್ಟದ ಹಣವನ್ನು ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯಿಂದಲೇ ಭರಿಸಬೇಕು ಮತ್ತು ಅವರನ್ನು ಕೂಡಲೇ ಅಮಾನತ್ತಿನಲ್ಲಿಟ್ಟು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಳಿಯಾಳ ಬಿಜೆಪಿ ಘಟಕ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳದ ಆರ್ಎಸ್ಎಸ್ ಸೊಸೈಟಿ, ಟಿಪಿಎಮ್ಎಸ್ ಸೇರಿದಂತೆ ಅನೇಕ ಸೊಸೈಟಿಗಳಿಗೆ 64 ತನಿಖೆ ನಡೆಸಿದರೇ ಭ್ರಹ್ಮಾಂಡ ಭ್ರಷ್ಟಾಚಾರವೇ ಹೊರಬಿಳಲಿದೆ. ಹಳಿಯಾಳದ ಟಿಪಿಎಮ್ಎಸ್ನಲ್ಲಿ ರೈತರಿಗೆ ವಿಶ್ವಾಸ ದ್ರೋಹ ಮಾಡಲಾಗಿದೆ ರೈತರಿಗೆ ವಿತರಿಸಬೇಕಾದಂತಹ ಫರ್ಟಿಲೈಸರ್ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಈ ಸಹಕಾರಿ ಸಂಘದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ತಮ್ಮ ಸಂಬಂಧಿಕರೆನ್ನುವ ಕಾರಣಕ್ಕೆ ಅರ್ಹತೆಯಿಲ್ಲದ ವ್ಯಕ್ತಿಯನ್ನು ಮ್ಯಾನೇಜರ್ ಹುದ್ದೆಗೆ ಕುರಿಸಿದ್ದಾರೆ ಎಂದು ಆರೋಪಿಸಿದರು.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಎಸ್.ಎಲ್.ಘೊಟ್ನೇಕರ ಅವರಿಗೆ ರೈತರಿಗೆ ಆಗಿರುವ ವಿಶ್ವಾಸ ದ್ರೋಹಗಳ ಬಗ್ಗೆ ತಿಳಿದಿಲ್ಲವೇ ?, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಟಿಕಿಸುವ ಅವರು ಸೊಸೈಟಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏಕೆ ಮೌನ ವಹಿಸಿದ್ದಾರೆಂದು ಕಿಡಿ ಕಾರಿದರು.
ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ತಮ್ಮ ಆಡಳಿತ ಪಕ್ಷದವರು ನಡೆಸುತ್ತಿರುವ ಲೂಟಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಕೂಡಲೇ ಸೊಸೈಟಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಬೇಕು ಅಲ್ಲಿಯವರಿಗೆ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದ ಸುನೀಲ್ ಹೆಗಡೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಟಿಪಿಎಮ್ಎಸ್ ಸದಸ್ಯ ಪ್ರಕಾಶ ಕೊರವರ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಸಂಗೀತಾ ಜಾಧವ, ರಾಜೇಶ್ವರಿ ಹಿರೇಮಠ, ಪ್ರಮುಖರಾದ ಅನಿಲ ಮುತ್ನಾಳ, ಶಿವಾಜಿ ನರಸಾನಿ,ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೊಜಿ, ತಾನಾಜಿ ಪಟ್ಟೇಕರ, ಸಿದ್ದು ಶೆಟ್ಟಿ, ಸಂತಾನ ಸಾವಂತ, ಹನುಮಂತ ಇತರರು ಇದ್ದರು.
Leave a Comment