ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.

ಹೋಮ್ಸ್ಟೇಗಳನ್ನು, ರೆಸಾರ್ಟ್ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ ದ್ವೀಪದ ಜನರಿಗೆ ಮಳೆಗಾಲ ಬಂತೆಂದರೆ ಸಾಕು ಶತ್ರು ರಾಷ್ಟ್ರದವರು ದಂಡೆತ್ತಿ ಬಂದು ತಮ್ಮ ಕೋಟೆಗೆ ಮುತ್ತಿಗೆ ಹಾಕಿದಂತ ಅನುಭವವಾಗುತ್ತದೆ ಎನ್ನುತ್ತಾರೆ.
ಮಳೆಯ ನೀರಿನ ಜೊತೆ ಜಲಾಶಯದ ನೀರನ್ನೂ ಬಿಟ್ಟಾಗ ಮಂದಗಮನೆಯಾಗಿದ್ದ ಶರಾವತಿಯ ಓಟದ ಓಘ ಬಿರುಸಾಗುತ್ತದೆ. ನೋಡ ನೋಡುತ್ತಲೇ ಎಲ್ಲಾದಿಕ್ಕಿನಿಂದಲೂ ಉಕ್ಕಿ ಬರುವ ನೀರು ಮನೆಯ ಅಂಗಳವನ್ನು ಮುಳುಗಿಸಿ ಒಳಗೆ ಇಣುಕಿತೋ ಅಟ್ಟ ಏರುವುದೇ ಇವರಿಗಿರುವ ಗತಿಯಾಗುತ್ತದೆ. ಇನ್ನು ಬೇಸಿಗೆಯ ದಿನಗಳಲ್ಲೂ ಹೊರಗಿನಿಂದ ಬಂದವರಿಗೆ ಇಲ್ಲಿನ ಸೌಂದರ್ಯ ಕಾಣಿಸುತ್ತದೆಯಾದರೂ ವಯಸ್ಸಾದವರನ್ನು ಚಿಕ್ಕ ಮಕ್ಕಳನ್ನು ಪುಟ್ಟ ದೋಣಿಯಲ್ಲಿ ಆಚೆ ದಡಕ್ಕೆ ಸಾಗಿಸುವ ಕಷ್ಟ, ವಿದ್ಯಾರ್ಥಿಗಳಿಗೆ, ಕೂಲಿಗೆ ಹೋಗುವವರಿಗೆ ದೋಣಿಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯ ಜೊತೆಗೆ ದಿನಸಿ ಸಾಮಾನಿನಿಂದ ಹಿಡಿದು ಮನೆ ಕಟ್ಟುವ ಕಲ್ಲು ಸಿಮೆಂಟ್ ಜಲ್ಲಿಯನ್ನು ಸಹಿತ ದೋಣಿಯಲ್ಲಿಯೇ ತರಬೇಕಾದ ಸವಾಲುಗಳ ದರ್ಶನವಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಎನೇ ಆದರೂ ಕುರ್ವೆಯ ಜನರ ಕಷ್ಟದ ದಿನಗಳು ಮರೆಯಾಗುವ ಸಮಯ ಸಮೀಪಿಸುತ್ತಿದ್ದು ಅಂದಾಜು 16 ಕೋಟಿ 56 ಲಕ್ಷ ಅನುದಾನ ಮಂಜೂರಾಗಿ ಸೇತುವೆ ಕಾಮಗಾರಿ ಆರಂಭವಾಗಿದ್ದು ಈಗಾಗಲೇ ಎರಡುವರೆ ವರ್ಷ ಸಂದಿದೆ. ಅರ್ಧಕ್ಕಿಂತ ಹೆಚ್ಚು ಕೆಲಸವಾಗಿದ್ದು ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಇಲ್ಲಿನ ಜನರ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ. ಇದೇ ಖಷಿಯಲ್ಲಿ ಹಿಂದೆ ಶಾಸಕರಾಗಿದ್ದ ಮಂಕಾಳ ವೈದ್ಯ ಪ್ರಯತ್ನದ ಫಲವಾಗಿ ಈ ಸೇತುವೆ ಮಂಜೂರಿಯಾಗಿದೆ ಎನ್ನುವುದನ್ನು ಮರೆಯದೇ ಸ್ಮರಿಸುತ್ತಾರೆ ಈ ಭಾಗದ ಜನರು.
Leave a Comment