ಹೊನ್ನಾವರ – ಆದಿ ಶಕ್ತಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ನವರಾತ್ರಿಗಳ ಕಾಲ ಪೂಜಿಸಿ ಆರಾಧಿಸುವ ಶರನ್ನವರಾತ್ರಿ ಸಭ್ರಮಕ್ಕೂ ಕೊರೊನಾ ಅಡ್ಡಿಯಾಗುವ ಸಾಧ್ಯತೆಯಿದೆ. ಶನಿವಾರದಿಂದ ಆರಂಭವಾಗುವ ಈ ವರ್ಷದ ನವರಾತ್ರಿಯಲ್ಲಿ ಹಿಂದಿನ ವರ್ಷಗಳ ಸಡಗರ ಕಾಣಲು ಸಿಗುವುದು ಕಷ್ಟ ಎನ್ನಲಾಗುತ್ತಿದೆ.


ನವರಾತ್ರಿ ಉತ್ಸವದ ಆಚರಣೆಗೆ ದೇವಿಯ ದೇವಾಲಯಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಎಲ್ಲಿಯೂ ಮೊದಲಿನ ಉತ್ಸಾಹ ಕಾಣಿಸುತ್ತಿಲ್ಲ. ಕೊರೊನಾ ಕಾರಣಕ್ಕೆ ಸೇವೆಗಳನ್ನು ಸ್ಥಗಿತಗೊಳಿಸಿದ್ದ ದೇವಾಲಯಗಳು ಇತ್ತೀಚೆಗೆ ಭಕ್ತರ ದರ್ಶನದ ಜೊತೆ ಸೇವೆಗೂ ಅವಕಾಶ ನೀಡಿವೆಯಾದರೂ ನವರಾತ್ರಿಯ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದೇವಾಲಯಗಳಿಗೆ ಆಗಮಿಸುವ ನಿರೀಕ್ಷೆ ಇರುವ ಹಿನ್ನಲೆಯಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗಬಹುದೆನ್ನುವ ಆತಂಕವೂ ದೇವಾಲಯದ ಆಡಳಿತ ಮಂಡಳಿಗಳನ್ನು ಕಾಡುತ್ತಿದೆ. ಇದೇ ಹಿನ್ನಲೆಯಲ್ಲಿ ಸ್ಥಳಾವಕಾಶದ ಕೊರತೆಯಿರುವ ಕಾರಣ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಒಳಗೆ ಭಕ್ತರ ಪ್ರವೇಶ ಮತ್ತು ಸೇವೆಗಳನ್ನು ನಿರಾಕರಿಸಲಾಗಿದೆ.


ತಾಲೂಕಿನ ಜಲವಳಕರ್ಕಿಯ ಶ್ರೀ ಶಿವಮ್ಮಾ ಯಾನೆ ದುರ್ಗಾದೇವಿ ಹಾಗೂ ಮಾವಿನಕುರ್ವಾದ ಶ್ರೀ ನವದುರ್ಗಾ ದೇವಾಲಯದಲ್ಲಿ ಶರನ್ನವರಾತ್ರಿಯ ಮೊದಲ ದಿನದಿಂದ ಮುಂದಿನ ಪೌರ್ಣಿಮೆಯವರೆಗೂ ಕೀರ್ತನೆ ಹರಿಕಥೆಗಳು ನಡೆಯುತ್ತಿದ್ದವು. ಗೇರಸೊಪ್ಪಾ ನಗರ ದೇವಿ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಯಕ್ಷಗಾನ ಸೇವೆ, ಹೊನ್ನಾವರ ಪಟ್ಟಣದ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ದಾಂಡಿಯಾ ನೃತ್ಯಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಜನರು ಕಾತರರಾಗಿದ್ದರು. ಆದರೆ ಕೊರೊನಾ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಪಟ್ಟಿಯೂ ಕಿರಿದಾಗುತ್ತಿರುವ ಜೊತೆಗೆ ಒಂದೊಮ್ಮೆ ಕಾರ್ಯಕ್ರಮಗಳು ಆಯೋಜನೆಯಾದರೂ ಎಷ್ಟರಮಟ್ಟಿಗೆ ಜನರು ಭಯ ಬಿಟ್ಟು ಕಾರ್ಯಕ್ರಮ ನೋಡಲು ಬರುತ್ತಾರೆನ್ನುವ ಪ್ರಶ್ನೆ ಉದ್ಭವಿಸಿದೆ.


ಕರ್ಕಿಯ ಶ್ರೀ ಜ್ಞಾನೇಶ್ವರಿ, ಹಳದಿಪುರದ ಶ್ರೀ ಮಾರಿಕಾಂಬೆ, ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಶ್ರೀಕರಿಕಾನ ಪರಮೇಶ್ವರಿ, ಹೈಗುಂದದ ಶ್ರೀ ದುರ್ಗಾಂಬಿಕಾ ದೇವಿ, ಪಟ್ಟಣದ ರಥಬೀದಿಯ ಶ್ರೀ ಶಾರದಾಂಬೆ, ಶ್ರೀ ಮಹಾಕಾಳಮ್ಮ, ಮುಗ್ವಾ ಶ್ರೀ ಶ್ವೇತಾಂಬಿಕಾ ದೇವಿ, ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದ ಶ್ರೀ ನೀಲಗೋಡ ಯಕ್ಷಿ ಚೌಡೇಶ್ವರಿ, ಜಿನ್ನೋಡ ಶ್ರೀ ಶಿವಮ್ಮಾ ದುರ್ಗಾದೇವಿ, ಮಂಕಿಯ ಶ್ರೀ ದೇವಿಕಾನ ಅಮ್ಮನ ದೇವಾಲಯ ಸೇರಿದಂತೆ ತಾಲೂಕಿನ 50 ಕ್ಕೂ ಹೆಚ್ಚು ದೇವಿಯ ದೇವಾಲಯಗಳು ಸರಳ ನವರಾತ್ರಿ ಆಚರಣೆಗೆ ಸಜ್ಜಾಗುತ್ತಿದ್ದು ಕೊರೊನಾ ಕಂಟಕ ಕಳೆಯಲಿ ಎನ್ನುವುದೇ ಭಕ್ತರ ಮೊದಲ ಕೋರಿಕೆಯಾಗಿದೆ.


ಯಕ್ಷಗಾನ, ಕೀರ್ತನೆ, ಭಜನೆ, ತಾಳಮದ್ದಲೆ ಸೇರಿದಂತೆ ಸಾಂಸ್ಕøತಿ ಕಾರ್ಯಕ್ರಮಗಳು ಹಾಗೂ ನವರಾತ್ರಿ ನಿಮಿತ್ತ ನಡೆಯುತ್ತಿದ್ದ ಕ್ರೀಡಾ ಚಟುವಟಿಕೆಗಳ ಸಂಖ್ಯೆಯಲ್ಲಿ ಕಡಿತವಾಗುವ ಸಾಧ್ಯತೆ ಅಧಿಕವಾಗಿದೆಯಾದರೂ ಧಾರ್ಮಿಕ ಕಾರ್ಯಕ್ರಮಗಳಾದ, ಚಂಡಿಕಾ ಹೋಮ, ಸಪ್ತಶತಿ ಪಾರಾಯಣ, ಕಲಾಭಿಷೇಕ, ಸುಮಂಗಲೆಯರ ಉಡಿ ತುಂಬಿಸವ ಕಾರ್ಯಗಳು ಬಹುತೇಕ ಎಲ್ಲಾ ದೇವಾಲಯಗಳು ನಡೆಯಲಿದೆ.


Leave a Comment