ಹೊನ್ನಾವರ – ಟಿ.ಏ.ಪಿ.ಸಿ.ಎಮ್.ಎಸ್ನ ಮುಂದಿನ ಐದು ವರ್ಷಗಳ ಆಡಳಿತಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಸೊಸೈಟಿ ಕೋಟಾದ ಐದು ಸ್ಥಾನಗಳು ಹಾಗೂ ಸಾಮಾನ್ಯ, ಹಿಂದುಳಿದ ಮತ್ತು ಮಹಿಳಾ ಮೀಸಲು ಕ್ಷೇತ್ರದ ಐದೂ ಸ್ಥಾನ ಸೇರಿದಂತೆ ಚುನಾವಣೆ ನಡೆದ 10 ನಿರ್ದೇಶಕ ಸ್ಥಾನಗಳು ಶಿವಾನಂದ ಹೆಗಡೆ ಕಡತೋಕಾ ತಂಡದ ಪಾಲಾಗಿದೆ.

ಬಹುತೇಕ ಎರಡೂ ತಂಡದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಹಣಾಹಣಿ ಎಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಗಣಪಯ್ಯ ಗೌಡ ನೇತೃತ್ವದ ತಂಡದ ವಿರುದ್ಧ ಕಣಕ್ಕಿಳಿದಿದ್ದ ಶಿವಾನಂದ ಹೆಗಡೆ ಕಡತೋಕಾ, ದೀಪಕ ನಾಯ್ಕ ಮಂಕಿ, ಚಂದ್ರಶೇಖರ ಗೌಡ, ಶಂಭು ಬೈಲಾರ್, ಆರ್.ಪಿ.ನಾಯ್ಕ ಗೆಲುವಿನ ಗೆರೆ ಮುಟ್ಟಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಕವಿತಾ ಕೃಷ್ಣ ಮೇಸ್ತ, ಮಹಾಲಕ್ಷ್ಮೀ ಗಣಪತಿ ಹೆಗಡೆ, ಸಾಮಾನ್ಯ ವರ್ಗದಿಂದ ತಿಮ್ಮಣ್ಣ ಸಂಭಯ್ಯ ಹೆಗಡೆ, ಹಿಂದುಳಿದ ವರ್ಗದಿಂದ ಹರಿಯಪ್ಪ ನಾಯ್ಕ, ಮಂಜುನಾಥ ತಿಮ್ಮಪ್ಪ ನಾಯ್ಕ ಆಯ್ಕೆಯಾಗಿದ್ದಾರೆ.
ಹೊನ್ನಾವರ ತಾಲೂಕಿನ 19 ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ 13 ಸಂಘಗಳ ಬೆಂಬಲ ಗಿಟ್ಟಿಸಿಕೊಂಡಿದ್ದ ಶಿವಾನಂದ ಹೆಗಡೆ, ದೀಪಕ ನಾಯ್ಕ, ಚಂದ್ರಶೇಖರ ಗೌಡ ಮುಂದಾಳತ್ವದ ತಂಡದ ಗೆಲುವು ಅನಿರೀಕ್ಷಿತವಲ್ಲವಾದರೂ ಕೋರ್ಟನಿಂದ ತಂದ 71 ವೋಟ್ಗಳ ಹೆಚ್ಚುವರಿ ಬಲದ ವಿಶ್ವಾಸದೊಂದಿಗೆ ಸಾಮಾನ್ಯ, ಹಿಂದುಳಿದ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದ ವಿ.ಎನ್.ಭಟ್ಟ, ಬಾಲಚಂದ್ರ ನಾಯ್ಕ, ಬಾಬು ವಾರೇಕರ್, ಕುಸುಮಾ ಸಭಾಹಿತ್, ಭಾಗೀರಥಿ ಕೃಷ್ಣ ಭಟ್ಟ ಸೋಲು ತಂಡಕ್ಕೆ ಆಘಾತವನ್ನುಂಟುಮಾಡಿದೆ ಎನ್ನಲಾಗುತ್ತಿದೆ.
ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮತ್ತೊಮ್ಮೆ ನಿರ್ದೇಶಕರಾಗುವ ಮಹತ್ವಾಕಾಂಕ್ಷೆಯೊಂದಿಗೆ ತಯಾರಿ ನಡೆಸುತ್ತಿರುವ ಶಿವಾನಂದ ಹೆಗಡೆ ಕಡತೋಕಾ ಅವರಿಗೆ ತಮ್ಮ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಲು ಮಾರ್ಕೇಟಿಂಗ್ ಸೊಸೈಟಿ ಚುನಾವಣೆ ಫಲಿತಾಂಶ ಅತೀ ಪ್ರಮುಖವಾದುದು ಎಂದೇ ಪರಿಗಣಿಸಲಾಗಿತ್ತು. ಈ ಗೆಲುವಿನೊಂದಿಗೆ ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆಗೆ ವಿಶ್ವಾಸ ಹೆಚ್ಚಿಸಿಕೊಂಡಂತಾಗಿದೆ.
Leave a Comment