ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ರಾಷ್ಟ್ರೀಯ ಹೆದ್ದಾರಿ 310ರಲ್ಲಿ 0.00 ಕಿ.ಮೀ.ನಿಂದ 19.350 ಕಿ.ಮೀ.ವರೆಗೆ 19.85 ಕಿ.ಮೀ. ಉದ್ದದ ಹೊಸ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಭೂಕುಸಿತ ಮತ್ತು ಇತರೆ ನೈಸರ್ಗಿಕ ಪ್ರಕೋಪಗಳಿಂದಾಗಿ ಈ ಮಾರ್ಗ ವ್ಯಾಪಕ ಹಾನಿಗೊಳಗಾಗಿದ್ದರಿಂದ ಅದರ ಅಭಿವೃದ್ಧಿ ತುರ್ತು ಅಗತ್ಯವಾಗಿತ್ತು.

ಈ ರಸ್ತೆ ವಿಶೇಷವಾಗಿ ನಾಥುಲಾ ವಲಯದಲ್ಲಿ ರಕ್ಷಣಾ ಸಿದ್ಧತೆ ಹೆಚ್ಚಳಕ್ಕೆ ಹಾಗೂ ಇಡೀ ಪೂರ್ವ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಸುಕ್ನಾದಲ್ಲಿರುವ 33 ಕಾರ್ಪ್ಸ್ ಕೇಂದ್ರ ಕಚೇರಿಯ ಮೂಲಕ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕಾರ್ಯಕ್ರಮ ನಡೆಯಿತು. ರಕ್ಷಣಾ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಆರ್ ಒದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಿಕ್ಕಿಂನ ಬಹುತೇಕ ಗಡಿ ರಸ್ತೆಗಳನ್ನು ಎರಡು ಪಥದ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಇದು ಕೇವಲ ರಕ್ಷಣಾ ಸಿದ್ಧತೆಗಳನ್ನು ವೃದ್ಧಿಗೊಳಿಸಲು ಮಾತ್ರವಲ್ಲ, ಆಯಾ ಪ್ರದೇಶಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುವುದಕ್ಕೆ ಒತ್ತು ನೀಡಿದೆ ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಪ್ರಧಾನಮಂತ್ರಿಗಳ ಈಶಾನ್ಯ ಕ್ರಿಯಾ ನೀತಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಪುನರುಚ್ಚರಿಸಿದ ಶ್ರೀ ರಾಜನಾಥ್ ಸಿಂಗ್, ಪರ್ಯಾಯ ಮಾರ್ಗಗಳ ಅಭಿವೃದ್ಧಿಯ ವೇಗ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳನ್ನು ಪ್ರಸ್ತಾಪಿಸಿದರು. 2009ರಿಂದೀಚೆಗೆ ಆರಂಭವಾದ ಯೋಜನೆಗಳಿಗೆ ಕಳೆದ ಎರಡು ವರ್ಷಗಳಿಂದೀಚೆಗೆ ವ್ಯಾಪಕ ಒತ್ತು ನೀಡಲಾಗಿದೆ ಎಂದರು.
ಸಿಕ್ಕಿಂನ ಮುಖ್ಯಮಂತ್ರಿ, ಹೊಸ ರಸ್ತೆಗಳ ಅಭಿವೃದ್ಧಿಯಿಂದಾಗಿ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಉತ್ತೇಜನ ದೊರೆಯುತ್ತಿಲ್ಲ, ರಾಜ್ಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೂ ನೆರವಾಗಿ ಎಂದು ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿದರು. ರಾಜ್ಯದ ಆರ್ಥಿಕತೆಯ ಕೇಂದ್ರ ಬಿಂದು ಎಂದರೆ ಪ್ರವಾಸೋದ್ಯಮ ಎಂದು ಬಲವಾಗಿ ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ರಸ್ತೆ ಅಭಿವೃದ್ಧಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕಾಗಿ ಬಿಆರ್ ಒ ಮತ್ತು ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.
ಬಿಆರ್ ಒ ಕಳೆದ ಕೆಲವು ವರ್ಷಗಳಿಂದೀಚಗೆ ಸಾಮಗ್ರಿಗಳು, ಸಾಧನಗಳು ಮತ್ತು ನಿರ್ಮಾಣ ಕಾರ್ಯಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನಿರೀಕ್ಷಿತ ರೀತಿಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ. ಅಟಲ್ ಸುರಂಗ ಮಾರ್ಗ, ಡಿಎಸ್-ಡಿಬಿಒ ರಸ್ತೆ, ರಾಷ್ಟ್ರೀಯ ಹೆದ್ದಾರಿ 310ರ ಹೊಸ ಮಾರ್ಗ ಇವು ಉನ್ನತ ಗುಣಮಟ್ಟ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದಕ್ಕೆ ಕೆಲವು ಉದಾಹರಣೆಗಳಾಗಿವೆ. ಬಿಆರ್ ಒ ಕಾರ್ಯತಂತ್ರ ಮತ್ತು ಕಾರ್ಯಾಚರಣೆ ಸಿದ್ಧತೆಗಳಿಗೂ ನೆರವಾಗುತ್ತಿದೆ. ಅಲ್ಲದೆ ರಕ್ಷಣಾ ಸಚಿವರು, ಭವಿಷ್ಯದಲ್ಲಿ ಬಿಆರ್ ಒ ಕೈಗೊಳ್ಳಲಿರುವ ಕಾಮಗಾರಿಗಳನ್ನು ಪ್ರಸ್ತಾಪಿಸಿದರಲ್ಲದೆ ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಈ ಸೀಮೆಯಲ್ಲಿ ಭಾರೀ ಪ್ರಮಾಣದ ಪ್ರಗತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Leave a Comment