ಹೊನ್ನಾವರ – ಮಾವಿನಕುರ್ವಾ ಮತ್ತು ಹೊನ್ನಾವರ ಪಟ್ಟಣವನ್ನು ಸಂಪರ್ಕಿಸುವ ಸೇತುವೆ ನಿರ್ಮಾಣವಾಗಲಿರುವ ಬಿಕಾಸಿ ತಾರಿ ಬಳಿಯ ಜಾಗಕ್ಕೆ ಶಾಸಕ ಸುನೀಲ ನಾಯ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದೊಂದು ದಸಕದಿಂದ ಸೇತುವೆಯ ನಿರ್ಮಾಣದ ಕನಸು ಕಾಣುತ್ತಿದ್ದ ಮಾವಿನಕುರ್ವಾ ಜನತೆಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದ್ದು 45 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿದ್ದು ಶಾಸಕ ಸುನಿಲ ನಾಯ್ಕ ಮಾವಿನಕುರ್ವಾಕ್ಕೆ ಬೇಟಿ ನೀಡಿ ಸ್ಥಳ ಪರಿಶಿಲಿಸಿ ಸ್ಥಳೀಯರೊಂದಿಗೆ ಚರ್ಚಿಸಿದರು.

ಹಿಂದಿನ ಅವಧಿಯಲ್ಲಿಯೇ ಸೇತುವೆ ಮಂಜೂರಿಯಾಗಿತ್ತಾದರೂ ಸೇತುವೆ ನಿರ್ಮಾಣವಾಗಲಿರುವ ಸ್ಥಳದ ಬಗ್ಗೆ ಸ್ಥಳೀಯರಲ್ಲಿ ಒಮ್ಮತ ಸಾಧ್ಯವಾಗದ ಹಿನ್ನಲೆಯಲ್ಲಿ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಹಿಂದಿನ ಶಾಸಕರಾಗಿದ್ದ ಮಂಕಾಳ ವೈದ್ಯ ಶಿಫಾರಸ್ಸು ಮಾಡಿದ್ದಾಗಿ ಸುದ್ದಿಯಾಗಿತ್ತು. ಸೇತುವೆ ಸ್ಥಳಾಂತರ ವಿಷಯ ಚುನಾವಣಾ ವಿಷಯವಾಗಿಯೂ ಸಾಕಷ್ಟು ಸದ್ದುಮಾಡಿತ್ತು. ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸೇತುವೆ ಮಂಜೂರಿಯಾಗಿದೆ ಎನ್ನುವ ಬಗ್ಗೆ ತಾಲೂಕಿನ ಹಲವೆಡೆ ದೊಡ್ಡ ದೊಡ್ಡ ಫ್ಲೆಕ್ಸ್ಗಳನ್ನು ಅಳವಡಿಸಿ ಸಮ್ಮಿಶ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತಾದರೂ ಸಮ್ಮಿಶ್ರ ಸರ್ಕಾರದ ಪತನವಾಗುವುದರೊಂದಿಗೆ ಸೇತುವೆಯ ಸುದ್ದಿಯೂ ತೆರೆಮರೆಗೆ ಸರಿದಿತ್ತು. ಇದೀಗ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಳ ಮತ್ತೊಮ್ಮೆ ಹಸಿರು ನಿಶಾನೆ ತೋರಿಸಿದೆ ಎನ್ನಲಾಗುತ್ತಿದ್ದು ಸ್ಥಳ ಸಮೀಕ್ಷಾ ಕಾರ್ಯಗಳು ನಡೆಯುತ್ತಿದೆ.
ಇದೇ ಹಿನ್ನಲೆಯಲ್ಲಿ ಮಂಗಳವಾರ ಮಾವಿನಕುರ್ವಾಕ್ಕೆ ಬೇಟಿ ನೀಡಿದ ಶಾಸಕರು ಶಾಸಕನಾಗುವ ಪೂರ್ವದಲ್ಲಿಯೇ ಇಲ್ಲಿನ ಜನರು ಸೇತುವೆ ನಿರ್ಮಾಣದ ಬೇಡಿಕೆಯನ್ನಿಟ್ಟಿದ್ದರು. ಇಲ್ಲಿ ಮಂಜೂರಿಯಾಗಿದ್ದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಶಿಫಾರಸ್ಸಾಗಿದ್ದನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ಇಲ್ಲಯೇ ಸೇತುವೆ ನಿರ್ಮಾಣಕ್ಕೆ ಅವಕಾಶ ಪಡೆದುಕೊಂಡಿದ್ದೇನೆ. ಮಾವಿನಕುರ್ವಾದ ಜನತೆ ಚುನಾವಣಾ ಸಮಯದಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಖರ್ವಾ ಕ್ರಾಸ್ ದಿಂದ ಮಾವಿನಕುರ್ವಾರ್ವಾ ವರೆಗಿನ 9 ಕಿ.ಮೀ ರಸ್ತೆಯನ್ನು ಮರುಡಾಂಬರೀಕರಣ ಮಾಡಬೇಕು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಬಿಜೆಪಿಯ ಪ್ರಮುಖರಾದ ಗಣಪತಿ ನಾಯ್ಕ ಬಿ.ಟಿ, ವಿಘ್ನೇಶ್ವರ ಹೆಗಡೆ, ಮುಖಂಡರಾದ ಹರಿಶ್ಚಂದ್ರ ನಾಯ್ಕ, ಪೀಟರ್ಮೆಂಡೀಸ್, ಮಾದೇವ ಗೌಡ, ಮಂಜುನಾಥ ಗೌಡ, ರವಿ ಮೇಸ್ತ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment