ಯಲ್ಲಾಪುರ:
ಜಿಲ್ಲೆಯಲ್ಲಿ ಯಕ್ಷಗಾನ ಅಕಾಡೆಮಿ ವತಿಯಿಂದ 25 ಕ್ಕೂ ಹೆಚ್ಚು ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಸದಸ್ಯೆ ನಿರ್ಮಲಾ ಗೋಳಿಕೊಪ್ಪ ಹೇಳಿದರು.

ಅವರು ರವಿವಾರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಟ್ರಸ್ಟ್ ಹಾಗೂ ಯಕ್ಷಗಾನ ಅಕಾಡೆಮಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಕ್ಷಗಾನ ಸರ್ವಾಂಗ ಸುಂದರ ಕಲೆಯಾಗಿದ್ದು, ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಬುದ್ಧತೆ ಹಾಗೂ ದೈಹಿಕ ಸಧೃಢತೆ ಪಡೆಯಲು ಸಾಧ್ಯ. ಹಿಂದಿನ ಕಲಾವಿದರು ಯಕ್ಷಗಾನದ ಉಳಿವಿಗೆ ಹಾಗೂ ಬೆಳವಣಿಗೆಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಶ್ರಮಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಕಲಾವಿದರ ಮೇಲಿದೆ ಎಂದರು.
ಯಕ್ಷಗಾನ ಅಕಾಡೆಮಿ ಅಲ್ಲಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಹಿರಿಯ ಕಲಾವಿದರಿಗೆ ಮಾಸಾಶನ, ಅಳಿದು ಹೋದ ತೆರೆಮರೆಯ ಕಲಾವಿದರ ಸಂಸ್ಮರಣೆಯಂತಹ ಕಾರ್ಯಕ್ರಮಗಳ ಮೂಲಕ ಯಕ್ಷಗಾನದ ಉಳಿವಿಗೆ ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಸಂಚಾಲಕ ಸುಬ್ರಾಯ ಹೆಗಡೆ ಮಳಗಿಮನೆ ಮಾತನಾಡಿ, ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಟ್ರಸ್ಟ್ ಯಕ್ಷಗಾನ ಆಸಕ್ತರಿಗೆ ತರಬೇತಿ ನೀಡುವ ಕಾರ್ಯವನ್ನು ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇದಕ್ಕೆ ಪೂರಕ ಸಹಕಾರ ದೊರೆತರೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸುವ ಯೋಜನೆ ಹೊಂದಿದ್ದೇವೆ ಎಂದರು.
ಶಕ್ತಿ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಅನಂತ ಗಾಂವ್ಕಾರ ಕಂಚಿಪಾಲ, ಶಿಬಿರದ ಶಿಕ್ಷಕರಾದ ಅನಂತ ಹೆಗಡೆ ದಂತಳಿಗೆ, ಸದಾಶಿವ ಭಟ್ಟ ಮಲವಳ್ಳಿ, ನಾಗಪ್ಪ ಕೋಮಾರ ಉಪಸ್ಥಿತರಿದ್ದರು. ಕಲಾವಿದ ಸತೀಶ ಯಲ್ಲಾಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ ಹೆಗಡೆ ನಿರ್ವಹಿಸಿದರು. ಕಲಾವಿದ ದೀಪಕ ಭಟ್ಟ ಕುಂಕಿ ವಂದಿಸಿದರು. ಶನಿವಾರ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ ಮಲ್ಪೆ ವಾಸುದೇವ ಸಾಮಗ ಅವರಿಗೆ ಮೌನಾಚರಣೆ ನಡೆಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.
Leave a Comment