ಹಳಿಯಾಳ:- ಇತ್ತೀಚೆಗೆ ಗೋವಾದ ಮಾಪುಸಾದಲ್ಲಿ ಯಶ್ ಶೂಟಿಂಗ್ ಅಕಾಡೆಮಿ ಆಯೋಜಿಸಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯದ ಶೂಟಿಂಗ್ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಮರ್ಥ ಸದಾನಂದ ಗುಪಿತ ಪ್ರಥಮ ಸ್ಥಾನ ಪಡೆಯುವ ಮೂಲಕ ಅಂತರಾಜ್ಯ ಮಟ್ಟದಲ್ಲಿ ಹಳಿಯಾಳದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ಹಳಿಯಾಳದ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಹಿರಿಯ ವಕೀಲರಾದ ಸದಾನಂದ ಗುಪಿತ ಅವರ ಮಗನಾಗಿರುವ ಸಮರ್ಥ ಶೂಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದು ನಿರಂತರ ತರಬೇತಿಯಲ್ಲಿ ತೊಡಗಿದ್ದಾನೆಂದು ಶಾಲಾ ಶಿಕ್ಷಕರು ಮಾಹಿತಿ ನೀಡಿದರು.
ಈ ಶೂಟಿಂಗ್ ಸ್ಪರ್ದೆಯಲ್ಲಿ ಹಳಿಯಾಳ ಪಟ್ಟಣ ಮತ್ತು ಜನಗಾ ಗ್ರಾಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಳಿಯಾಳದ ಸ್ಟ್ಯಾನಿಲೂಯಿಸ್ ಪ್ರಾನ್ಸಿಸ್ ಬ್ರಗಾಂಜಾ -ದ್ವಿತಿಯ ಮತ್ತು ಮನೋಹರ್ ಗೌಡಾ- ತೃತೀಯ ಸ್ಥಾನ ಪಡೆದಿದ್ದಾರೆ.
ಎಲ್ಲಾ ಕ್ರೀಡಾಪಟುಗಳಿಗೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಅಭಿನಂದನೆ ಸಲ್ಲಿಸಿದ್ದು ಪಟ್ಟಣದ ಪ್ರಸಿದ್ದ ಮಹಾಗಣಪತಿ ದೇವಸ್ಥಾನದಲ್ಲಿ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ದುಬಾರಿ ಕ್ರೀಡೆಯಾದ ಶೂಟಿಂಗ್ ವಿದ್ಯೆಯನ್ನು ಕಲಿತು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲಿ, ಶೂಟಿಂಗ್ ಕ್ರೀಡೆಯ ಉತ್ತೇಜನಕ್ಕಾಗಿ ಹಳಿಯಾಳದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಏರ್ಗನ್ ಮುಖಾಂತರ ಶೂಟಿಂಗ್ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತುದಾರ ಹಿರಿಯ ಕ್ರೀಡಾಪಟು ನಿವೃತ್ತ ರೈಲ್ವೆ ನೌಕರ ಜಗದೀಶಕುಮಾರ ನಾಯಕ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಯಲ್ಲಿಯೂ ನಿರಂತರವಾಗಿ ಪಾಲ್ಗೊಳ್ಳಬೇಕು ಎಂದ ಅವರು ಶೂಟಿಂಗ್ ತರಬೇತಿಯಲ್ಲಿ ಮಕ್ಕಳು ಯಶಸ್ಸನ್ನು ಕಾಣುತ್ತಿದ್ದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ಅವರಿಗೆ ಹೆಚ್ಚಿನ ತರಬೇತಿ ನೀಡುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
Leave a Comment