ಉಪ್ಪೋಣಿ ಗ್ರಾಮಪಂಚಾಯತ ವ್ಯಾಪ್ತಿಗೊಳಪಡುವ ಮಹಿಮೆ ಪಶ್ಚಿಮಘಟ್ಟದ ಕಾಡಿನ ನಡುವೆ ಕಳೆದುಹೋದಂತಿರುವ ಪುಟ್ಟ ಊರು. ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟು ಇಲ್ಲಿ ಮತ್ಯಾವುದೇ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಹಳ್ಳ, ಕಿತ್ತೋದ ಕಚ್ಚಾ ರಸ್ತೆ, ಸಾರಿಗೆ ಸಂಪರ್ಕದ ಕೊರತೆ ಇಂದಿಗೂ ಈ ಊರನ್ನು ಕಾಡುತ್ತಲೇ ಇದೆ. ಶಿಕ್ಷಣ ಸಚಿವ ಸುರೇಶ ಕುಮಾರ್ ಬೇಟಿಯಿಂದ ಸುದ್ದಿಯಾಗಿದ್ದ ಈ ಊರು ಈಗ ಸಾಗವಾನಿ ಮರಗಳ ಕಳ್ಳ ಸಾಗಾಟದ ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದೆ.

ಮಹಿಮೆಯ ಕಾಡಿನಲ್ಲಿ ಸಾಗವಾನಿ ಸೇರಿದಂತೆ ಬೆಲೆಬಾಳುವ ನೂರಾರು ಜಾತಿಯ ಮರಗಳಿವೆ. ಸ್ಥಳಿಯರನ್ನು ಬಳಸಿಕೊಂಡು ಇಲ್ಲಿನ ಸಾಗವಾನಿ ಮರಗಳನ್ನು ಕಡಿದು ಬೇರೆಡೆಗೆ ಸಾಗಿಸುವ ವ್ಯವಸ್ಥಿತ ಜಾಲವೊಂದು ಇತ್ತೀಚೆಗೆ ಸಕ್ರೀಯವಾಗಿದೆ ಎನ್ನುವ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ. ಮಹಿಮೆಯಲ್ಲಿ ಎರಡು ಲೋಡ್ ಸಾಗವಾನಿ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತುಮಾಡಿದ್ದಾರೆನ್ನುವ ಸುದ್ದಿ ಇಡೀ ತಾಲೂಕಿಗೆ ಹರಡಿತಾದರೂ ಅರಣ್ಯ ಇಲಾಖೆಯವರು ಮಾತ್ರ ಅದೆಲ್ಲಾ ಸುಳ್ಳು ಸುದ್ದಿ ಎರಡು ಮರಗಳನ್ನು ಕಡಿದಿದ್ದಾರೆ ಅದರ ತನಿಖೆ ನಡೆಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆ ಅಲ್ಲಿಂದ ಮುಂದೆ ಸಾಗವಾನಿ ಮರ ಕಡಿದ ಸುದ್ದಿ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಸಾಗವಾನಿ ಮರ ಕಡಿದ ಘಟನೆ ತಣ್ಣಗಾಗಲು ಕಾರಣ ಏನು ಎನ್ನುವುದನ್ನು ಇಲಾಖೆಯವರೇ ಹೇಳಬೇಕಿದೆ. ಮಾವಿನಕುರ್ವಾದಲ್ಲಿ ಅರ್ದ ಕೆಜಿ ಆಮೆ ಮಾಂಸ ಸಿಕ್ಕಿದಾಗ , ಅರೇ ಅಂಗಡಿ ತೊಳಸಾಣಿಯಲ್ಲಿ ಐದಾರು ಯಾವುದೋ ಪ್ರಾಣಿಯ ಉಗುರು ಸಿಕ್ಕಾಗಲೆಲ್ಲ ಮಾದ್ಯಮದವರಿಗೆ ಮಾಹಿತಿ ನೀಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಮಹಿಮೆಯ ಸಾಗವಾನಿ ಮರ ಕಡಿದ ಪ್ರಕರಣದ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲವಾಗಿದೆ.


Leave a Comment