ಹೊನ್ನಾವರ ;ಸಂಸದ ಅನಂತಕುಮಾರ ಅವರು ಕೇಂದ್ರ ಮಂತ್ರಿಗಳಾಗಿದ್ದಾಗ ಮಂಜೂರು ಮಾಡಿದ 5ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾವರ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ವನ್ನು ರಾಜ್ಯದ ದ್ವಿತೀಯ ಮಾದರಿ ಕೇಂದ್ರವನ್ನಾಗಿ ರೂಪಿಸುವ ಯೋಜನೆಯ ಅಂಗವಾಗಿ 96ಲಕ್ಷ ರೂಪಾಯಿ ಕಾಮಗಾರಿಗೆ ಇಂದು ಶಾಸಕರುಗಳಾದ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕ ಚಾಲನೆ ನೀಡಿದರು.

ಈ ಯೋಜನೆಗೆ ಮೊದಲನೇ ಹಂತದಲ್ಲಿ 223ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು ಹಣ ಬಂದಂತೆ ಇದನ್ನು ಬಳಸಿಕೊಂಡು ಭೌತಿಕ ಹಾಗೂ ಶೈಕ್ಷಣಿಕವಾಗಿ ಮಾದರಿಯಾಗಿ ರೂಪಿಸಲು ಪ್ರಯತ್ನಿಸುವುದಾಗಿ ಗೌರವಾಧ್ಯಕ್ಷ ಶಾಸಕ ಸುನೀಲ ನಾಯ್ಕ ಭರವಸೆ ನೀಡಿದ್ದಾರೆ. ನನಗೆ ಆಗಾಗ ಭೇಟಿ ನೀಡಿ ಇಲ್ಲಿಯ ವ್ಯವಸ್ಥೆಯನ್ನು ಗಮನಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಇಲ್ಲಿಯ ಕೊರತೆಯನ್ನು ತಿಳಿದುಕೊಂಡು ಸಮಸ್ಯೆ ಪರಿಹರಿಸಿ ನಿರ್ದಿಷ್ಟ ಗುರಿ ತಲುಪುವುದಾಗಿ ಹೇಳಿದರು. ಮೊದಲು ಮಾತನಾಡಿದ ಶಾಸಕ ದಿನಕರ ಶೆಟ್ಟಿ ಐಟಿಐ ಒಳ ಆಡಳಿತ ಮತ್ತು ಹೊರಗಿನ ವ್ಯವಸ್ಥೆಯ ನಿರ್ಲಕ್ಷ್ಯದ ಕುರಿತು ಅಸಮಾಧಾನ ವ್ಯಕ್ತಮಾಡಿ ಹಳೇ ಕಟ್ಟಡವನ್ನೇ ವ್ಯವಸ್ಥೆಮಾಡಿ ಇಟ್ಟುಕೊಳ್ಳಬಹುದಿತ್ತು. ಶಿಕ್ಷಣದ ಗುಣಮಟ್ಟಕ್ಕೆ ಮಹತ್ವ ಕೊಡಬೇಕಿತ್ತು. ವೈಯಕ್ತಿಕ ಹಿತಾಸಕ್ತಿ, ರಾಜಕೀಯ ನುಸುಳಿದರೆ ಯಾವ ಸಂಸ್ಥೆಯೂ ಉದ್ಧಾರವಾಗುವುದಿಲ್ಲ ಎಂದು ಎಚ್ಚರಿಸಿದ್ದರು.
ಹೆಚ್ಚು ಸಂಖ್ಯೆಯಲ್ಲಿ ಹಂಗಾಮಿ ಶಿಕ್ಷಕರಿದ್ದಾರೆ, ಕಿರಿಯ ತರಬೇತಿ ಅಧಿಕಾರಿಗಳ 29ಹುದ್ದೆಗಳಲ್ಲಿ 24ಹುದ್ದೆಗಳು ಖಾಲಿ ಇವೆ. ಕೇವಲ 5ಜನರಿದ್ದಾರೆ. ಶಿಕ್ಷಕರ ಕೊರತೆಯನ್ನು ನೀಗಿ ಅಗತ್ಯ ಸೌಲಭ್ಯವನ್ನು ಪಡೆದು ಐಟಿಐಯನ್ನು ಅಭಿವೃದ್ಧಿಪಡಿಸುವುದಾಗಿ ಸ್ವಾಗತಿಸಿದ ನೂತನ ಪ್ರಾಚಾರ್ಯ ಜಗದೀಶ ಭರವಸೆ ನೀಡಿದರು. ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಶ್ರೀಮತಿ ಮೇಧಾ ನಾಯ್ಕ ಮತ್ತು ಸದಸ್ಯರು ಉಪಸ್ಥಿತರಿದ್ದರು.

………………………………..
ಹಾಳುಸುರಿಯುತ್ತಿರುವ ಐಟಿಐ
ಪ್ರಧಾನ ಕಟ್ಟಡದ ನಿರ್ವಹಣೆಯ ಕೊರತೆಯಿಂದ ಪೂರ್ತಿ ಹಾಳಾಗಿದ್ದು ಗಿಡಮರಗಳು ಬೆಳೆದಿವೆ. ಕಟ್ಟಡವನ್ನು ಕೆಡವಲು ಸರ್ಕಾರ ಹರಾಜು ಹಾಕಬೇಕಿದೆ. ಸಿಬ್ಬಂದಿಗಳ ಕೊರತೆಯಿಂದ ಉಪಕರಣಗಳಿಗೆ ಜಂಗು ಹಿಡಿದಿವೆ. ತಾಂತ್ರಿಕತೆ ಇಲೆಕ್ಟ್ರಾನಿಕ್ ಯುಗಕ್ಕೆ ಬದಲಾಗಿದ್ದರೂ ಹಳೆಯ ಉಪಕರಣಗಳೇ ಇಲ್ಲಿವೆ. ಎಸ್.ಎಂ. ಯಾಹ್ಯಾ ಕಾರ್ಮಿಕ ಮಂತ್ರಿಗಳಾಗಿದ್ದಾಗ ಹೊನ್ನಾವರಕ್ಕೆ ಐಟಿಐ ಮಂಜೂರಾಗಿತ್ತು. 15ಎಕರೆಗೂ ಹೆಚ್ಚಿನ ಸ್ಥಳವಿದೆ. ಕಟ್ಟಡ ದುರ್ಬಲವಾದಂತೆ ಕಾಗೇರಿಯವರು ಮಂತ್ರಿಗಳಾಗಿದ್ದಾಗ ಇನ್ನೊಂದು ಕಟ್ಟಡ ಕೊಡಿಸಿದ್ದರು. ಈಗ ಅಲ್ಲಿಯೇ ವರ್ಗಗಳು ನಡೆದಿವೆ. ವರ್ಕ್ಶಾಪ್ ಕಟ್ಟಡ ಕೂಡ ಜೀರ್ಣವಾಗಿದೆ. ಐಟಿಐಯನ್ನು ಮಾದರಿಯಾಗಿ ರೂಪಿಸಲು ಕನಿಷ್ಠ 10ಕೋಟಿ ರೂಪಾಯಿ ಬೇಕು. ಸಿಬ್ಬಂದಿಗಳ ಕೊರತೆ ನೀಗಿ ಹೊಸ ವಿಷಯಗಳು ಸೇರಿಸಲ್ಪಡಬೇಕು. ಈಗ ಜಿಲ್ಲೆಯವರೇ ಕಾರ್ಮಿಕ ಮಂತ್ರಿಗಳಾಗಿರುವುದರಿಂದ ಕೇಂದ್ರ, ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇಬ್ಬರು ಶಾಸಕರು ಮನಸ್ಸು ಮಾಡಿದರೆ ಹೆಸರಿಗಷ್ಟೇ ಅಲ್ಲ ನಿಜವಾಗಿಯೂ ಹೊನ್ನಾವರ ಐಟಿಐ ಮೊಡಲ್ ಐಟಿಐ ಆಗಬಲ್ಲದು. ಈಗಂತೂ ಡಲ್ ಹೊಡೆಯುತ್ತಿರುವುದು ಸುಳ್ಳಲ್ಲ.


Leave a Comment