ನಮ್ಮ ಸಂವಿಧಾನ ಅತ್ಯಂತ ಮಹತ್ವದ ದಾಖಲೆಯಾಗಿದ್ದು ಅದರಲ್ಲಿನ ತತ್ವ, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಾಗು ಆದರ್ಶಗಳನ್ನು ಪಾಲಿಸುವ ಅಗತ್ಯ ಪ್ರತಿಯೊಬ್ಬ ಪ್ರಜೆಯದು ಎಂದು ಕರ್ನಾಟಕ ರಾಜ್ಯ ಅಡ್ವೊಕೇಟ್ ಜನರಲ್ ಶ್ರೀ ಪ್ರಭುಲಿಂಗ ನಾವದಗಿ ಹೇಳಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆ-ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ “ಸಂವಿಧಾನ: ಪ್ರಜಾಪ್ರಭುತ್ವದ ಅಡಿಪಾಯ” ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸಂವಿಧಾನ ವಿಶ್ವದಲ್ಲೇ ಅತಿ ದೊಡ್ಡ ಲಿಖಿತಗ್ರಂಥ. ಅದನ್ನು ಅಂಗೀಕರಿಸಲಾದ ೧೯೪೯ ರ ನವೆಂಬರ್ ೨೬ ಅತ್ಯಂತ ಮಹತ್ವದ ದಿನ. ಗಣರಾಜ್ಯ ಉದಯವಾದ ಆ ದಿನದ ಆಚರಣೆ ಮಹತ್ವಪೂರ್ಣ ಎಂದರು.
“ಸಂವಿಧಾನ ರಚನೆ” ಕುರಿತು ವಿಷಯ ಮಂಡಿಸಿದ ಹಿರಿಯ ವಕೀಲ ಶ್ರೀ ವಿವೇಕ್ ರೆಡ್ಡಿ ಸಂವಿಧಾನ ಭಾರತದ ಸಮಾಜದಲ್ಲಿ ಬದಲಾವಣೆ ತಂದಿದೆ. ಅದು ಎರಡು ವಿಶಿಷ್ಟ ಆಯಾಮವನ್ನು ನೀಡುತ್ತದೆ. ಸಮಾಜವನ್ನು ಹೇಗೆ ರೂಪಿಸಬೇಕು ಹಾಗು ರಾಷ್ಟ್ರವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಉತ್ತಮ ಒಳನೋಟವನ್ನು ನೀಡುತ್ತದೆ ಎಂದರು. ಸಮಾನತೆಯ ಆಧಾರದ ಮೇಲೆ ಸಮಾಜದ ನಿರ್ಮಾಣಕ್ಕೆ ಒತ್ತು ನೀಡುವ ನಮ್ಮ ಸಂವಿಧಾನ ಆರ್ಥಿಕವಾಗಿ ದುರ್ಬಲರಿಗೂ ಪರಿಹಾರ ನೀಡಿದೆ. ಜತೆಗೆ ಜಾತಿ ಆಧಾರಿತ ಶೋಷಣೆ ತೊಡೆಯಲು ವಿಶೇಷ ಸವಲತ್ತು ಕಲ್ಪಿಸಿದೆ ಎಂದರು. ಬಲಿಷ್ಟ ಬಾರತವನ್ನು ನಿರ್ಮಿಸಲು ಸಂವಿಧಾನ ಪೂರಕವಾಗಿದ್ದು ಸಾಂಸ್ಕೃತಿಕ ಶಕ್ತಿಯನ್ನು ಉಳಿಸಿಕೊಂಡು ಮುಂದುವರಿಯಲು ಪೂರಕವಾಗಿದೆ ಎಂದು ಹೇಳಿದರು.
ಗದಗ್ ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಗೌರವ ಪ್ರಾಧ್ಯಾಪಕರಾದ ಪ್ರೊ. ಜೀವನ್ ಕುಮಾರ್, ಶಿಕ್ಷಣದಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸಂವಿಧಾನದ ತಿಳಿವಳಿಕೆ ಅತ್ಯಗತ್ಯ ಎಂದು ಹೇಳಿದ ಅವರು ಸಾಮಾಜಿಕ, ಸೈದ್ಧಾಂತಿಕ ಹಾಗು ನೈತಿಕ ಮೌಲ್ಯಗಳನ್ನು ಸಂವಿಧಾನ ಒಳಗೊಂಡಿದ್ದು ಸಂವಿಧಾನದ ತಾತ್ವಿಕ ಅಡಿಪಾಯವನ್ನು ಸಮರ್ಥವಾಗಿ ಅರಿಯಬೇಕಾಗಿದೆ ಎಂದರು. ಭಾರತದ ಸಂವಿಧಾನ ನೈತಿಕ ಮೌಲ್ಯಗಳ ಒಂದು ದಾಖಲೆಯಾಗಿದ್ದು ಪ್ರಜಾಪ್ರಭುತ್ವದ ಅಡಿಪಾಯ ಎಂದರು.
Leave a Comment