ಎಲ್ಲವನ್ನೂ ಮೀರಿ ಗಟ್ಟಿಯಾಗಿ ನಿಲ್ಲುವಂತಹ ಸಂಬಂಧ ಅಂದರೆ ಸ್ನೇಹ. ರಕ್ತ ಸಂಬಂಧವಿರದೆ ಬೊಗಸೆ ಪ್ರೀತಿಯಿದ್ದು ಶುದ್ಧ ಮನಸ್ಸಿನಿಂದ ಸಾಗುವ ಪಯಣವು ಕೂಡ ಗೆಳೆತನ. ನನ್ನ ವಿದ್ಯಾರ್ಥಿ ಜೀವನದಲ್ಲಿ “ಶ್ರೀ ಭದ್ರಕಾಳಿ ಹೈಸ್ಕೂಲ್”ಗೆ ಅಧ್ಯಯನ ಮಾಡಲು 8ನೇ ತರಗತಿಗೆ ಆಗಮಿಸಿದಾಗ ನನಗೆ ಹಾಲಿಇದ್ದ ಸ್ನೇಹಿತರ ಸಂಖ್ಯೆಯು ಇನ್ನೂ ಹೆಚ್ಚಲು ಪಾರಂಭಿಸಿತು.

ಸ್ನೇಹಿತರ ಸಂಘದಲ್ಲಿ ನನಗೆ ನೂತನವಾಗಿ ಪರಿಚಿತರಲ್ಲೊಬ್ಬನಾದ ಗೆಳೆಯ ಗೋಕರ್ಣದ ಮೇಲಿನಕೇರಿಯವನಾದ ವಿನಾಯಕ ಮಾಣೇಶ್ವರ ಗೌಡ. ಇತನು ಹಾಲಕ್ಕಿ ಒಕ್ಕಲಿಗರ ಕುಟುಂಬದವನಾಗಿದ್ದು, ಉತ್ತಮ ಕ್ರೀಡಾಪಟುವಾಗಿದ್ದು ಗುಂಡು ಎಸೆತ, ಕಬ್ಬಡಿ, ಕ್ರಿಕೆಟ್, ಲಗೋರಿ, ಕಪ್ಪುಬಿಳುಪಿನ ಕಾಲದಿಂದ ಬಂದಂತಹ ಆಟ ಹಾಣಿಗೆಂಡೆ, ಖೋ-ಖೋ, ವಾಲಿಬಾಲ್ ಹಾಗೂ ಮುಂತಾದ ಕ್ರೀಡೆಗಳಲ್ಲಿ ತನ್ನದೆ ಆದ ಹೆಸರುಗಳಿಸಿದವನು. ಸಂಜೆ ಶಾಲೆ ಮುಗಿದ ಮೇಲೆ ಮರಳಿ ಮನೆಗೆ ಬರುವಾಗ ಈ ಹೈಸ್ಕೂಲ್ ಸ್ನೇಹಿತ ವಿನಾಯಕ ನನ್ನ ಹಾಗೂ ನನ್ನೊಡನೆಯಿದ್ದ ಮಿತ್ರರನ್ನು ತನ್ನ ಮನೆ ಬರುವ ದಾರಿ “ಮಾರುತಿಕಟ್ಟೆ” ಯವರೆಗೂ ಬೀಳ್ಕೊಡುತ್ತಿದ್ದನು. ನನ್ನ ಜೀವನದಲ್ಲಿ ಗೇರುಹಣ್ಣನ್ನು ರುಚಿಕರವಾಗಿ ತಿನ್ನಲು ಕಲಿಸಿದವನು ಇತನು. ಹೇಗೆಂದರೆ! ಒಂದು ದಿನ ನಮ್ಮ “ಭದ್ರಕಾಳಿ ಹೈಸ್ಕೂಲ್” ಗುಡ್ಡೆಯ ಮೇಲೆ ನನ್ನ ಕರೆದೊಯ್ದು ಕೆಂಪು ಮತ್ತು ಹಳದಿ ಬಣ್ಣದ ಗೇರು ಹಣ್ಣನ್ನು ಕೊಯ್ದು ಗೇರುಬೀಜವನ್ನು ಬದಿಯಲ್ಲಿ ಇಟ್ಟು ಸ್ವತಃ ತನ್ನ ಮನೆಯಿಂದ ತಂದ “ಸಾಣಿಕಟ್ಟಾ” ಉಪ್ಪನ್ನು ಒಂದು ಎಲೆಯಲ್ಲಿ ಹಾಕಿ ಗೇರುಹಣ್ಣನ್ನು ಕೊಟ್ಟು “ಉಪ್ಪುತಾಗಿಸಿ ತಿಂದು ನೋಡು ದೋಸ್ತಾ” ಎಂದು ಅದನ್ನು ಹೇಗೆ ತಿನ್ನಬೇಕು! ಹಾಗೂ ಆ ಹಣ್ಣಿನ ಮತ್ತು ಗೇರುಬೀಜದ ಮಹತ್ವತಿಳಿಸಿಕೊಟ್ಟವನು ಈ ನನ್ನ ಗೆಳೆಯ ವಿನು.ದಿನ ದಿನಗಳು ಸಾಗುತ್ತ ಈ ಸ್ನೇಹ ಮುಂದುವರೆದು ಎಸ್.ಎಸ್.ಎಲ್.ಸಿಯ ತನಕ ತಲುಪಿ ಕೊನೆಯ ಹಂತದ ವಾರ್ಷಿಕ ಪರೀಕ್ಷೆಯ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಕಾಲೇಜಿನ ಮೆಟ್ಟಿಲ್ಲನ್ನು ಏರಲು ಒಬ್ಬರಂತೆ ಗೆಳೆಯರು ಒಂದೊಂದು ಕ್ಷೇತ್ರಕ್ಕೆ ಹಾರಿದವು. ಇದರಿಂದ ಹೈಸ್ಕೂಲ್ ಗೆಳೆಯರ ಸಂಪರ್ಕವು ಕೂಡಾ ಕುಂಠಿತವಾಯಿತು. ಕಾಲೇಜಿನಲ್ಲಿ ಮತ್ತೆ ನನಗೆ ಜೀವಕ್ಕೆ ಜೀವ ನೀಡುವ ಸ್ನೇಹಿತರ ಪೈಕಿ ಹುಟ್ಟಿಕೊಂಡಿತು. ಸಂವತ್ಸರಗಳು ಕಳೆಯುತ್ತಾ ವಿಧ್ಯಾಭ್ಯಾಸ ಮುಗಿಸಿ “ಉದ್ಯೋಗಂ ಪುರುಷ ಲಕ್ಷಣಂ, ನೀರುದ್ಯೋಗಂ ದರಿದ್ರ ಲಕ್ಷಣಂ” ಎಂದು ತಿಳಿದು ಉದ್ಯೋಗದ ಕ್ಷೇತ್ರದ ಕಡೆ ಸಾಗಿದವು.ಒಂದು ದಿನ ನಾನು ಗೋಕರ್ಣದ ಮುಖ್ಯಕಡಲ ತೀರದಲ್ಲಿ ಕುಳಿತಿರುವಾಗ ನನ್ನ ಹಿಂದುಗಡೆ ಒಂದು ಆಟೋರಿಕ್ಷಾ ಪ್ರವಾಸಿಗರನ್ನು ಕರೆತಂದು ಬಿಡಲು ಬಂತು. “ರಿಕ್ಷಾ ಚಾಲಕ” ಯಾರೆಂದು ತಿರುಗಿ ನೋಡಿದರೆ “ನಮ್ಮ ವಿನಾಯಕ”. ಆತನು ನನ್ನ ನೋಡಿ ಆಟೋ ನಿಲ್ಲಿಸಿ ಮಾತನಾಡಿಸಲು ಹತ್ತಿರ ಬಂದ.ಬಹಳ ವರ್ಷಗಳ ನಂತರ ನಾವೂ ಸಿಕ್ಕಿದ್ದು ಎಂದು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದರು. ಬಾಲ್ಯ ಜೀವನದ ಹಳೆಯ ಸವಿ ನೆನಪುಗಳನ್ನು ಮತ್ತೆ ಬೆಳಕಿಗೆ ತಂದೆವು. ಹೀಗೆ ಮಾತನಾಡುತ್ತಾ ಗೆಳೆಯ ವಿನಾಯಕ ಆತನ “ಮೊಬೈಲ್ ನಂಬರ್” ನನಗೆ ನೀಡಿ ರಿಕ್ಷಾ ಬಾಡಿಗೆ ಇದ್ದರೆ ಕರೆಮಾಡು ಎಂದು ಲವಲವಿಕೆಯಿಂದ ಮಾತನಾಡಿಸಿ ಮರಳಿ ತನ್ನ ದುಡಿಮೆಗೆ ಸಾಗಿದನು.
ಇದಾದ ಬಳಿಕ ಇತ್ತಿಚಿನ ದಿನಗಳಲ್ಲಿ ದೀಪಾವಳಿ ಹಬ್ಬದ ವೇಳೆ ನಾನು ಕೆಲಸದ ನಿಮಿತ್ತ ಗೋಕರ್ಣದ ನೀರಳ್ಳದ ಸಮೀಪವಿರುವ “ಸ್ಟೋನ್ ವುಡ್ಡ್ ರೆಸಾರ್ಟ್” ಗೆ ಹೋದಾಗ ಅಲ್ಲಿ ಇಬ್ಬರು ಪ್ರವಾಸಿಗರು ಆಟೋರಿಕ್ಷಾ ಬೇಕಿತ್ತು. ಇಲ್ಲಿಂದ ಕುಡ್ಲೆತೀರದ ಬಳಿ ಹೋಗಬೇಕು ಯಾರಾದರೂ ಬರಬಹುದೆ? ಎಂದು ನನ್ನಲ್ಲಿ ವಿಚಾರಿಸಿದರು. ಆಗ ನನಗೆ ತಕ್ಷಣ ಹೊಳೆದಿದ್ದು ನನ್ನ ಗೆಳೆಯ ವಿನಾಯಕನ ಹೆಸರು. ತಕ್ಷಣ ಇತನಿಗೆ ಕರೆಮಾಡಿ ಒಂದು ಬಾಡಿಗೆ ಇದೆ ಇಲ್ಲಿಂದ ಇಲ್ಲಿಗೆ ಹೋಗಬೇಕು ಎಂದು ತಿಳಿಸಿ, ಅದರ ವೆಚ್ಚವನ್ನು ಕೇಳಿದಾಗ ವಿನು “ದೋಸ್ತಾ ಕೊಡಾ ನಿಂಗೇನ್ ಹೇಳುದು ಎಂದು ಉತ್ತರಿಸಿ ಕೊನೆಯಲ್ಲಿ 100ರೂ ಕೊಟ್ಟರೆ ಸಾಕು ಎಂದನು. ಅವನು ನುಡಿದ ಮಾತನ್ನು ನಾನು ಪ್ರವಾಸಿಗರಿಗೆ ಹೇಳಿ ಇತನು ನನ್ನ ಹೈಸ್ಕೂಲ್ ಸ್ನೇಹಿತ, ಹೆಸರು ವಿನಾಯಕನೆಂದು ಅವನ ಮೊಬೈಲ್ ಸಂಖ್ಯೆಯನ್ನು ಅವರಿಗೆ ನೀಡಿ ನನ್ನ ಕೆಲಸದ ಕಡೆಗೆ ಪಯಣಿಸಿದೆ ನಾನು.ಮರುದಿನ ಮತ್ತೆ ನಾನು ಆ ರೆಸಾರ್ಟ್ ಕಡೆಗೆ ಬಂದಾಗ ಪ್ರವಾಸಿಗರಿಬ್ಬರು ನನ್ನ ಕಂಡು ಬಳಿ ಬಂದದನ್ನು ನೋಡಿ ನಾನು ಮತ್ತೆ “ರಿಕ್ಷಾ ಬೇಕಾ?” ಎಂದು ತಮಾಷೆಮಾಡಿದೆ. ಅವರು ನಕ್ಕು ಇಲ್ಲಾ ನಮಗೆ ಆಟೋ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಹೇಳಲು ಬಂದಿರುವೇವು ಎಂದು ಧನ್ಯವಾದ ಅರ್ಪಿಸಿ “ಎಂತಾ ಸ್ನೇಹರಿ ನಿಮ್ಮದು ಬಾರಿ ಉಂಟು” ಎಂದು ನನಲ್ಲಿ ಹೇಳಿದಾಗ ನಾನು “ಏನಾಗಿರಬಹುದು! ವಿನು ಏನಾದರೂ ಬರದೇ ಕೈಕೊಟ್ಟಿರಬಹುದೆ?” ಅಂತೆಲ್ಲಾ ಯೋಚನೆಗೆ ಬಿದ್ದಾಗ ಎದುರು ಇದ್ದ ಪ್ರವಾಸಿಗರೆ ಉತ್ತರಿಸಲು ಪ್ರಾರಂಭಿಸಿದರು. ಏನೆಂದರೆ ನಾವು ಬಂದ ದಿನ ಅದೇ ಜಾಗಕ್ಕೆ ಆಟೋರಿಕ್ಷಾದಲ್ಲಿ ಪ್ರಯಾಣಿಸಿದಾಗ ನಮಗೆ 200ರೂಗಳನ್ನು ತೆಗೆದುಕೊಂಡಿದ್ದು ಇರುತ್ತದೆ. ಅದರೆ ನಿಮ್ಮ ಸ್ನೇಹಿತ 100ರೂ ಹೇಳಿದಾಗ ನಮಗೆ ಸರಿಕಾಣಿಸದೆ 150ರೂಗಳನ್ನು ಕೊಟ್ಟಾಗ ನನಗೆ 100ರೂಪಾಯಿಯೇ ಸಾಕು, ಹೆಚ್ಚು ಬೇಡ ಯಾಕೆಂದರೆ ನನ್ನ ಮಿತ್ರನಿಗೆ ಮಾತು ಕೊಟ್ಟಿದ್ದೇನೆ. ನಮ್ಮ ಸ್ನೇಹಕ್ಕೆ ದ್ರೋಹ ಮಾಡಲು ನನಗೆ ಇಷ್ಟವಿಲ್ಲಾ ಎಂದು ಹೇಳಿದಾಗ ನಿಮ್ಮ ಸ್ನೇಹ ಮಹಾ ಎಂದು ತಿಳಿದೆವು. ಸದಾ ಹೀಗೆ ಇರಲಿ ನಿಮ್ಮ ಗೆಳೆತನ ಎಂದು ಶುಭಹಾರೈಸಿದರು.ಗೆಳೆಯ ವಿನಾಯಕನು ನನ್ನ ಸ್ನೇಹಕ್ಕೆ ಬೆಲೆ ನೀಡಿದನ್ನು ಕೇಳಿ “ಹೈಸ್ಕೂಲ್” ಅಂಗಳದ ಆ ಜಾಲಿಡೇಸ್ ಕ್ಷಣಗಳು ನೆನಪಾಗಿ ಮನಸು ಮತ್ತದೇ ಸಂಭ್ರಮ, ಸಂತೋಷದ ನೆನಪುಗಳಲ್ಲಿ ಮತ್ತೆ ಮತ್ತೆ ಮಿಂದೆದ್ದು ಕುಣಿಯಲಾರಂಭಿಸಿತು.
Leave a Comment