ಕರ್ನಾಟಕದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ವರ್ಚುವಲ್ ಮೂಲಕ ನೆರವೇರಿಸಿದರು. ಈ ಯೋಜನೆಗಳಲ್ಲಿ 10,904 ಕೋಟಿ ರೂ.ವೆಚ್ಚದ 1,197 ಕಿ.ಮೀ ರಸ್ತೆಗಳು ಸೇರಿವೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ವಹಿಸಿದ್ದರು, ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ಸದಾನಂದ ಗೌಡ, ಜನರಲ್ ಡಾ ವಿ ಕೆ ಸಿಂಗ್, ರಾಜ್ಯದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗಡ್ಕರಿ ಅವರು, ಕಳೆದ ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ.ಗಿಂತ ಹೆಚ್ಚಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸೇರಿಸಲಾಗಿದೆ. ಈಗ ರಾಜ್ಯದಲ್ಲಿ ಒಟ್ಟು 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ ಎಂದರು. 2,384 ಕಿ.ಮೀ ಉದ್ದದ 37,311 ಕೋಟಿ ರೂ. ವೆಚ್ಚದ ಒಟ್ಟು 71 ಕಾಮಗಾರಿಗಳು ನಡೆಯುತ್ತಿವೆ. ಇವುಗಳಲ್ಲಿ, 12,286 ಕೋಟಿ ರೂ. ವೆಚ್ಚದ 1,127 ಕಿ.ಮೀ ಉದ್ದದ ಹೊಂದಿರುವ 26 ಕಾಮಗಾರಿಗಳಲ್ಲಿ ಶೇ.70 ಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ. 1257 ಕಿ.ಮೀ ಉದ್ದದ 25,025 ಕೋಟಿ ರೂ. ವೆಚ್ಚದ 45 ಕಾಮಗಾರಿಗಳಲ್ಲಿ ಶೇ 70ರವರೆಗೆ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು.
ವ್ಯಾಪಾರ ಮತ್ತು ಆರ್ಥಿಕತೆಯ ಅನುಕೂಲಕ್ಕಾಗಿ ಬಂದರುಗಳಿಗೆ ಸುಗಮ ಸಂಪರ್ಕವನ್ನು ಕಲ್ಪಿಸಲು, ಗೋವಾ ಗಡಿಯಿಂದ ಕೇರಳ ಗಡಿಯವರೆಗಿನ ನಾಲ್ಕು ಪಥಗಳ ರಸ್ತೆಯು, ಬಂದರು ನಗರವಾದ ಬೇಲೇಕೇರಿ, ಕಾರವಾರ ಮತ್ತು ಮಂಗಳೂರನ್ನು ಸಂಪರ್ಕಿಸಲಿದ್ದು, 278 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿಯನ್ನು 3443 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಲ್ಲದೆ, ರಸ್ತೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ, ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ಶಿರಡಿ ಘಾಟ್, ಎನ್‌ಎಚ್ -73 ರಲ್ಲಿ ಚಾರ್ಮಡಿ ಘಾಟ್ ಮತ್ತು ಎನ್‌ಎಚ್ -275 ರಲ್ಲಿ ಸಂಪಾಜೆ ಘಾಟ್ ನಲ್ಲಿ ಬೆಟ್ಟದ ಇಳಿಜಾರುಗಳಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಒದಗಿಸುವ ಮೂಲಕ ಸುರಕ್ಷತೆಯನ್ನು ಸುಧಾರಿಸುವ 115 ಕೋಟಿ ರೂ. ವೆಚ್ಚದ 3 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಸುಮಾರು 1,16,144 ಕೋಟಿ ರೂ. ಗಳನ್ನು ಹೂಡಿಕೆ ಮಾಡಲಿದೆ. 2019-21ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 5083 ಕೋಟಿ ರೂ.ವೆಚ್ಚದ 275 ಕಿ.ಮೀ.ನ 11 ರಸ್ತೆ ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯಕ್ಕೆ ಈವರೆಗೆ 8,330 ಕೋಟಿ ರೂ.ಗಳ ಸಿಆರ್‌ಎಫ್ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಸಿಆರ್‌ಎಫ್ ಅಡಿಯಲ್ಲಿ ಈ ವರ್ಷದ ಒಟ್ಟು 435 ಕೋಟಿ ರೂ.ಗಳಲ್ಲಿ 217 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷದ ಉಳಿದ 218 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಶ್ರೀ ಗಡ್ಕರಿ ಘೋಷಿಸಿದರು.
ದೇಶದ ಅತಿದೊಡ್ಡ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಎಥೆನಾಲ್ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕೆಂದು ಶ್ರೀ ಗಡ್ಕರಿ ಕರೆ ನೀಡಿದರು, ದೇಶವು ಈಗಾಗಲೇ ಸಕ್ಕರೆ ಮತ್ತು ಅಕ್ಕಿಯನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ ಮತ್ತು ಸರ್ಕಾರದಲ್ಲಿ ಸಾಕಷ್ಟು ಸಂಗ್ರಹವಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಸಂಗ್ರಹವನ್ನು ಎಥೆನಾಲ್ ಆಗಿ ಪರಿವರ್ತಿಸಬಹುದು, ಇದನ್ನು ವಾಹನಗಳಿಗೆ ಪರ್ಯಾಯ ಇಂಧನವಾಗಿ ಬಳಸಬಹುದು. ಇದು ರೈತರ ಆದಾಯವನ್ನು ಸುಧಾರಿಸುವುದಲ್ಲದೆ, ದೇಶಕ್ಕೆ ಸ್ಥಳೀಯ ಇಂಧನಗಳ ಮೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮಾಜಿ ಪ್ರಧಾನಿ ಶ್ರೀ ಎಚ್ ಡಿ ದೇವೇಗೌಡ ಶ್ಲಾಘಿಸಿದರು. ಹೊಸ ತಂತ್ರಜ್ಞಾನವು ಅಭಿವೃದ್ಧಿಯ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಾವು ಇಂದು ನೋಡುತ್ತಿರುವುದನ್ನು ನಂಬಲಾಗುತ್ತಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸಚಿವರು ನೀಡಿದ ಎಲ್ಲ ಸಲಹೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರು ಭರವಸೆ ನೀಡಿದರು. ತಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಮತ್ತು ಅದರ ಜನರ ಜೀವನ ಶೈಲಿಯನ್ನು ಹೆಚ್ಚಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು. ತಮ್ಮ ಸರ್ಕಾರದ ಗುರಿಗಳನ್ನು ಸಾಧಿಸಲು ಕೇಂದ್ರದ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕಳೆದ 6 ವರ್ಷಗಳಲ್ಲಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಂದ್ರ ಸಚಿವ ಶ್ರೀ ಸದಾನಂದ ಗೌಡ ವಿವರಿಸಿದರು. ಗೋವಾದಿಂದ ತಿರುವನಂತಪುರಕ್ಕೆ ಕರಾವಳಿ ರಸ್ತೆ ಜಾಲವನ್ನು ಯೋಜಿಸಿದ್ದಕ್ಕಾಗಿ ಶ್ರೀ ಗಡ್ಕರಿ ಅವರನ್ನು ಶ್ಲಾಘಿಸಿದರು.
ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು ರಾಷ್ಟ್ರೀಯ ಹೆದ್ದಾರಿ ವಲಯದ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದರು. ರಸ್ತೆ ಸಂಪರ್ಕವು ಈಗ ಆಹಾರ, ಬಟ್ಟೆ ಮತ್ತು ವಸತಿಯಂತೆಯೇ ಮೂಲಭೂತ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು.
ಸಂಸದ ಮತ್ತು ಲೋಕಸಭೆಯ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಶ್ರೀ ಮಲ್ಲಿಕರ್ಜುನ ಖರ್ಗೆ ಅವರೂ ಸಹ ಶ್ರೀ ನಿತಿನ್ ಗಡ್ಕರಿ ಅವರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಡಕರಿಯವರು ಅಭಿವೃದ್ಧಿ ಪರ ಎಂದು ಖರ್ಗೆ ಹೇಳಿದರು. ಸಿಆರ್‌ಎಫ್ ಮೊತ್ತವನ್ನು ರಾಜ್ಯದ ಎಲ್ಲಾ ಯೋಜನೆಗಳಿಗೆ ಸಮಾನವಾಗಿ ಬಿಡುಗಡೆ ಮಾಡುವಂತೆ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಇಂದು ಉದ್ಘಾಟನೆಯಾಗಿರುವ ಯೋಜನೆಗಳು ಕರ್ನಾಟಕದ ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕವನ್ನು ಒದಗಿಸುತ್ತವೆ ಎಂದು ರಸ್ತೆ ಸಾರಿಗೆ ಮತ್ತರು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ಡಾ ವಿ ಕೆ ಸಿಂಗ್ ಹೇಳಿದರು. ಅಂತರ ರಾಜ್ಯ ಸಂಪರ್ಕವು ವೇಗವಾಗಿರುತ್ತದೆ ಮತ್ತು ಅಡಚಣೆರಹಿತವಾಗಿರುತ್ತದೆ. ಇದು ಕೃಷಿ, ಮೀನುಗಾರಿಕೆ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಪರಿವರ್ತನೆಯ ಪರಿಣಾಮ ಬೀರುತ್ತದೆ. ಆರ್ಥಿಕ ಕಾರಿಡಾರ್‌ಗಳು, ವೆಚ್ಚ ಮತ್ತು ದೂರ ಪ್ರದೇಶಗಳ ತ್ವರಿತ ಬೆಳವಣಿಗೆ ಮತ್ತು ಪ್ರಯಾಣಿಕರು ಹಾಗೂ ಸರಕುಗಳ ಸುರಕ್ಷಿತ ಸಂಚಾರವನ್ನು ಸುಧಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಅವರು ಹೇಳಿದರು. ಇದಲ್ಲದೆ, ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಯು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಮತ್ತು ಬಂದರುಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.
Leave a Comment