ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಆಯವ್ಯಯ ಕಳೆದ ಆರು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಳವಾಗಿದೆ ಎದು ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಎಂ.ಎಸ್.ಪಿ. ದೊರಕಿಸಲು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಿದ್ದಾರೆ ಎಂದೂ ತಿಳಿಸಿದರು.
ಎಂ.ಎಸ್.ಪಿ. ದರದಲ್ಲಿ ಬೆಳೆ ಖರೀದಿಗೆ ಮಾಡಲಾಗಿರುವ ವೆಚ್ಚ 2009-14ಕ್ಕೆ ಹೋಲಿಸಿದರೆ 2014-19ರಲ್ಲಿ ಶೇ.85ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು. 2013-14ಕ್ಕೆ ಹೋಲಿಸಿದರೆ ಎಲ್ಲ ಪ್ರಮುಖ ಬೆಳೆಗಳಿಗೂ 2020-21ರಲ್ಲಿ ಎಂ.ಎಸ್.ಪಿ. ದರ ಶೇ.40ರಿಂದ 70ರಷ್ಟು ಹೆಚ್ಚಳವಾಗಿದೆ. ಈ ವರ್ಷ ಭತ್ತವನ್ನು ಪಂಜಾಬ್ ರೈತರಿಂದ ಎಂ.ಎಸ್.ಪಿ. ದರದಲ್ಲಿ ಕಳೆದ ವರ್ಷಕ್ಕಿಂತ ಶೇ.25ರಷ್ಟು ಮತ್ತು ಈ ವರ್ಷ ಗುರಿ ಹೊಂದಿದ್ದಕ್ಕಿಂತ ಶೇ.20ರಷ್ಟು ಹೆಚ್ಚು ಖರೀದಿಸಲಾಗಿದೆ ಎಂದು ತಿಳಿಸಿದರು. 1,10,000 ಕೋಟಿ ರೂ.ಗೂ ಅಧಿಕ ಹಣವನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಮತ್ತು ಈವರೆಗೆ 17,450 ಕೋಟಿ ರೂ. ವಿಮಾ ಕಂತಿಗೆ ಪ್ರತಿಯಾಗಿ ರೈತರಿಗೆ 87,000 ಕೋಟಿ ರೂ. ವಿಮೆ ರೂಪದಲ್ಲಿ ನೀಡಲಾಗಿದೆ ಎಂದರು.
1950ರಲ್ಲಿ ರಾಷ್ಟ್ರೀಯ ಒಟ್ಟು ಉತ್ಪನ್ನಕ್ಕೆ ಭಾರತದ ಕೃಷಿ ವಲಯ ಶೇ.52ರಷ್ಟು ಕೊಡುಗೆ ನೀಡುತ್ತಿತ್ತು. ಜೊತೆಗೆ ನಮ್ಮ ಒಟ್ಟು ಜನಸಂಖ್ಯೆಯ ಶೇ.70ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿತ್ತು ಎಂದು ತಿಳಿಸಿದರು. 2019ರಲ್ಲಿ ಈ ವಲಯ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.42ರಷ್ಟು ಜನರಿಗೆ ಉದ್ಯೋಗ ನೀಡಿದೆ ಆದರೆ ಜಿಡಿಪಿಗೆ ಕೇವಲ ಶೇ.16ರಷ್ಟು ಕೊಡುಗೆ ನೀಡಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ವೃದ್ಧಿ ದರ ಕೇವಲ ಶೇ.2ರಷ್ಟು ಎಂದು ತಿಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2018ರಲ್ಲಿ ನಡೆಸಿದ ಅಧ್ಯಯನದ ಬಗ್ಗೆ ಉಲ್ಲೇಖಿಸಿದ ಅವರು, ಎಲ್ಲ ಕೃಷಿ ಕುಟುಂಬಗಳ ಪೈಕಿ ಶೇ.52.5ರಷ್ಟು ಕುಟುಂಬಗಳು 1,470 ಡಾಲರ್ (1.08 ಲಕ್ಷ) ಸಾಲ ಹೊಂದಿದ್ದಾರೆ ಎಂದು ತಿಳಿಸಿದರು. ಸೂಕ್ತ ಶೀಥಲೀಕರಣ ವ್ಯವಸ್ಥೆ ಇಲ್ಲದ ಕಾರಣ ಶೇ.30ರಷ್ಟು ಕೃಷಿ ಉತ್ಪನ್ನ ವ್ಯರ್ಥವಾಗುತ್ತಿದೆ ಎಂದೂ ತಿಳಿಸಿದರು. ಈ ಅಂಶಗಳು ಅತ್ಯಧಿಕವಾಗಿ ಅಸಮರ್ಥ ಪೂರೈಕೆ ಸರಪಳಿಯನ್ನು ರೂಪಿಸುತ್ತವೆ ಮತ್ತು ಇದರ ಪರಿಣಾಮವಾಗಿ ಗ್ರಾಹಕರಿಗೆ ಉತ್ಪನ್ನಗಳ ಆಯ್ಕೆ ಇಲ್ಲದಂತಾಗುತ್ತದೆ, ವ್ಯರ್ಥ ಹೆಚ್ಚುತ್ತದೆ ಮತ್ತು ಬೆಲೆಗಳು ಹೆಚ್ಚಾಗುತ್ತವೆ ಎಂದು ಅವರು ಹೇಳಿದರು. ಇದೇ ವೇಳೆ, ಭಾರತೀಯ ರೈತರು ಹವಾಮಾನ ವೈಪರೀತ್ಯ, ಮಾರುಕಟ್ಟೆಗಳು, ಮಧ್ಯವರ್ತಿಗಳು ಮತ್ತು ಅಗತ್ಯ ಮೂಲಸೌಕರ್ಯಗಳ ಕೊರತೆಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು.
ನಮ್ಮ ರೈತರು ಮುಕ್ತ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡಬೇಕು ಎಂದು ಪ್ರಮುಖ ಕೃಷಿ ಆರ್ಥಿಕತಜ್ಞರು ಸಹ ಈ ಸುಧಾರಣೆಗಳನ್ನು ಸಲಹೆ ಮಾಡಿದ್ದರು ಎಂದು ಶ್ರೀ ಪುರಿ ಹೇಳಿದರು. ಭಾರತದ ಕೆಲವು ರಾಜ್ಯಗಳು ಈ ಸುಧಾರಣೆಗಳನ್ನು ತಮ್ಮದೇ ರೀತಿಯಲ್ಲಿ ಹಲವು ವರ್ಷಗಳಿಂದ ಅಳವಡಿಸಿಕೊಂಡು ಜಾರಿ ಮಾಡಿವೆ – ಉದಾಹರಣೆಗೆ ಕೃಷಿ ವೃದ್ಧಿಯ ರಾಷ್ಟ್ರೀಯ ಸರಾಸರಿ ಶೇ.2ರಲ್ಲಿದ್ದರೆ, ಬಿಹಾರದ ವೃದ್ಧಿ ಸರಾಸರಿ ಶೇ.6ರಷ್ಟು ಎಂದು ತಿಳಿಸಿದರು.
ಸರ್ಕಾರ ರೈತರಿಗೆ ಮಾತುಕತೆ ನಡೆಸಿ, ಅವರ ಕಳವಳ ನಿವಾರಿಸಿಕೊಳ್ಳಲು ಪದೇ ಪದೇ ಮನವಿ ಮಾಡಿದೆ ಎಂದು ಶ್ರೀ ಪುರಿ ತಿಳಿಸಿದರು. ರಾಜ್ಯಗಳಿಗೆ ಮಂಡಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ನೀಡಲಾಗಿದೆ, ಆದಾಗ್ಯೂ, ಸರ್ಕಾರ ಕಾಲಮಿತಿಯೊಳಗೆ ವಿವಾದ ಇತ್ಯರ್ಥಪಡಿಸುವ ವ್ಯವಸ್ಥೆಯನ್ನು ಮಾಡಿದೆ, ವಿವಾದದ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯಗಳ ಪ್ರವೇಶಕ್ಕೂ ಸರ್ಕಾರ ಅನುಮತಿ ನೀಡಿದೆ ಎಂದರು.
Leave a Comment