ಹೊನ್ನಾವರ: ಕಾಸರಕೋಡ ಟೊಂಕಾ ಭಾಗದ ಸ್ಥಳಿಯರು ಮತ್ತು ಹೊನ್ನಾವರ ಪೋರ್ಟ್ ಪ್ರೈ.ಲಿ.ನ ನಡುವಿನ ಸಮರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ಹಿಂದಿನಿಂದಲೂ ಖಾಸಗಿ ಬಂದರು ನಿರ್ಮಾಣದ ಬಗೆಗಿನ ಗೊಂದಲ ಮತ್ತಷ್ಟು ಬಿಗಡಾಯಿಸಿದೆ.

ಆರಂಭದಿಂದಲೂ ಕಾಮಗಾರಿಯನ್ನು ವಿರೋಧಿಸುತ್ತಾ ಬಂದಿದ್ದ ಸ್ಥಳಿಯ ಮೀನುಗಾರರು ಬಂದರು ನಿರ್ಮಾಣವಾದ ನಂತರ ತಮ್ಮನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುತ್ತಾರೆನ್ನುವ ಅಭದ್ರತೆಯ ಜೊತೆಗೆ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಶಿಸುವ ಭಯದಲ್ಲಿ ಕಾಮಗಾರಿಯೇ ಬೇಡ ಎನ್ನುತ್ತಿದ್ದು, ಸಾವಿರಾರು ಪೊಲೀಸರ ರಕ್ಷಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಖಾಸಗಿ ಕಂಪನಿ ಮುಂದಾಗಿದೆ.
500 ಕೋಟಿ ರುಪಾಯಿಗೂ ಅಧಿಕ ವೆಚ್ಚದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಖಾಸಗಿ ಸಹಭಾಗಿತ್ವದ ಬಂದರು ನಿರ್ಮಾಣಕ್ಕೆ ಕೇಂದ್ರಸರ್ಕಾರ ಹಸಿರುನಿಶಾನೆ ತೋರಿಸಿ ಈಗಾಗಲೇ ನಾಲ್ಕೈದು ವರ್ಷಗಳೇ ಉರುಳಿಹೋಗಿದೆ. ಬಂದರು ನಿರ್ಮಾಣವಾದರೆ ಬ್ರೇಕ್‍ವಾಟರ್ ನಿರ್ಮಾಣವಾಗಲಿದೆ ಅದರಿಂದ ಹಲವು ವರ್ಷಗಳಿಂದ ಮೀನುಗಾರರ ಪಾಲಿಗೆ ಕಂಟಕವಾಗಿರುವ ಅಳಿವೆ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ,ಪೂರಕವಾಗಿ ಸರಕು, ರಪ್ತು ವ್ಯವಾಹಾರಗಳು ಹೆಚ್ಚಿ ಸ್ಥಳೀಯವಾಗಿ ಕೈಗಾರಿಕೆಗಳು ಬೆಳವಣಿಗೆಯಾಗುವ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸ್ಥಳಿಯರ ಮನವೊಲಿಸಿ ಕೆಲಸ ಪ್ರಾರಂಭಿಸಿದ ಕಂಪನಿಯವರು ಮೊದಲು ಆಡಿದ ಮಾತಿಗೂ ನಂತರ ನಡೆದುಕೊಂಡ ರೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಹಿಂದಿನ ವರ್ಷ ಟೊಂಕಾ ಮೀನುಗಾರಿಕಾ ಬಂದರಿಗೆ ತೆರಳುವ ರಸ್ತೆಯನ್ನೇ ಬಳಸಿಕೊಂಡಿದ್ದ ಖಾಸಗಿ ಕಂಪನಿಯವರ ಭಾರೀ ವಾಹನಗಳ ಓಡಾಟದಿಂದ ರಸ್ತೆ ಹಾಳಾಗುವ ಜೊತೆಗೆ ಮನೆಯ ಒಳಗೆ ದೂಳು ತುಂಬಿ ಆರೋಗ್ಯ ಕೆಡಿಸುತ್ತಿದೆ. ಅಳಿವೆಯ ಹೂಳೆತ್ತಿ ಅಲೆ ತಡೆಗೋಡೆ ನಿರ್ಮಿಸುವ ಮಾತಿರಲಿ ಕಾಮಗಾರಿ ಹೆಸರಲ್ಲಿ ಅಳಿವೆಬಾಯಿಗೆ ಮತ್ತಷ್ಟು ಹೂಳು ತುಂಬುತ್ತಿದ್ದಾರೆ ಎನ್ನುವ ದೂರು ನಿತ್ಯವೂ ಕೇಳಿಬರುವ ಜೊತೆಗೆ ಹಲವು ಬೋಟ್‍ಗಳು ದುರಂತಕ್ಕೀಡಾಗಿ ಸಾಕಷ್ಟು ಹಾನಿ ಸಂಭವಿಸಿ ಸ್ಥಳಿಯರ ವಾದಕ್ಕೆ ಪುಷ್ಠಿ ನೀಡಿದ ಘಟನೆ ನಡೆದಿತ್ತು. ಮನವಿ, ಮೇಲ್ಮನವಿ, ಪ್ರತಿಭಟನೆ, ದರಣಿಯಂತ ಹೋರಾಟಗಳನ್ನೂ ಸಂಘಟಿಸಿ ಸರ್ಕಾರದಮೇಲೆ ಒತ್ತಡತರುವ ಪ್ರಯತ್ನ ನಡೆಸಿದ್ದರೂ ಕೆಲಸ ನಿಲ್ಲಿಸಲು ಸಾಧ್ಯವಾಗಿರಲಿಲ್ಲ.
ಈ ನಡುವೆ ಸಮುದ್ರದ ಬದಿಯಿಂದ ಬಂದರು ನಿರ್ಮಾಣದ ಸ್ಥಳದವರೆಗೆ ರಸ್ತೆ ನಿರ್ಮಾಣಕ್ಕೆ ಖಾಸಗಿ ಕಂಪನಿಯವರು ಮುಂದಾಗಿದ್ದರು. ಸಮುದ್ರದಂಚಿನಲ್ಲಿ ಕಲ್ಲುಬಂಡೆಗಳನ್ನು ಹಾಕುವುದರಿಂದ ಜೀವ ವೈವಿದ್ಯತೆಗೆ ಹಾನಿಯಾಗುತ್ತದೆ ಮತ್ತು ನಾಡದೋಣಿ ಮೀನುಗಾರಿಕೆಗೂ ತೊಂದರೆಯಾಗಲಿದೆ ಎನ್ನುವ ಜೊತೆಗೆ ಬಂದರು ವಿಸ್ತರಿಸಿದಂತೆ ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾರೆ ಮತ್ತು ದೊಡ್ಡ ದೊಡ್ಡ ಹಡಗುಗಳ ಸಂಚಾರ ಹೆಚ್ಚಿದಾಗ ಮೀನುಗಾರಿಕೆ ಅವಸಾನಕ್ಕೆ ತಲುಪತ್ತದೆ ಇದರಿಂದ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದ ಉದ್ಯೋಗಕ್ಕೆ ಕುತ್ತುಬರಲಿದೆ ಎನ್ನುವ ಅಭದ್ರತೆ ಭವಿಷ್ಯದ ಕುರಿತು ಮೀನುಗಾರರನ್ನು ಕಾಡುತ್ತಿರುವ ಹಿನ್ನಲೆಯಲ್ಲಿ ಬಂದರು ಕಾಮಗಾರಿಯನ್ನು ವಿರೋಧಿಸಲು ಮುಂದಾಗಿದ್ದಾರೆ,
ಸಾರ್ವಜನಿಕರ ವಿರೋಧದ ಮಧ್ಯೆ ಕಂಪನಿ ಕಾಮಗಾರಿ ಆರಂಭವಾಗಿ ಇದೀಗ ಈ ಹಿಂದೆ ಸಾಮಗ್ರಿ ಸಾಗಾಟಕ್ಕೆ ಇರುವ ನಕ್ಷೆಯನ್ನು ಬದಲಿಸಿ ಮೀನುಗಾರ ಕುಟುಂಬ ವಾಸವಿರುವ ಸ್ಥಳದಲ್ಲಿ ರಸ್ತೆ ಮಾಡಲು ತಿರ್ಮಾನಿಸಿದ್ದಾರೆ. ಇದರಿಂದ ಮನೆ ಹಾಗೂ ಜಮೀನು ಕಳೆದುಕೊಳ್ಳುವ ಜೊತೆಗೆ ಮೀನುಗಾರಿಕೆ ವೃತ್ತಿ ಮುಂದುವರೆಸುವುದು ಸಮಸ್ಯೆ ಆಗಲಿದೆ. ಸರ್ವೆ ಕಾರ್ಯ ಮಾಡುವಾಗ ಪಂಚಾಯತ್ ಅಥವಾ ತಾಲೂಕ ಆಡಳಿತದ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ರಸ್ತೆ ನಿರ್ಮಾಣವಾದಲ್ಲಿ ಈ ಭಾಗದಲ್ಲಿ ವಾಸವಿರುವ ಮನೆಗಳಿಗೆ ಧೂಳು, ಹಾಗೂ ಮಾಲಿನ್ಯಕಾರಿ ವಸ್ತುಗಳೂ ಸೇರಿ ಸಾವಿರಾರು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೂಡಲೇ ಅಧಿಕಾರಿಗಳು ಇದನ್ನು ತಡೆಯಬೇಕು.
ಭಾಸ್ಕರ ತಾಂಡೇಲ್ ಜೈನ ಜಟಗೇಶ್ವರ ಯುವಕ ಸಂಘದ ಅಧ್ಯಕ್ಷ
……………………………….
ಸರ್ಕಾರ ಈ ಹಿಂದೆಯೇ ಯೋಜನೆ ಆರಂಭಿಸಿದೆ. ಹಿಂದಿನ ಪ್ರದೇಶದ ಮೂಲಕ ಸಂಚರಿಸಿದೆ ರಸ್ತೆ ಹಾಳಾಗಲಿದೆ ಎಂದು ಹೇಳಿದಾಗ ಬಂದರು ತೀರದ ರಸ್ತೆ ಅಭಿವೃದ್ದಿ ಮನಗಂಡು ಈ ಪ್ರದೇಶದ ಮೂಲಕ ರಸ್ತೆ ಮಾಡಲಾಗುತ್ತಿದೆ. ಅಲ್ಲಿಂದ ಯಾರನ್ನು ಒಕ್ಕಲು ಎಬ್ಬಿಸುವ ಉದ್ದೇಶವಲ್ಲ. ಈಗಾಗಲೇ ಸರ್ವೇ ಕಾರ್ಯ ಮಾಡಲಾಗಿದೆ. ವಿನಾ ಕಾರಣ ಕೆಲಸಕ್ಕೆ ಅಡ್ಡಿಪಡಿಸಿ ರಸ್ತೆ ಮಾಡಲು ಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಕಾನೂನಿನ ಪ್ರಕಾರ ಸರ್ಕಾರದ ನಿಯಮಾನುಸಾರವಾಗಿ ಕೆಲಸ ಮಾಡಲು ತಿಳಿಸಿದ್ದು ಹಾಗೆಯೇ ಮಾಡಲಾಗುತ್ತಿದೆ.
ತಹಶೀಲ್ದಾರ ವಿವೇಖ ಶೇಣ್ವಿ
……………………………………
ಪೊಲೀಸ್ ಭದ್ರತೆಯಲ್ಲಿ ರಸ್ತೆ ನಿರ್ಮಾಣ ಮೀನುಗಾರರು ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಬಹುದು ಎನ್ನುವ ಮುಂದಾಲೋಚನೆಯಲ್ಲಿ ಕಂಪನಿಯವರು ಪೊಲೀಸ್ ಇಲಾಖೆಯ ನೆರವು ಪಡೆದಿದ್ದರು. ಬೀಚ್‍ನುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಪೊಲೀಸರು ಕಾಮಗಾರಿಗೆ ತಡೆಯೊಡ್ಡದಂತೆ ಗ್ರಾಮಸ್ಥರಿಗೆ ತಾಕೀತು ಮಾಡಿದರು. ದಿಡೀರ್ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಸ್ಥಳಿಯರಿಗೆ ಅನ್ಯಾಯವಾಗುತ್ತಿದ್ದರೆ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರಬಹುದು ಎಂದು ಸೂಚಿಸಿದರು.
ಗ್ರಾಮಸ್ಥರು ಸಾಂಕೇತಿಕವಾಗಿ ಪ್ರತಿಭಟಿಸಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅವರೊಂದಿಗೆ ಪೋರ್ಟ್ ಜಾಗದ ಬಗ್ಗೆ ತಕರಾರು ತೆಗೆದು ದಾಖಲೆಗಳನ್ನು ಪ್ರದರ್ಶಿಸಿ ಚರ್ಚಿಸಿದರು. ಬಿಗಿ ಬಂದೋಬಸ್ತ್ ನಿರ್ವಹಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರಿಸ್ಥಿತಿಯನ್ನು ನಿರ್ವಹಿಸಿದರು.
.
Leave a Comment