ಪಾರಂಪರಿಕ ಶ್ರೀಮಂತಿಕೆ ಹೊಂದಿರುವ ದೇಶದ ವೈವಿಧ್ಯಮಯ ಕರಕುಶಲ ವಸ್ತುಗಳಿಗೆ “ಲೋಕಲ್ ಟು ಗ್ಲೋಬಲ್” ಪರಿಕಲ್ಪನೆಯಡಿ ಜಾಗತಿಕ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಏರ್ಪಡಿಸಿರುವ 9 ದಿನಗಳ ಕರಕುಶಲ ಮೇಳವನ್ನು (“ಹುನರ್ ಹಾತ್”) ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದಗೌಡ, ದೇಶದಲ್ಲಿ ತಮ್ಮದೇ ಆದ ವಿಶಿಷ್ಟ ಕುಲಕಸುಬುಗಳನ್ನು ಹೊಂದಿರುವ ಸುಮಾರು 4600 ಸಣ್ಣ -ಸಣ್ಣ ಸಮುದಾಯಗಳಿದ್ದು, ಪಾರಂಪರಾಗತವಾಗಿ ಬಳುವಳಿಯಾಗಿ ಬಂದಿರುವ ಅನೇಕ ಕೌಶಲ್ಯಗಳನ್ನು ಇವರು ರೂಢಿಸಿಕೊಂಡಿದ್ದಾರೆ ಎಂದು ಸರ್ಕಾರದ ಸಮೀಕ್ಷೆ ತಿಳಿಸಿದೆ. ಆದರೆ ಸರಿಯಾದ ಪ್ರೋತ್ಸಾಹ, ಆರ್ಥಿಕ ನೆರವು ಇಲ್ಲದೇ ಬಹುತೇಕ ಈ ಶ್ರೀಮಂತ ಕರಕುಶಲ ಕಲೆಗಳು ನಶಿಸುವ ಹಂತ ತಲುಪಿದ್ದವು. ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ದೃಷ್ಟಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.
ಕುಶಲಕರ್ಮಿಗಳಿಂದ ತಯಾರಾಗುವ ವೈವಿಧ್ಯಮಯ ವಸ್ತುಗಳಿಗೆ ವಾಣಿಜ್ಯ ಸ್ವರೂಪ ನೀಡಲು ಇಂತಹ ಕರಕುಶಲ ಮೇಳಗಳು ಉತ್ತಮ ವೇದಿಕೆಯಾಗಿವೆ. “ಲೋಕಲ್ ಟು ಗ್ಲೋಬಲ್” ಅಂದರೆ ಸ್ಥಳೀಯ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗುವಂತೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ನೀತಿಯಾಗಿದೆ. ಇದರ ಭಾಗವಾಗಿ ಇಂತಹ ಕರಕುಶಲ ಮೇಳವನ್ನು ದೇಶಾದ್ಯಂತ ಸಂಘಟಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ಸುಪ್ರಸಿದ್ಧ ಮೈಸೂರಿನ ರೇಷ್ಮೆ ಸೀರೆಗಳಿರಬಹುದು, ಬೀದರಿನ ಲೋಹಶಿಲ್ಪಗಳಿರಬಹುದು ಅಥವಾ ಚೆನ್ನಪಟ್ಟಣದ ಬೊಂಬೆಗಳೇ ಆಗಿರಬಹುದು. ಅನೇಕ ಕರಕುಶಲ ವಸ್ತುಗಳಿಗೆ ಕರ್ನಾಟಕ ತವರೂರಾಗಿದೆ. ಅವುಗಳನ್ನು ಇನ್ನಷ್ಟು ಬ್ರಾಂಡ್ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಮೈಸೂರಿನಲ್ಲಿ ವರ್ಷವಿಡೀ ಕರಕುಶಲ ವಸ್ತುಗಳ ಪ್ರದರ್ಶನ ಕೇಂದ್ರದ ವ್ಯವಸ್ಥೆಯಾಗಬೇಕು ಎಂಬ ಸಂಸದ ಶ್ರೀ ಪ್ರತಾಪ್ ಸಿಂಹ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀ ಹೇಮಂತಕುಮಾರ್ ಗೌಡ ಅವರ ಬೇಡಿಕೆಗೆ ತಮ್ಮ ಸಹಮತವಿದೆ. ಚೆನ್ನಪಟ್ಟಣದಲ್ಲಿ ಕರಕುಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಕೇಂದ್ರ ಸರಕಾರದ ಪರಿಗಣನೆಯಲ್ಲಿದೆ. ಇದರಿಂದ ಸಹಸ್ರಾರು ಕರಕುಶಲ ಸಮುದಾಯಕ್ಕೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದರು.
ಮೈಸೂರಿನ ಮಹಾರಾಜಾ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ 9 ದಿನಗಳ ಕರಕುಶಲ ಮೇಳದಲ್ಲಿ (ಹುನರ್ ಹಾತ್) ದೇಶದ ವಿವಿಧ ಭಾಗಗಳಿಂದ ಬಂದಿರುವ ಕುಶಲಕರ್ಮಿಗಳು ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ದೇಶದ ಕಲಾ ಶ್ರೀಮಂತಿಕೆಯ ವಿರಾಟ ದರ್ಶನವಾಗಿದೆ. ಹಾಗೆಯೇ ದೇಶದ ಬೇರೆ ಬೇರೆ ಭಾಗಗಳಿಂದ ಪಾಕ ಪ್ರವೀಣರು ಅಗಮಿಸಿದ್ದು ತಮ್ಮ-ತಮ್ಮ ಪ್ರದೇಶಗಳ ಬಗೆ ಬಗೆಯ ಸಾಂಪ್ರದಾಯಿಕ ಆಹಾರ, ಸ್ವಾಧಿಷ್ಟ ಭಕ್ಷ್ಯಭೋಜನಗಳ ಮಳಿಗೆ ತೆರೆದಿದ್ದು, ಸಾಂಸ್ಕೃತಿಕ ನಗರಿಯ ಜನತೆಗೆ ರಸದೂತಣ ನೀಡುತ್ತಿದ್ದಾರೆ.
ಮೈಸೂರಿನಲ್ಲಿ ಇಂತಹ ವಿಶಿಷ್ಟ ಮತ್ತು ಅದ್ಭುತ ಮೇಳ ಏರ್ಪಡಿಸಿರುವ ಅಲ್ಪಸಂಖ್ಯಾತ ವ್ಯವಹಾರ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಕ್ವಿ ಹಾಗೂ ತಂಡದವರಿಗೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಶ್ರೀ. ಡಿ.ವಿ. ಸದಾನಂದ ಗೌಡ ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಜನಾ ಸಚಿವ ಶ್ರೀ ನಾರಾಯಣಗೌಡ, ಸಂಸದರಾದ ಶ್ರೀ ಪ್ರತಾಪ್ ಸಿಂಹ, ಇಲಾಖಾ ಕಾರ್ಯದರ್ಶಿ ಶ್ರೀ ಪಿ ಕೆ ದಾಸ್ ಮುಂತಾದವರು ಪಾಲ್ಗೊಂಡಿದ್ದರು.
Leave a Comment