ಹೊನ್ನಾವರ: ಪಟ್ಟಣದ ಬಂದರ್ ನಲ್ಲಿರುವ ಮೀನುಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರು ಆಗ್ರಹಿಸಿದ್ದಾರೆ.
ಮೀನು ಮಾರುಕಟ್ಟೆ ಎದುರು ಜಮಾಯಿಸಿದ ನೂರಾರು ಮೀನುಗಾರ ಮಹಿಳೆಯರು ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಹಾಲಿ ಮಾಜಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈಗಿನ ಶಾಶಕರಾದ ದಿನಕರ ಶೆಟ್ಟಿ 2 ಬಾರಿ, ಹಿಂದಿನ ಶಾಸಕಿ ಶಾರದಾ ಶೆಟ್ಟಿ ಒಮ್ಮೆ ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದು ಬಿಟ್ಟರೆ, ಏನು ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯತಿಗೆ 5 ಮುಖ್ಯಾಧಿಕಾರಿಗೆ ಮನವಿ ನೀಡಿ ಆಗಿದೆ ಈಗ ಮತ್ತೊಬ್ಬರು ಬಂದಿದ್ದಾರೆ. ಅವರಿಂದಲೂ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ವರ್ಷಕ್ಕೆ ಲಕ್ಷಾಂತರ ರೂಪಾಯಿ ಟೆಂಡರ್ ಹಾಕಿ ನಾವು ಹಣ ಕೋಡುತ್ತೇವೆ. ಆದರೆ ಕುಡಿಯಲು ನೀರಿಲ್ಲ, ಕುಳಿತುಕೊಳ್ಳಲು ಸಮರ್ಪಕ ವ್ಯವಸ್ಥೆ ಇಲ್ಲ. ಬಾಗಿಲು ಮುರಿದು ಬಿದ್ದು ವರ್ಷವೇ ಕಳೆದಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಜಲದೇವತಾ ಮೀನುಗಾರ ಸಂಘದ ಅಧ್ಯಕ್ಷೆ ಗಂಗಾ ಮೇಸ್ತ ಮಾತನಾಡಿ ಈ ಮೊದಲು ನಾಲ್ಕು ವರ್ಷ ನಮ್ಮ ಸಂಘದಿಂದ ಮೀನು ಮಾರುಕಟ್ಟೆ ಟೆಂಡರ್ ಪಡೆದಿದ್ದೆವು. ಗಾಳಿ-ಮಳೆಗೆ ಮೀನು ಮಾರುಕಟ್ಟೆ ಮುರಿದು ಬೀಳದಂತೆ ಹೆದರಿಕೆಯಿಂದ ಬೇರೆ ಸ್ಥಳದಲ್ಲಿ ಮೀನು ಮಾರುತ್ತಿದ್ದೇವೆ. ದಿನಕ್ಕೆ 20 ರೂಪಾಯಿ ಕರ ಪಡೆಯುತ್ತಾರೆ.ಮಾರುಕಟ್ಟೆಯ ಬಾಗಿಲು ತುಕ್ಕು ಹಿಡಿದು ಮುರಿದು ನಾಯಿಗಳು ಮೀನು ಮಾರುಕಟ್ಟೆ ಒಳ ಹೊಕ್ಕುವಂತಾಗಿದೆ. ವಿದ್ಯುತ್ ,ನೀರು ಪೂರೈಕೆ ಸಮರ್ಪಕವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಪಟ್ಟಣ ಪಂಚಾಯತ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು .
ರತ್ನಾ ಮೇಸ್ತ ಮಾತನಾಡಿ ನೆರೆಯ ಕುಮಟಾ,ಭಟ್ಕಳದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದೆ. ಆದರೆ ಹೊನ್ನಾವರದಲ್ಲಿನ ಮೀನು ಮಾರುಕಟ್ಟೆ ಅವ್ಯವಸ್ಥಿತವಾಗಿದೆ.ಈ ಹಿಂದೆ ಟೆಂಡರ್ ಪಡೆದು ನಷ್ಟ ಅನುಭವಿಸಿದ್ದೇವೆ. ಟೆಂಡರ್ ಹಣ ತುಂಬಿಲ್ಲವಾದರೆ ಒಡೋಡಿ ಬಂದು ಹಣ ತುಂಬುವಂತೆ ಎಚ್ಚರಿಕೆ ನೀಡಿ ಹಣ ತುಂಬಬೇಕೆಂದು ಗಡುವು ನೀಡುತ್ತಾರೆ. ಆದರೆ ಮೀನು ಮಾರುಕಟ್ಟೆ ಸ್ಥಿತಿ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಅದೇಷ್ಟೋ ಬಾರಿ ಮೀನು ಮಾರುಕಟ್ಟೆಯ ವಿದ್ಯುತ್, ನೀರಿನ ಬಿಲ್ ಮೀನುಗಾರ ಮಹಿಳೆಯರೆ ತುಂಬಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಹಾಜರಿದ್ದರು.
Leave a Comment