ಭಟ್ಕಳ: ಪೂಣಾದಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್ನಲ್ಲಿ ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಭಟ್ಕಳ ತಾಲೂಕಿನ ಬೆಂಗ್ರೆ, ಬೊಗ್ರಿಜಡ್ಡು ನಿವಾಸಿಯಾಗಿದ್ದು ಪೂಣಾದಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಮೃತ ದುರ್ದೈವಿ. ಈತನು ಕಳೆದ 13 ವರ್ಷಗಳಿಂದ ಪೂಣಾದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದವನು, ಊರಿನಲ್ಲಿ ಏನಾದರು ಕಾರ್ಯಕ್ರಮ ಇದ್ದರೆ ವರ್ಷಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತಿದ್ದನು. ವೆಂಕಟೇಶ ಈತನು ಕಳೆದ 5-6 ದಿವಸಗಳ ಹಿಂದೆ ಪೂಣಾದಿಂದ ಮುರ್ಡೇಶ್ವರಕ್ಕೆ ಬಂದು ಪೂಣಾದಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಮುರ್ಡೇಶ್ವರದ ಪೆಟ್ರಿಶಿಯಾ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಕ್ವಾರಂಟೈನಲ್ಲಿ ಇದ್ದನು. ಈ ನಡುವೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿಯ ವೇಳೆಗೆ ತಾನಿದ್ದ ಪೆಟ್ರಿಶಿಯಾ ಲಾಡ್ಜಿನ ಕೊಠಡಿಯ ಕಿಟಕಿಯ ಮೇಲ್ಬದಿಯ ಕಬ್ಬಿಣದ ಸರಳಿಗೆ ಒಂದು ಟವೆಲ್ ಕಟ್ಟಿ, ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತನ ಸಹೋದರ ಗಣಪತಿ ಸುಕ್ರಯ್ಯ ದೇವಡಿ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment