ಹೊನ್ನಾವರ : ಗೊಬ್ಬರ, ಔಷಧ, ನೀರು, ಆರೈಕೆ ಯಾವುದನ್ನೂ ವಿಶೇಷವಾಗಿ ಬಯಸದೆ ತಾನು ನಿಂತ ಸ್ಥಳದಿಂದಲೇ ನೂರಾರು ವರ್ಷ ಶುದ್ಧ, ಸತ್ವಭರಿತ ರುಚಿಕರವಾದ ಸಾವಯವ ಹಣ್ಣು ನೀಡುವ ಹಲಸಿನ ಮರ ನೀಡುವ ಹಣ್ಣು, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ ಎಂಬುದು ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದಲೂ ಖಚಿತವಾಗಿದ್ದು ಮಧುಮೇಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಹಿರಿಯರು ತೋಟ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ ಕೊಳೆತು ಹಣ್ಣುದುರುತ್ತಿದ್ದರೂ ಮಂಗಗಳ ಹೊರತಾಗಿ ಬೇರಾರೂ ಮೂಸಿ ನೋಡದ ಫಲ ಇಂದು ಪ್ರತಿಷ್ಠಿತರ ಮನೆಯ ಭೋಜನ ಮಂಚವನ್ನೇರಿ ಕೂತಿದೆ. ಕೆಲವು ದೇಶ ಮತ್ತು ಕೇರಳ ರಾಜ್ಯ ಹಲಸಿಗೆ ರಾಜಮಾನ್ಯತೆ ನೀಡಿದ್ದು ತನ್ನ ಹೆಗ್ಗುರುತಾಗಿ ಪ್ರದರ್ಶಿಸಿದೆ. ಉತ್ತರಕನ್ನಡದಲ್ಲಿಯೂ ಸಾಕಷ್ಟು ವೈವಿಧ್ಯಮಯವಾದ ಹಲಸು ಬೆಳೆಯುತ್ತಿದ್ದು ಶೇ. 25ರಷ್ಟು ಬಳಕೆಯಾಗುತ್ತಿಲ್ಲ. ಹಲಸಿನಿಂದ ಸಂಪ್ರದಾಯದಂತೆ ಏನೆಲ್ಲಾ ಮಾಡಬಹುದು, ಇತ್ತೀಚಿನ ಹೊಸ ಶೋಧನೆಗಳೇನು ಎಂಬುದನ್ನು ಇಲ್ಲಿ ಪರಿಚಯಿಸಬೇಕಾಗಿದೆ. ಹಲಸಿನ ಎಲೆಯ ಕೊಟ್ಟೆಯಲ್ಲಿ ತುಂಬಿಸಿದ ಇಡ್ಲಿಗೆ ಅದರದ್ದೇ ಆದ ರುಚಿ ಇರುತ್ತದೆ. ಎಳೆ ಹಲಸು ತರಕಾರಿಯಾಗಿ ಪಲ್ಯಕ್ಕೆ ಬಳಸಲ್ಪಡುತ್ತಿದ್ದರೆ ಬೆಳೆದ ಹಲಸು ಹಪ್ಪಳವಾಗಿ, ಸಂಡಿಗೆಯಾಗಿ ಚಪ್ಸ್ ಆಗಿ ಬಳಸಲ್ಪಡುತ್ತಿದೆ. ಕಾಯಿ ಸೊಳೆಗಳನ್ನು ಬಿಡಿಸಿ, ಕುದಿಸಿ ತಣಿಸಿದ ಉಪ್ಪು ನೀರಿನಲ್ಲಿ ಮುಳುಗಿಸಿಟ್ಟರೆ ಮಳೆಗಾಲಕ್ಕೂ ತರಕಾರಿಯಾಗುತ್ತದೆ.
ಹಣ್ಣಾದ ಹಲಸು ದೋಸೆಯಾಗಿ, ಇಡ್ಲಿಯಾಗಿ ಮತ್ತು ಬರಿದೆ ತಿನ್ನಲು, ಜ್ಯೂಸ್, ಪಾಯಸ, ಹಲ್ವಾ, ಚೊಕಲೇಟ್, ಜಾಮ್, ಕೇಸರಿಬಾತ್, ಸುಟ್ಟೇವು, ಮೊದಲಾದ ತಿಂಡಿಗಳ ರೂಪದಲ್ಲಿ ಈಗ ಸಿದ್ಧವಾಗುತ್ತಿದೆ. ಹಲಸಿನ ಬೀಜ ಸಹ ಸಾಂಬಾರಿಗೆ ಬಳಕೆಯಾಗುತ್ತದೆ. ಬೀಜ ಜಜ್ಜಿ ಬೇಯಿಸಿ ಬೆಲ್ಲ, ಕಾಯಿ ಹಾಕಿ ಕಾಯಿಸಿದರೆ ಇದನ್ನು ಚಿಕ್ಕಚಿಕ್ಕದಾಗಿ ಕಟ್ಲೆಟ್ನಂತೆ ಮಾಡಿ ದೋಸೆ ಬಂಡಿಯಲ್ಲಿ ಬಿಸಿಮಾಡಿದರೆ ಬುಡ್ಡಣ್ಣನಾಗುತ್ತದೆ. ಇತ್ತೀಚಿನ ಹಲಸಿನ ಹೊಸ ತಿಂಡಿಗಳ ಕುರಿತು ಹಲವರು ವಿವರ ಕೇಳಿದ್ದಾರೆ. ಗಟ್ಟಿ ಹಲಸಿನ ಹಣ್ಣಿನ ಸೊಳೆ ಬಿಡಿಸಿ ಮಿಕ್ಸ್ಚರ್ನಲ್ಲಿ ಗೇರುಬೀಜ, ಬಾದಾಮಿ ಜೊತೆ ಅರೆದು ದ್ರಾಕ್ಷಿ, ಬೆಲ್ಲ ಅಥವಾ ಸಕ್ಕರೆ ಸೇರಿಸಿ ತೆಳು ಮಾಡಿದರೆ ಜ್ಯೂಸ್ ಆಯಿತು. ನೀರು ಸೇರಿಸದೆ ಕುದಿಸಿದರೆ ಘಮಘಮ ಪಾಯಸವಾಯಿತು.
ಹಲಸಿನ ಹಣ್ಣಿನ ರಸ ತೆಗೆದು ಅದನ್ನು ಸಕ್ಕರೆಯ ಜೊತೆ ಕಾಯಿಸಿದಾಗ ತೆಳುವಾದ ಜಾಮ್ ಆಗುತ್ತದೆ ದಪ್ಪವಾದರೆ ಚೊಕಲೇಟ್ ಆಗುತ್ತದೆ. ಸೊಳೆಗಳನ್ನು ಅರೆದುಕೊಂಡು ಕೊಬ್ಬರಿ, ಬೆಲ್ಲ, ಹುರಿದ ಕಡ್ಲೆ ಅಥವಾ ಗೋಧಿ ಹಿಟ್ಟು ಕಾಸಿ ಗಟ್ಟಿ ಮಾಡಿದರೆ ಹಲ್ವಾ ಆಯಿತು. ಹಣ್ಣು ಚಿಕ್ಕಚಿಕ್ಕ ಹೋಳು ಮಾಡಿ ಸಕ್ಕರೆ ಹೂಡಿಟ್ಟು ಅರಳಿದ ಅನ್ನದ ಜೊತೆ ಸೇರಿಸಿ ಕಾಯಿಸಿದರೆ ಕೇಸರಿಬಾತಾಯಿತು. ಸೊಳೆಗಳನ್ನು ಮೈದಾ ಹಿಟ್ಟು, ಬೆಲ್ಲ ಸೇರಿಸಿ ಕಲಸಿ ಎಣ್ಣೆಯಲ್ಲಿ ಕರಿದರೆ ಸುಟ್ಟೇವಾಯಿತು. ಹಲಸಿನ ಸೊಳೆಗಳನ್ನು ಮಿಕ್ಸ್ಚರ್ನಲ್ಲಿ ಬೀಸಿಕೊಡು ಗೋಧಿಹಿಟ್ಟಿನಲ್ಲಿ ಹದವಾಗಿ ಕಲಸಿ ಲಟ್ಟಿಸಿ ತುಪ್ಪದಲ್ಲಿ ಬೇಯಿಸಿದರೆ ಘಮಘಮ ಚಪಾತಿ ಸಿದ್ಧ.
ಗ್ರಾಮೀಣ ಗೃಹಿಣಿಯರು ಕೋವಿಡ್ ಬಿಡುವಿನಲ್ಲಿ ಪ್ರಯೋಗ ಮಾಡಿದರೆ ಇನ್ನಷ್ಟು ತಿಂಡಿಗಳನ್ನು ಮಾಡುವುದು ಸಾಧ್ಯವಿದೆ. ಅದಕ್ಕೆ ಬೋಳಗೆರೆ ಶ್ರೀಮತಿ ಪುಷ್ಪಾ ಜಿ. ಭಟ್ ಮತ್ತು ಗುಣವಂತೆಯ ಮರಿ ಭಟ್ ಇವರಿಂದ ಮಾಹಿತಿ ಪಡೆದು ನಿಮಗೆ ಹಂಚಿದ್ದೇನೆ, ಮಾಡಿ ನೋಡಿ.
—– G U Bhat
Leave a Comment