
ಯಲ್ಲಾಪುರ ತಾಲೂಕಾ ಪಂಚಾಯತ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಯಲ್ಲಾಪುರ: ಪಶ್ಚಿಮ ಘಟ್ಟದಲ್ಲಿ ಬರುವ ತಾಲೂಕುಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿರುವ ಒಟ್ಟು ೨೩ ತಾಲೂಕಗಳಲ್ಲಿ ಯಲ್ಲಾಪುರವೂ ಒಂದಾಗಿದೆ. ಭೂಕುಸಿತದ ನಂತರದ ತೆಗೆದುಕೊಳ್ಳುವ ಕ್ರಮಗಳಿಗಿಂತ ಘಟಿಸಬಹುದಾದ ಸ್ಥಳಗಳ ಮೇಲೆ ನಿಗಾ ಇರಿಸಿ ಅವಘಡ ಸಂಭವಿಸದAತೆ ಮುನ್ನೆಚ್ಛರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಅಭಿವೃದ್ಧಿ ಜೊತೆಜೊತೆಗೆ ಪರಿಸರವನ್ನೂ ಸಂರಕ್ಷಿಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ ಎಂದು ಜೀವ ವೈವಿಧ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಅವರು ಪಟ್ಟಣದ ತಾಲೂಕಾ ಪಂಚಾಯತ್‌ನಲ್ಲಿ ಕೆಲವು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿದರು.
ಜುಲೈ ೧ ರಿಂದ ಆಗಸ್ಟ್ ೧೫ರವರೆಗೆ ಜೀವ ವೈವಿಧ್ಯ ದಿನ ಆಚರಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.
ಬೇಡ್ತಿ ನದಿಯಿಂದ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಿದ್ದು ಕಳೆದ ನಾಲ್ಕು ವರ್ಷಗಳಿಂದ ನೀರು ಪೂರೈಕೆಯಾಗದೇ ಸ್ಥಗಿತಗೊಂಡ ವಿಷಯ ತಿಳಿದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ ಮಯಖ್ಯಾಧಿಕಾರಿ ಅರುಣ್ ನಾಯ್ಕ ಬೇಡ್ತಿ ನದಿಯ ನೀರನ್ನು ಪಟ್ಟಣದ ಜನತೆ ಬಳಸಲು ಹಿಂದೇಟು ಹಾಕಿದ್ದು ಪ.ಪಂಗೆ ಯೋಜನೆ ನಿರ್ವಹಣೆಯೂ ಹೊರೆಯಾದ ಕಾರಣ ಸ್ಥಗಿತಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ ೧೦೭ ಕೊಳವೆಬಾವಿಗಳಿದ್ದು ಬೇಸಿಗೆ ಸಮಯದಲ್ಲಿ ನೀರಿನ ಅಭಾವವಾಗದಂತೆ ಮುಂಜಾಗ್ರತೆಗಾಗಿ ೧೪ ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದರು. ಪಟ್ಟಣದ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಕೊಳವೆಬಾವಿಯನ್ನು ಅವಲಂಭಿಸಿರುವುದನ್ನು ಕೇಳಿ ಆಶೀಸರ ಆಶ್ಚರ್ಯ ವ್ಯಕ್ತಪಡಿಸಿ ಇಷ್ಟೆಲ್ಲಾ ನೀರು ಪೂರೈಸುತ್ತಿರುವ ಕೊಳವೆಬಾವಿಗಳಿಗೆ ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕಿದೆ ಎಂದರು.
ತಾಲೂಕಿನಲ್ಲಾಗಿರುವ ಕೆರೆಗಳ ಒತ್ತುವರಿ ಕುರಿತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಗ್ರೇಡ್-೨ ತಹಸೀಲ್ದಾರ್ ಸಿ.ಜಿ.ನಾಯ್ಕ ಉತ್ತರಿಸಿ ತಾಲೂಕಿನಲ್ಲಿ ಒಟ್ಟು ೧೩೮ ಸರ್ಕಾರಿ ಕೆರೆಗಳಿದ್ದು ಇದುವರೆಗೆ ೮೮ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ೬೧ ಕೆರೆಗಳು ಅತಿಕ್ರಮಣ ಮುಕ್ತವಾಗಿದ್ದು ೨೧ ಕೆರೆಗಳು ಅತಿಕ್ರಮಣವಾಗಿವೆ. ಅದರಲ್ಲಿ ೧೨ಕೆರೆಗಳ ಅತಿಕ್ರಮಣ ತೆರವುಗೊಳಿಸಲಾಗಿದೆ. ಇನ್ನುಳಿದ ಕೆರೆಗಳ ಸರ್ವೆ ಕಾರ್ಯವಾಗಬೇಕಿದ್ದು ಮುಂದಿನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ದಾನಮ್ಮ ಗುಂಜೀಗಾವಿ, ತಾ.ಪಂ ವ್ಯವಸ್ಥಾಪಕ ಗಂಗಾಧರ ಭಟ್ ಉಪಸ್ಥಿತರಿದ್ದರು.
Leave a Comment