ವರ್ಷದ ಡಿಸೆಂಬರ್ ತಿಂಗಳೊಳಗಾಗಿ ಎಲ್ಲರಿಗೂ ಲಸಿಕೆ ಒದಗಿಸಲು ಯೋಜಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
‘ದೇಶಕ್ಕೆ ಕೋವಿಡ್ ಒಡ್ಡಿದ ಸವಾಲು ಹಾಗೂ ಅದನ್ನು ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಎದುರಿಸಿದ ರೀತಿ’ ಬಗ್ಗೆ ಬಿಜೆಪಿಯು ಸಂಘಟಿಸಿದ್ದ ರಾಜ್ಯಮಟ್ಟದ ಇ-ಚಿಂತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಯಲ್ಲಿ ಶೇಕಡಾ 75ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುತ್ತಿದೆ. ಲಸಿಕೆಯ ಲಭ್ಯತೆಯನ್ನು ತ್ವರಿತವಾಗಿ ಹೆಚ್ಚಿಸಲು ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಭಾರತ್ ಬಯೋಟೆಕ್ ಸಂಪೂರ್ಣ ಸ್ವದೇಶಿಯವಾದ ‘ಕೊವ್ಯಾಕ್ಸಿನ್’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿಯು ಸದ್ಯ ಮಾಸಿಕವಾಗಿ 1.7 ಕೋಟಿ ಡೋಸುಗಳನ್ನು ಉತ್ಪಾದಿಸುತ್ತಿದೆ. ‘ಕೊವ್ಯಾಕ್ಸಿನ್’ ಲಸಿಕೆಯನ್ನು ಇನ್ನಷ್ಟು ಘಟಕಗಳಲ್ಲಿ ಉತ್ಪಾಸಲು ವ್ಯವಸ್ಥೆ ಮಾಡಲಾಗುತ್ತಿದ್ದು ಮುಂದಿನ ತಿಂಗಳ (ಜುಲೈ) ವೇಳೆಗೆ ಇದರ ಮಾಸಿಕ ಉತ್ಪಾದನೆ 7.5 ಕೋಟಿ ಡೋಸುಗಳಿಗೆ ಏರಿಕೆಯಾಗಲಿದೆ ಎಂದು ಅವರು ವಿವರಿಸಿದರು.
ಹಾಗೆಯೇ ಸೆರಮ್ ಇನ್ಸ್ಟಿಟ್ಯೂಟಿನ (Serum Institute of India Pvt. Ltd) ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಸೆಪ್ಟೆಂಬರ್ ವೇಳೆಗೆ 11 ಕೋಟಿ ಡೋಸಿಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ರಷ್ಯಾದಿಂದ ಸ್ಪುಟ್ನಿಕ್-5 ಲಸಿಕೆಯ ಆಮದು ಈಗಾಗಲೇ ಆರಂಭಗೊಂಡಿದೆ. ಇದರ ಹೊರತಾಗಿ ಭಾರತದಲ್ಲಿಯೂ ಅದರ ಉತ್ಪಾದನೆ ಆರಂಭಿಸಲು (5 ಕಂಪನಿಗಳಿಂದ) ಅಗತ್ಯ ಒಪ್ಪಂದವಾಗಿದೆ ಎಂದು ಸದಾನಂದ ಗೌಡ ಹೇಳಿದರು.
ಹೈದರಾಬಾದ್ ಮೂಲದ ಬಯೋಲೊಜಿಕಲ್-ಇ ಕಂಪನಿಯ ಜೊತೆ ಕೋವಿಡ್ ಲಸಿಕೆ ಖರೀದಿಸುವ ಬಗ್ಗೆ ಚರ್ಚಿಸಲಾಗಿದ್ದು ಅದು ಡಿಸೆಂಬರ್ ಒಳಗಾಗಿ 30 ಕೋಟಿ ಡೋಸುಗಳನ್ನು ಪೂರೈಸಲಿದೆ. ಹೀಗೆ ಎಲ್ಲ ರೀತಿಯಿಂದಲು ಲಸಿಕೆಯ ಲಭ್ಯತೆ ಪ್ರಮಾಣವನ್ನು ಹೆಚ್ಚ್ಚಿಸಲಾಗುತ್ತಿದ್ದು ಡಿಸಂಬರ್ ಒಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲ ಭಾರತಿಯರಿಗೂ ಕೋವಿಡ್ ಲಸಿಕೆ ನೀಡಲು ಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಕೋವಿಡ್ ಮೂರನೆ ಅಲೆ ಬರಬಹುದು ಮತ್ತು ಅದು ಮಕ್ಕಳನ್ನು ಹೆಚ್ಚು ಕಾಡಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆಯಾಗಿದೆ. ಭಾರತದಲ್ಲಿಯೇ ಮಕ್ಕಳ ಕೊರೊನಾ ಲಸಿಕೆಯ ಅಭಿವೃದ್ಧಿ ಕೊನೆಯ ಹಂತ ಪಲುಪಿದ್ದು ಅದರ ಪರೀಕ್ಷೆಗೆ (ಮಕ್ಕಳ ಮೇಲೆ ಪ್ರಯೋಗ) ಅಗತ್ಯ ಅನುಮತಿ ನೀಡಲಾಗಿದೆ. ಪರೀಕ್ಷೆ ಯಶಸ್ವಿಯಾದರೆ ಮಕ್ಕಳಿಗೂ ಲಸಿಕೆಯನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಕೇಂದ್ರ ಸಚಿವರು ಪ್ರಕಟಿಸಿದರು.
ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ತ್ವರಿತವಾಗಿ ದೇಶದಲ್ಲಿನ ವೈದ್ಯಕೀಯ ಸೌಲಭ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿ ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿತು. ಈ ಮಹಾಮಾರಿಯನ್ನು ಭಾರತವು ನಿರ್ವಹಿಸಿದ ರೀತಿಗೆ ವಿಶ್ವದ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದವು. ವಿಶ್ವ ಆರೋಗ್ಯ ಸಂಸ್ಥೆಯೂ ನಮ್ಮ ಕೋವಿಡ್ ನಿರ್ವಹಣೆಯನ್ನು ಪ್ರಶಂಸಿಸಿತು ಎಂದ ಸದಾನಂದ ಗೌಡ ಭಾರತದ ಕೋವಿಡ್ ನಿರ್ವಹಣೆ ವಿಶ್ವಕ್ಕೇ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಆರಂಭದಲ್ಲಿ, ಕೋವಿಡ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಜನಸಾಮಾನ್ಯರಲ್ಲಿ ಕಂಡುಬಂದ ಹಿಂಜರಿಕೆಯನ್ನು ಪ್ರಸ್ತಾಪಿಸಿದ ಸದಾನಂದ ಗೌಡ ಅವರು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ನಾಯಕರು ಸ್ವದೇಶಿ ಲಸಿಕೆ ಬಗ್ಗೆ ಉಂಟುಮಾಡಿದ ತಪ್ಪುಗ್ರಹಿಕೆಯೇ ಇದಕ್ಕೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ಸಿಗಂತೂ ಅಪಪ್ರಚಾರವೇ ಬಂಡವಾಳವಾಗಿದೆ. ಕೊರೊನಾ ನಿರ್ಮೂಲನೆಗೆ ಲಸಿಕೆ ನೀಡುವುದೇ ಪರಿಹಾರವಾಗಿದೆ. ದೇಶದಲ್ಲಿಯೇ ತಯಾರಿಸಲಾದ ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. ನಮ್ಮ ಬಿಜೆಪಿ ಕಾರ್ಯಕರ್ತ ಮಿತ್ರರು ಪ್ರತಿಪಕ್ಷದವರ ಅಪಪ್ರಚಾರಕ್ಕೆ ಸಮರ್ಥವಾಗಿ ಎದಿರೇಟು ನೀಡಬೇಕು. ಅವರ ದುರುದ್ದೇಶದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸದಾನಂದ ಗೌಡ ಕರೆ ನೀಡಿದರು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದರು, ಜಿಲ್ಲಾಧ್ಯಕ್ಷರು, ವಿವಿಧ ಮೊರ್ಚಾಗಳ ಪದಾಧಿಕಾರಿಗಳು ಭಾಗಿಯಾದರು.
Leave a Comment