ಹೊನ್ನಾವರ: ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯನ್ನು ಪತ್ತೆಹಚ್ಚಿರುವ ಹೊನ್ನಾವರ ಪೊಲೀಸರು, ಕದ್ದ ಆಭರಣವನ್ನು ವಶಪಡಿಸಿಕೊಂಡು ಆರೋಪಿಯನ್ನಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಂಬಿಯ ಹಿಂದೆ ಕಳುಹಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಹೊನ್ನಾವರ ಬಂದರು ರಸ್ತೆಯ ಅಸೂರಖಾನ್ ಗಲ್ಲಿಯ ಶಾಹೀರಾಬಾನು ಪಾಲಕ್ ಕೋಂ ಸಾಧಿಕ್ ಶೇಕ್ (41) ಎಂದು ಗುರುತಿಸಲಾಗಿದೆ. ಎಪ್ರಿಲ್ 4ರಂದು ಮದುವೆಯಾಗಿದ್ದ ಮುಶಾಹೀನ್ ವರನ ಮನೆಯಿರುವ ಹೊನ್ನಾವರ ಪಟ್ಟಣದ ಗಾಂಧಿನಗರಕ್ಕೆ ಬಂದಾಗ ಮದುವೆ ಶಾಸ್ತ್ರಗಳನ್ನು ಪೂರೈಸಿ ಸ್ನಾನಗೃಹಕ್ಕೆ ಹೋಗುವಾಗ ಬೆಡ್ ರೂಮಿನಲ್ಲಿ ತೆಗೆದಿಟ್ಟು ಹೋಗಿದ್ದ ಆಭರಣ ವಾಪಸ್ ಬಂದು ನೋಡುವಷ್ಟರಲ್ಲಿ ಮಾಯವಾಗಿತ್ತು ಎನ್ನಲಾಗಿದೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಗೆ ಕರ್ಕಿಕೋಡಿಯ ಅಬ್ದುಲ್ ಸತ್ತಾರ್ ಮೈನುದ್ದೀನ್ ಶೇಖ್ ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಬಂಗಾರದ ಆಭರಣ ಕಳ್ಳತನವಾಗಿದೆ ಎನ್ನಲಾದ ಸಮಯದಲ್ಲಿ ಮನೆಯಲ್ಲಿ ಇದ್ದವರ ಮಾಹಿತಿ ಕಲೆ ಹಾಕಿ ಎಲ್ಲಾ ಆಯಾಮಗಳಿಂದಲೂ ಕೂಲಂಕುಷವಾಗಿ ಪರಿಶೀಲಿಸಿದಾಗ ಸಿಕ್ಕ ಸುಳಿವುಗಳು ಶಾಹೀರಾಬಾನು ಅತ್ತಲೇ ಬೆರಳು ಮಾಡುತ್ತಿದ್ದವು.
ಮದುಮಗಳಿಗೆ ದೂರದ ಸಂಬಂಧಿಯೂ ಆಗಿದ್ದ ಶಾಹೀರಾಬಾನು ಕದ್ದ ಬಂಗಾರದ ಆಭರಣವನ್ನು ಹುಡುಗನೊಬ್ಬನ ಕೈಗೆ ಕೊಟ್ಟು ಆತನ ಮೂಲಕ ಬ್ಯಾಂಕ್ನಲ್ಲಿ ಅಡವಿಟ್ಟು ಹಣವನ್ನೂ ಪಡೆದುಕೊಂಡಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ. ಸಾಕಷ್ಟು ಸಾಕ್ಷಿಗಳನ್ನು ಕಲೆಹಾಕಿದಮೇಲೆಯೇ ಆರೋಪಿಯ ತನಿಖೆಗೆ ಪೊಲೀಸರು ಮುಂದಾದಾಗಲೂ ನಾನವಳಲ್ಲ, ನಾನಂತವಳಲ್ಲ, ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸುತ್ತ ಬಂದಾಕೆಗೆ ತಾನು ಈ ಕೇಸಲ್ಲಿ ಸಿಕ್ಕಿಹಾಕಿಕೊಳ್ಳುವುದು ಪಕ್ಕಾ ಅನಿಸಿದಾಗ ನಾನು ಈ ಆಭರಣ ಕದ್ದಿದ್ದಲ್ಲ ಮನೆಯೆದುರು ಬಿದ್ದಿತ್ತು ಎಂದು ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ಯತ್ನಿಸಿದ್ದಳು ಎನ್ನಲಾಗಿದೆ.
ಶಾಹೀರಾಬಾನು ನಂತಹ ಸಾವಿರಾರು ಮಂದಿಯ ನವರಂಗಿ ಆಟವನ್ನು ಕಂಡಿದ್ದ ಪೊಲೀಸರು ಪಟ್ಟು ಸಡಿಲಿಸದೇ ಸಾಕ್ಷ್ಯಗಳನ್ನು ಕಲೆಹಾಕಿ ಕೇಡಿ ಲೇಡಿಯ ಕೈಗೆ ಕೋಳ ತೊಡಿಸಿ ಕಂಬಿಯ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಪ್ರಕರಣವನ್ನು ಬೇಧಿಸಿದ ಸಿ.ಪಿ.ಐ ಶ್ರೀಧರ.ಎಸ್.ಆರ್ ನೇತೃತ್ವದ, ಅಪರಾಧ ವಿಭಾಗದ ಪಿ.ಎಸ್.ಐ ಸಾವಿತ್ರಿ ನಾಯಕ, ಪಿ.ಎಸ್.ಐ(ಕಾ.ಸು) ಶಶಿಕುಮಾರ್ ಸಿ.ಆರ್, ಪಿ.ಎಸ್.ಐ 2 ಮಹಾಂತೇಶ ನಾಯಕ, ಪ್ರೊ.ಪಿ.ಎಸ್.ಐ ಶಾಂತಿನಾಥ, ಸಿಬ್ಬಂದಿಗಳಾದ ಸಿ.ಹೆಚ್.ಸಿ ರಮೇಶ ಲಮಾಣಿ, ಸಿ.ಹೆಚ್.ಸಿ ಕೃಷ್ಣ ಗೌಡ, ಸಿ.ಪಿ.ಸಿ ಮಹಾವೀರ, ಸಿ.ಪಿ.ಸಿ ರಯೀಸ್ ಭಗವಾನ್ ವರನ್ನೊಳಗೊಂಡ ತಂಡದ ಪ್ರಯತ್ನವನ್ನು ಭಟ್ಕಳ ಡಿ.ವೈ.ಎಸ್ಪಿ ಬೆಳ್ಳಿಯಪ್ಪ,ಕಾರವಾರ ಎ.ಎಸ್ಪಿ ಬದ್ರಿನಾಥ, ಎಸ್ಪಿ ಶಿವಪ್ರಕಾಶ ದೇವರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment