ಹೊನ್ನಾವರ: ಕಾಸರಕೋಡ ಟೊಂಕಾದಲ್ಲಿ ಮಿನುಗಾರಿಕೆ ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕವಾಡುತ್ತಿದ್ದಾರೆ ಎಂದು ಶಾಸಕದ್ವಯರಾದ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಆರೋಪಿಸಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ತಮ್ಮ ಅಧಿಕಾರವಧಿಯಲ್ಲಿ ಭಟ್ಕಳಕ್ಕೆ ಬಂದು ಚಾಲನೆ ನೀಡಿದ ಕಾಂಗ್ರೇಸ್ ನಾಯಕರು ಇದೀಗ ಬಂದರು ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ೨೦೧೬ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾಣಿಜ್ಯ ಬಂದರು ಮಂಜೂರಾಗಿದೆ.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ಆಗ ಮಂಕಾಳ ವೈದ್ಯ ಶಾಸಕರಾಗಿದ್ದರು. ಆದರೆ ಅವರು ಈಗ ವಾಣಿಜ್ಯ ಬಂದರು ಬೇಡ ಎಂದು ಹೇಳುತ್ತಿದಾರೆ. ಅವರಿಗೆ ನಿಜವಾದ ಕಳಕಳಿ ಇದ್ದರೆ ಈ ಯೋಜನೆ ಬಂದ ಸಮಯದಲ್ಲೇ ಮೀನುಗಾರರೊಂದಿಗೆ ಚರ್ಚಿಸಿ ಯೋಜನೆ ಬೇಕೋ ಬೇಡವೋ ಎಂಬುದನ್ನು ನಿರ್ಣಯಿಸಬೇಕಿತ್ತು. ಈಗ ಹೇಳಿ ಪ್ರಯೋಜನವಿಲ್ಲ. ಬಿಜೆಪಿ ಈ ಹಿಂದೆಯು ಮುಂದೆಯು ಮೀನುಗಾರರ ಪರವಾಗಿ ಇರಲಿದೆ.
ಬಂದರು ನಿರ್ಮಾಣವಾದರೆ ತಾಲೂಕಿನ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಆಗುವಜೊತೆ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ ಎಂದರು.ಶಾಸಕ ಸುನೀಲ್ ನಾಯ್ಕ ಮಾತನಾಡಿ, ಮೀನುಗಾರ ಕುಟುಂಬದಿಂದ ಬಂದ ಮಾಜಿ ಶಾಸಕ ಮಂಕಾಳ ವೈದ್ಯ ತಮ್ಮ ಅಧಿಕಾರವಧಿಯಲ್ಲಿ ಒಂದಾದರೂ ಮೀನುಗಾರ ಕುಟುಂಬಕ್ಕೆ ನ್ಯಾಯ ನೀಡಿದ್ದಾರ? ಮಂಜೂರಾದ ಮಾವಿನಕುರ್ವಾ ಸೇತುವೆ ಬೇರಡೆಗೆ ಸ್ಥಳಾಂತರಿಸಿದ ಮಾಜಿ ಶಾಸಕರು ಕಾಸರಕೋಡ ಬಂದರನಿಂದ ಮೀನುಗಾರರಿಗೆ ತೊಂದರೆಯಾಗುತ್ತಿದ್ದರೆ ಸ್ಥಳಾಂತರಿಸದೇ ಉದ್ಘಾಟಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮೀನುಗಾರರನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ದಾರಿತಪ್ಪಿಸುವ ಜೊತೆ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ. ಕಾಸರಕೋಡದಲ್ಲಿ ಬಂದರು ಕಾಮಗಾರಿಯಿಂದ ಮೀನುಗಾರಿಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಯಾವುದೇ ಮನೆಗಳಿಗೆ ಹಾನಿಯಾಗುವುದಲ್ಲಿ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ ಭಂಡಾರಿ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ಪ್ರಮುಖರಾದ ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಶಿವಾನಿ ಶಾಂತಾರಾಮ, ವಿನೋದ ನಾಯ್ಕ ರಾಯಲಕೇರಿ, ಮಂಜುನಾಥ ನಾಯ್ಕ ಗೇರುಸೊಪ್ಪಾ, ಗಣಪತಿ ನಾಯ್ಕ ಬಿ.ಟಿ., ದತ್ತಾತ್ರಯ ಮೇಸ್ತ, ಲೋಕೇಶ ಮೇಸ್ತ, ಸುರೇಶ ಖಾರ್ವಿ, ಮೇಧಾ ನಾಯ್ಕ, ಭಾಗ್ಯ ಮೇಸ್ತ, ಸುರೇಶ ಹರಿಕಾಂತ, ಉಲ್ಲಾಸ ನಾಯ್ಕ ಇತರರಿದ್ದರು.
Leave a Comment