ಹೊನ್ನಾವರ; ಅಂತರ್ಜಾಲದ ತಳಕು ಬಳುಕು ಬೆಡಗು ಬಿನ್ನಾಣಕ್ಕೆ ಕಳೆದು ಹೋಗುತ್ತಿರುವ ವಿವಾಹಿತ ಮಹಿಳೆಯರು ನಾಪತ್ತೆ ಪ್ರಕರಣ ಆತಂಕಕ್ಕೆ ಎಡೆ ಮಾಡಿದ ಬೆಳವಣಿಗೆಯಾಗಿದೆ. ಕೆಲ ದಿನಗಳ ಹಿಂದೆ ಮಂಕಿಯ ನಾಕುದಾಮೊಹಲ್ಲಾದ ಕೆಪ್ಪನಹಿತ್ತಲಲ್ಲಿರುವ ತನ್ನ ತವರು ಮನೆಗೆ ಬಂದು ಕಾಣೆಯಾಗಿದ್ದ ಮಹಿಳೆಯನ್ನು ಮಂಕಿ ಪೊಲೀಸರು ಮಾಯಾನಗರಿ ಮೂಂಬೈ ಅಲ್ಲಿ ಪತ್ತೆ ಹಚ್ಚಿ ವಾಪಸ್ಸು ಮನೆಗೆ ಕರೆ ತಂದಿದ್ದಾರೆ.
ಶಿರೂರಿಗೆ ಮದುವೆಮಾಡಿಕೊಟ್ಟಿದ್ದ ಮಗಳು ತಮ್ಮ ಮನೆಗೆ ಬಂದಾಗ ಕಾಣೆಯಾದ ಬಗ್ಗೆ ವ್ಯಾಕುಲಗೊಂಡ ತಂದೆ ಹುಡುಕಿಕೊಡುವಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮನವಿ ಮಾಡಿದ್ದರು.
ಮಹಿಳೆ ನಾಪತ್ತೆಯಾದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ತನಿಖೆಯಲ್ಲಿ ಆಕೆ ಮುಂಬೈ ಅಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದರು. ಕಾಣೆಯಾದ ಮಹಿಳೆಯ ಅಣ್ಣ ಹಾಗೂ ಅಕ್ಕನನ್ನು ಜೊತೆಯಲ್ಲಿ ಕರೆದುಕೊಂಡು ಮುಂಬೈಗೆ ಹೋಗಿದ್ದ ಮಂಕಿ ಠಾಣೆಯ ಸಿಬ್ಬಂದಿಗಳಾದ ನಾಗರಾಜ ಒಂಟಗೋಡಿ, ಹಾಗೂ ಕು.ಜಯಲಕ್ಷ್ಮೀ ನಾಯ್ಕ ಮಹಿಳೆ ಮತ್ತು ಮಗುವನ್ನು ಪತ್ತೆಮಾಡಿ ಬುದ್ಧಿ ಹೇಳಿ ವಾಪಸ್ಸು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ,ಭಟ್ಕಳ ಡಿ.ವೈ.ಎಸ್ಪಿ ಬೆಳ್ಳಿಯಪ್ಪ, ಹೊನ್ನಾವರ ಸಿ.ಪಿ.ಐ ಶ್ರೀಧರ ಎಸ್.ಆರ್ ಅವರ ಮಾರ್ಗದರ್ಶನದಲ್ಲಿ ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಕೊಣ್ಣೂರ್ ನೇತೃತ್ವದ ತಂಡ ತನಿಖೆಗೆ ಮುಂದಾಗಿತ್ತು.
ಮಂಕಿಯಿಂದ ಮಹಿಳೆ ನಾಪತ್ತೆಯಾದ ಘಟನೆಯ ಹಿಂದೆಯೂ ಸಾಮಾಜಿಕ ಜಾಲತಾಣದ ಪಾತ್ರ ದೊಡ್ಡದಿದೆ. ಮದುವೆಯಾಗಿ ಮಗು ಇದ್ದರೂ ಪಿಶರ್ ಮ್ಯಾನ್ ಆಗಿರುವ ಗಂಡ 15 -20 ದಿನ ಒಂದೊಂದು ಸಲ ತಿಂಗಳುಗಟ್ಟಲೆ ಕೆಲಸದ ನಿಮಿತ್ತ ಮನೆಗೆ ಬರುತ್ತಿರಲಿಲ್ಲ ಎನ್ನಲಾಗಿದೆ. ಗಂಡನಿಲ್ಲದ ಸಮಯದಲ್ಲಿ ಬೇಸರ ಕಳೆಯಲು ಸಾಮಾಜಿಕ ಜಾಲತಾಣದ ಮೊರೆ ಹೋದಾಕೆಗೆ ಐ.ಎಂ.ಓ ಆಪ್ ನಲ್ಲಿ ಹುಡುಗನೊಬ್ಬನ ಪರಿಚಯವಾಗಿತ್ತು.
ಪರಿಚಯ ಸಂದೇಶ ವಿನಿಮಯದೊಂದಿಗೆ ಸ್ನೇಹವಾಗಿ ಈ ನಿರ್ಧಾರಕ್ಕೆ ಬಂದು ಯಾರಿಗೂ ಹೇಳದೇ ಕೇಳದೇ ಮಗುವನ್ನೂ ಜೊತೆಯಲ್ಲಿ ಕರೆದುಕೊಂಡು ಮುಂಬೈ ಟ್ರೈನ್ ಹತ್ತಿಬಿಟ್ಟಿದ್ದಳು. ಇದೀಗ ಪೋಲಿಸ್ ತನಿಖೆಯಿಂದ ಪತ್ತೆಯಾಗಿ ಪುನಃ ಮನೆ ಸೇರಿದ್ದಾಳೆ. ಕೊನೆಗೂ ನಾಪತ್ತೆ ಪ್ರಕರಣವನ್ನು ಮಂಕಿ ಪೋಲಿಸರು ಭೇದಿಸುವಲ್ಲಿ ಯಶ್ವಸಿಯಾದರು.
ಹೊನ್ನಾವರದಲ್ಲಿ ಹೆಚ್ಚುತ್ತಿರುವ ಮಹಿಳೆ ನಾಪತ್ತೆ ಪ್ರಕರಣ..ಎಲ್ಲದಕ್ಕೂ ಕಾರಣ ಸಾಮಾಜಿಕ ಜಾಲತಾಣ
ತಾಲೂಕಿನಲ್ಲಿ ಇತ್ತೀಚೆಗೆ ಮಹಿಳೆ ನಾಪತ್ತೆ ಅದರಲ್ಲೂ ವಿವಾಹಿತ ಮಹಿಳೆ ನಾಪತ್ತೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ತನಿಖೆಗೆ ಮುಂದಾದಾಗ ಬಹುತೇಕ ಎಲ್ಲಾ ಪ್ರಕರಣಗಳೂ ಒಂದಕ್ಕೊಂದು ಸಾಮ್ಯತೆ ಹೊಂದಿರುವಂತದ್ದೇ ಆಗಿದ್ದು ವಾಟ್ಸಾಪ್, ಪೇಸ್ಬುಕ್, ಟ್ವಿಟರ್, ಐ.ಎಂ.ಓ, ಇನ್ಸ್ಟಾಗ್ರಾಂ ನಂತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರ ಹಿಂಬಾಲಿಸಿ ಹೋಗುತ್ತಿರುವುದು ಮಾರಕವಾಗಿದೆ.
Leave a Comment