ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ 80 ವರ್ಷಗಳಿಂದ ಜೇನುಕೃಷಿಕರಿಗೆ ಸೇವೆ ಸಲ್ಲಿಸುತ್ತಿರುವ ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ದಿನಾಂಕ 31ರಂದು ನಿವೃತ್ತರಾದರು.
ಗಾಂಧೀಜಿ ಪ್ರೇರಣೆಯಂತೆ ಅಹಿಂಸಾತ್ಮಕ ಜೇನುಸಂಗ್ರಹಿಸುವ ಪೆಟ್ಟಿಗೆ ಜೇನುಕೃಷಿ ಮಾಡುವವರ ಅನುಕೂಲಕ್ಕಾಗಿ ಎಸ್.ಕೆ. ಕಲ್ಲಾಪುರ ಧಾರವಾಡ ಎಂಬ ಹಿರಿಯ ನ್ಯಾಯವಾದಿಗಳಿಂದ ಆರಂಭವಾಗಿದ್ದ ಸಂಘ ಅಡಿಕೆ, ತೆಂಗು ಬೆಳೆಗಳ ದರ ಕುಸಿದಾಗ ರೈತರಿಗೆ ಆಧಾರಸ್ತಂಭವಾಗಿ ಜೇನುಕೃಷಿ ಸಹಾಯಮಾಡಿತ್ತು.

ಹೊನ್ನಾವರ ಜೇನುತುಪ್ಪ ಅಂದಿನಿಂದ ಇಂದಿನವರೆಗೆ ಪ್ರಸಿದ್ಧ ಬ್ರಾಂಡ್ ಆಗಿ ದೇಶದಲ್ಲಿ ಗುರುತಿಸಲ್ಪಟ್ಟಿದೆ. ಈ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿ ಸೇರಿ ಮುಖ್ಯಕಾರ್ಯನಿರ್ವಾಹಕನಾಗಿ ನಿವೃತ್ತಿ ಹೊಂದುತ್ತಿರುವ ಶ್ರೀಧರ ಹೆಗಡೆ ಸಂಸ್ಥೆಯನ್ನು ಕಷ್ಟಕಾಲದಲ್ಲಿ ಉಳಿಸಿಕೊಂಡು ಬಂದಿದ್ದಾರೆ.
ಜೇನಿಗೆ ಥಾಯ್ಸ್ಯಾಕ್ಬ್ರೂಡ್ ಎಂಬ ವಿದೇಶಿ ಖಾಯಿಲೆ ತಗುಲಿ ಸರ್ವನಾಶದ ಅಂಚಿನಲ್ಲಿದ್ದಾಗ ರಾಷ್ಟ್ರಮಟ್ಟದ ಟಾಸ್ಕ್ ಪೋರ್ಸ್ ಸದಸ್ಯನಾಗಿ ತನ್ನ ಅನುಭವವನ್ನು ತರಬೇತಿಯನ್ನು ಬಳಸಿಕೊಂಡು ಜೇನುರೋಗ ತಡೆಯುವಲ್ಲಿ ಶ್ರೀಧರ ಹೆಗಡೆ ಮಹತ್ವದ ಪಾತ್ರವಹಿಸಿದ್ದರು.
ಆಧುನಿಕ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪನೆಯನ್ನು ಮಾಡಿದ್ದಲ್ಲದೇ ವಾರ್ಷಿಕ 8ಸಾವಿರ ಜೇನುತುಪ್ಪ ಖರೀದಿ, ಮಾರಾಟದಿಂದ ಸದ್ಯ 40,000 ಕೆಜಿ ತುಪ್ಪ ಖರೀದಿ, ಮಾರಾಟದವರೆಗೆ ಸಂಸ್ಥೆಯನ್ನು ಬೆಳಸಿದ್ದಲ್ಲದೇ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಆಯೋಗಗಳ ಸಹಕಾರದಿಂದ ಸ್ಫೂರ್ತಿ ಯೋಜನೆಯಿಂದ 99.17ಲಕ್ಷ ರೂಪಾಯಿ ಅನುದಾನ ಪಡೆದು ಜೇನುಕೃಷಿ ಮತ್ತು ಸಂಘವನ್ನು ಜಿಲ್ಲೆಯ ಏಕೈಕ ಸಹಕಾರಿ ಜೇನು ಸಂಘವಾಗಿ ಅಭಿವೃದ್ಧಿ ಪಡಿಸಿದ್ದಾರೆ.
Leave a Comment